Saturday, July 2, 2022
Home ಸಮಾಚಾರ ರಾಷ್ಟ್ರೀಯ ವಾರ್ತೆ ನೂತನ ಸಂಸತ್ ಭವನಕ್ಕೆ ಮೋದಿ ಶಿಲಾನ್ಯಾಸ

ನೂತನ ಸಂಸತ್ ಭವನಕ್ಕೆ ಮೋದಿ ಶಿಲಾನ್ಯಾಸ

ನವದೆಹಲಿ: ನವದೆಹಲಿಯಲ್ಲಿ ನೂತನವಾಗಿ ನಿರ್ಮಾಣ ಮಾಡುತ್ತಿರುವ ಸಂಸತ್ ಭವನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಗುರುವಾರ ಶಾಸ್ತ್ರೋಕ್ತವಾಗಿ ಭೂಮಿಪೂಜೆ ನೆರವೇರಿಸಿದರು.ಕರ್ನಾಟಕದ ಚಿಕ್ಕಮಗಳೂರಿನ ಶೃಂಗೇರಿ ಮಠದ 6 ಮಂದಿ ಅರ್ಚಕರ ವೇದಘೋಷ ಸಹಿತ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಶಿಲಾನ್ಯಾಸ ನೆರವೇರಿಸಲಾಯಿತು.ನಿರ್ವಿಘ್ನವಾಗಿ ನಿಗದಿತ ಸಮಯದಲ್ಲಿ ಸಂಸತ್ ಭವನದ ಕಾಮಗಾರಿ ಪೂರ್ಣಗೊಳ್ಳಲಿ ಎಂದು ಪ್ರಧಾನಿ ದೇವರಲ್ಲಿ ಪ್ರಾರ್ಥಿಸಿದರು.

ನೂತನವಾಗಿ ನಿರ್ಮಾಣಗೊಳ್ಳಲಿರುವ ಪಾರ್ಲಿಮೆಂಟ್ ಭವನ, ಈಗಿರುವ ಸಂಸತ್ ಭವನಕ್ಕಿಂತ 17 ಪಟ್ಟು ದೊಡ್ಡದಿರಲಿದೆ. 971 ಕೋ. ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ನಾಲ್ಕು ಅಂತಸ್ತಿನ ನೂತನ ಸಂಸತ್ ಭವನ ಪಾರಂಪರಿಕ ಶೈಲಿಯಲ್ಲಿ ಅತ್ಯಾಕರ್ಷಕವಾಗಿ ಮೂಡಿಬರಲಿದೆ.

ಶೃಂಗೇರಿ ಜಗದ್ಗುರುಗಳ ಆಶೀರ್ವಾದ
ಶಂಕುಸ್ಥಾಪನೆಗೆ ದಿನಾಂಕ ನಿಗದಿಯಾದ ಕೂಡಲೇ ಪ್ರಧಾನಿ ನರೇಂದ್ರ ಮೋದಿ ಧಾರ್ಮಿಕ ಕಾರ್ಯಕ್ರಮಗಳು ವಿಧಿವತ್ತಾಗಿ ನಡೆಯಬೇಕು. ಹಾಗಾಗಿ ಒಳ್ಳೆಯ ಪುರೋಹಿತರನ್ನು ಕರೆದುಕೊಂಡು ಬರುವಂತೆ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಅವರಿಗೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಶೃಂಗೇರಿ ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳವರ ಸಲಹೆ ಕೇಳಿದ ಜೋಶಿ, ಪ್ರಧಾನಿ ಆಶಯವನ್ನು ವಿವರಿಸಿದರು.

‘ನಮ್ಮ ಮಠದ ಉತ್ತಮ ಪುರೋಹಿತರನ್ನು ನಿಮ್ಮಲ್ಲಿಗೆ ಕಳುಹಿಸಿಕೊಡುತ್ತೇವೆ’ ಎಂದು ಒಪ್ಪಿಕೊಂಡ ಶೃಂಗೇರಿ ಶ್ರೀಗಳವರು, ಮಠದ ಆಸ್ಥಾನ ಪುರೋಹಿತರಾದ ಟಿ. ವಿ. ಶಿವಕುಮಾರ ಶರ್ಮ, ಕೆ. ಎಸ್. ಲಕ್ಷ್ಮೀನಾರಾಯಣ ಸೋಮಯಾಜಿ, ಕೆ. ಎಸ್. ಗಣೇಶ ಸೋಮಯಾಜಿ ಮತ್ತು ಸಿ. ನಾಗರಾಜ ಅಡಿಗ ಅವರನ್ನು ಕಳಿಸಿದ್ದರು. ಅವರೊಂದಿಗೆ ದೆಹಲಿಯ ಶೃಂಗೇರಿ ಶಾಖಾ ಮಠದ ರಾಘವೇಂದ್ರ ಭಟ್ಟ ಮತ್ತು ಋಷ್ಯಶೃಂಗ ಧಾರ್ಮಿಕ ಪೂಜಾ ಕೈಂಕರ್ಯದಲ್ಲಿ ಭಾಗಿಯಾದರು.

ಶೃಂಗೇರಿಯ ಶಂಕು, ನವರತ್ನ ಪೀಠ
ಸಂಸತ್ ಭವನದ ಶಿಲಾನ್ಯಾಸದ ಭಾಗವಾಗಿ ಮೊದಲಿಗೆ ಗುರು ಪ್ರಾರ್ಥನೆ, ಗಣಪತಿ ಪೂಜೆ, ಪುಣ್ಯಾಹ ವಾಚನ, ಪೂಜೆ, ಅನಂತ ಪೂಜೆ, ವರಾಹ ಪೂಜೆ ಮತ್ತು ಭುವನೇಶ್ವರಿ ಪೂಜೆ ನಡೆಸಲಾಯಿತು.

ಶಿಲಾನ್ಯಾಸ ವೇಳೆ ಶಂಕು ಸ್ಥಾಪನೆ ಮಾಡುವ ಸಲುವಾಗಿಯೇ ಶಂಕು ಮತ್ತು ನವರತ್ನ ಪೀಠ ವನ್ನು ತರಲಾಗಿದೆ. ಶೃಂಗೇರಿ ಜಗದ್ಗುರುಗಳಾದ ಶ್ರೀ ಭಾರತೀತೀರ್ಥ ಮಹಾಸನ್ನಿಧಾನಂಗಳವರು ಮತ್ತು ಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರು ಆಶೀರ್ವದಿಸಿ ಇವೆರಡನ್ನೂ ಕಳಿಸಿಕೊಟ್ಟಿದ್ದರು. ಶಂಕು, ಮರದಿಂದ ಮಾಡಿರುವ ವಿಶೇಷ ಆಕೃತಿ. ಅದಕ್ಕೆ 8 ದಿಕ್ಕುಗಳಲ್ಲಿ ಅಷ್ಟ ಪಟ್ಟಿ ಮಾಡಲಾಗಿರುತ್ತದೆ. ಶಂಕುವಿಗೆ ಪೂಜೆ ಮಾಡಿ, ಶಂಕುಸ್ಥಾಪನೆ ಸಂದರ್ಭದಲ್ಲಿ ಅದನ್ನು ಸ್ಥಾಪಿಸಲಾಯಿತು. ಬಳಿಕ ನವರತ್ನಗಳನ್ನು ನ್ಯಾಸ ಮಾಡಲು ನವರತ್ನ ಪೀಠವನ್ನೂ ತರಲಾಗಿದೆ. ಪೀಠದಲ್ಲಿ ಸೂರ್ಯನಿಗೆ ಪ್ರಿಯವಾದ ಮಾಣಿಕ್ಯ, ಚಂದ್ರನಿಗೆ ಪ್ರಿಯವಾದ ಮುತ್ತಿನ ಹರಳು, ಮಂಗಳನಿಗೆ ಹವಳ, ಬುಧನಿಗೆ ಹಸಿರುಕಲ್ಲು, ಗುರುವಿಗೆ ಪುಷ್ಯರಾಗ ರತ್ನ, ಶುಕ್ರನಿಗೆ ವಜ್ರ, ಶನಿಗೆ ನೀಲಮಣಿ, ರಾಹುವಿಗೆ ಗೋಮೇಧಕ, ಕೇತುವಿಗೆ ವೈಢೂರ್ಯವನ್ನಿಟ್ಟು ಪೂಜೆ ಮಾಡಲಾಯಿತು. ನಂತರ ಈ ಪೀಠವನ್ನೂ ಸ್ಥಳದಲ್ಲಿ ಸ್ಥಾಪಿಸಲಾಯಿತು. ಜೊತೆಗೆ ಶಿಲಾನ್ಯಾಸಕ್ಕಾಗಿ ಬೆಳ್ಳಿಯ ಇಟ್ಟಿಗೆಯೊಂದನ್ನು ತಯಾರಿಸಲಾಗಿದ್ದು, ಅದನ್ನು ಪ್ರಧಾನಿ ಮೋದಿ ಮಧ್ಯಾಹ್ನದ ಸುಮುಹೂರ್ತದಲ್ಲಿ ಶಂಕುಸ್ಥಾಪನೆ ಸ್ಥಳದಲ್ಲಿರಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!