Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ ಜಿಲ್ಲೆಯಾದ್ಯಂತ ಸಂಭ್ರಮದ ಕ್ರಿಸ್ ಮಸ್ ಆಚರಣೆ

ಜಿಲ್ಲೆಯಾದ್ಯಂತ ಸಂಭ್ರಮದ ಕ್ರಿಸ್ ಮಸ್ ಆಚರಣೆ

ಉಡುಪಿ: ಕೊರೋನಾ ಭೀತಿಯ ನಡುವೆಯೂ ಕ್ರಿಸ್ ಮಸ್ ಹಬ್ಬವನ್ನು ಕ್ರೈಸ್ತ ಬಾಂಧವರು ಜಿಲ್ಲೆಯಾದ್ಯಂತ ಗುರುವಾರ ರಾತ್ರಿ ಭಕ್ತಿ, ಶ್ರದ್ಧೆಯಿಂದ ಸರಳವಾಗಿ ಆಚರಿಸಿದರು.

ಜಿಲ್ಲೆಯ ಎಲ್ಲಾ ಚರ್ಚುಗಳಲ್ಲಿ ಕೋವಿಡ್ ನಿಯಮ ಪಾಲಿಸಿ ವಿಶೇಷ ಪ್ರಾರ್ಥನೆ, ಕ್ರಿಸ್ ಮಸ್ ಗೀತ ಗಾಯನ ನಡೆಸಲಾಯಿತು.

ಉಡುಪಿ ಬಿಷಪ್ ವಂ. ಡಾ| ಜೆರಾಲ್ಡ್ ಐಸಾಕ್ ಲೋಬೊ ಅವರು ಕಲ್ಯಾಣಪುರದ ಮಿಲಾಗ್ರಿಸ್ ಕೆಥೆಡ್ರಲ್ ನಲ್ಲಿ ಬಲಿಪೂಜೆ ಸಲ್ಲಿಸಿ, ಹಬ್ಬದ ಸಂದೇಶ ನೀಡಿದರು. ಚರ್ಚಿನ ಪ್ರಧಾನ ಧರ್ಮಗುರು ವಂ. ವಲೇರಿಯನ್ ಮೆಂಡೋನ್ಸಾ, ಸಹಾಯಕ ಧರ್ಮಗುರು ವಂ ಕೆನ್ಯೂಟ್ ನೊರೊನ್ಹಾ ಹಾಗೂ ಅತಿಥಿ ಧರ್ಮಗುರುಗಳು ಇದ್ದರು.

ಬಲಿಪೂಜೆಗೂ ಮುನ್ನ ಏಸುಸ್ವಾಮಿಯ ಜನ್ಮ ವೃತ್ತಾಂತ ನೆನಪಿಸುವ ಕ್ರಿಸ್ಮಸ್ ಕ್ಯಾರಲ್ ಗೀತೆಯನ್ನು ನಟನೆಯೊಂದಿಗೆ ಪ್ರದರ್ಶಿಸಲಾಯಿತು.

ಕಳೆದ ಸುಮಾರು ಒಂದು ವರ್ಷದಿಂದ ವಿಶ್ವವನ್ನೇ ಕಾಡುತ್ತಿರುವ ಕೊರೊನಾ ಅಮೂಲ್ಯವಾದ ಪಾಠವನ್ನೂ ಕಲಿಸಿದೆ. ಮಾನವರೆಲ್ಲರೂ ಒಂದೇ ಕುಟುಂಬದ ಸದಸ್ಯರು. ಪರಸ್ಪರ ಸೋದರ ಭಾವದಿಂದ ವರ್ತಿಸಬೇಕು. ಕೊರೊನಾದಿಂದ ವಿಮುಕ್ತರಾಗಲು ಎಲ್ಲರೂ ಜೊತೆಗೂಡಿ ಸಹಕರಿಸುವ ಅಗತ್ಯವಿದೆ ಎಂದು ಬಿಷಪ್ ಫಾ| ಲೋಬೊ ಸಂದೇಶದಲ್ಲಿ ತಿಳಿಸಿದರು.

ಕ್ರಿಸ್ ಮಸ್ ಹಬ್ಬ ಪ್ರಯುಕ್ತ ಜಿಲ್ಲೆಯ ಬಹುತೇಕ ಎಲ್ಲಾ ಚರ್ಚುಗಳು ವರ್ಣಮಯ ವಿದ್ಯುತ್ ದೀಪಾಲಂಕಾರ ಹಾಗೂ ಬಗೆಬಗೆಯ ಚಿತ್ತಾಕರ್ಷಕ ನಕ್ಷತ್ರಗಳಿಂದ ಕಂಗೊಳಿಸುತ್ತಿದ್ದವು. ಕೋವಿಡ್ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಚರ್ಚುಗಳಲ್ಲಿ ಸೀಮಿತ ಸಂಖ್ಯೆಯ ಭಕ್ತಾದಿಗಳಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಹೆಚ್ಚಿನ ಚರ್ಚುಗಳಲ್ಲಿ ಬಲಿಪೂಜೆಯನ್ನು ನೇರ ಪ್ರಸಾರದ ಮೂಲಕ ವೀಕ್ಷಿಸಲು ಅವಕಾಶ ನೀಡಲಾಗಿತ್ತು.

ಗುರುವಾರ ರಾತ್ರಿ ಪೂಜೆಯ ವೇಳೆ ಸಿಂಗರಿಸಿಟ್ಟ ಗೋದಲಿಯಲ್ಲಿ ಬಾಲ ಏಸು ಮೂರ್ತಿಯನ್ನಿಟ್ಟು ದೇವರ ಸ್ತುತಿ, ಜೋಗುಳದ ಮೂಲಕ ಭಕ್ತರು ಆರಾಧಿಸಿದರು. ಮೇಣದ ಬತ್ತಿ ಬೆಳಗಿ ಹೂವು, ಸುಗಂಧ ಅರ್ಪಿಸುವ ಮೂಲಕ ಏಸುಸ್ವಾಮಿಯ ಜನನವನ್ನು ಸ್ವಾಗತಿಸಲಾಯಿತು.

ಜಿಲ್ಲೆಯ ಪ್ರಮುಖದ ಚರ್ಚುಗಳಾದ ಶಿರ್ವ ಆರೋಗ್ಯ ಮಾತೆಯ ದೇವಾಲಯದಲ್ಲಿ ಧರ್ಮಗುರು ವಂ. ಡೆನಿಸ್ ಡೇಸಾ, ಉಡುಪಿ ಶೋಕಮಾತಾ ಇಗರ್ಜಿಯಲ್ಲಿ ಧರ್ಮಗುರು ವಂ. ಚಾರ್ಲ್ಸ್ ಮಿನೇಜಸ್, ಕುಂದಾಪುರ ಹೊಲಿ ರೋಸರಿ ಚರ್ಚ್ ನಲ್ಲಿ ವಂ. ಸ್ಟ್ಯಾನಿ ತಾವ್ರೊ, ಕಾರ್ಕಳ ಅತ್ತೂರು ಸಂತ ಲಾರೆನ್ಸ್ ಬಾಸಿಲಿಕಾದಲ್ಲಿ ವಂ. ಜಾರ್ಜ್ ಡಿ’ಸೋಜಾ ನೇತೃತ್ವದಲ್ಲಿ ಕ್ರಿಸ್ ಮಸ್ ಆಚರಣೆ ಮಾಡಲಾಯಿತು.

ಸಾಂಸ್ಕೃತಿಕ ಕಾರ್ಯಕ್ರಮ, ಸಾಂತಾಕ್ಲಾಸ್ ವೇಷ ರದ್ದುಗೊಳಿಸಲಾಗಿತ್ತು. ಹಸ್ತಲಾಘವದ ಮೂಲಕ ಕ್ರಿಸ್ ಮಸ್ ಹಬ್ಬದ ಶುಭಾಶಯ ವಿನಿಮಯಕ್ಕೂ ಬ್ರೇಕ್ ಹಾಕಲಾಗಿತ್ತು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!