Monday, July 4, 2022
Home ಸಮಾಚಾರ ಜಿಲ್ಲಾ ಸುದ್ದಿ ಸಂವಿಧಾನ ದತ್ತ ಪರಮಾಧಿಕಾರದ ಸದ್ಬಳಕೆಯಿಂದ ಶ್ರೇಯಸ್ಸು

ಸಂವಿಧಾನ ದತ್ತ ಪರಮಾಧಿಕಾರದ ಸದ್ಬಳಕೆಯಿಂದ ಶ್ರೇಯಸ್ಸು

ಉಡುಪಿ: ಎಲ್ಲ ನಾಗರಿಕರಿಗೂ ಸಮಾನ ಹಕ್ಕು ಮತ್ತು ಮೂಲಭೂತ ನಿಯಮ ಪಾಲನೆಗೆ ಸ್ಥಾಪಿತವಾಗಿರುವ ಸಂವಿಧಾನ ನೀಡಿರುವ ಪರಮಾಧಿಕಾರವನ್ನು ವಿವೇಚನೆಯಿಂದ ಬಳಸಿದಲ್ಲಿ ಶ್ರೇಯಸ್ಸು ಲಭಿಸುತ್ತದೆ. ಆಗ ಮಾತ್ರ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಗಣರಾಜ್ಯ ದಿನಾಚರಣೆಗೆ ನಿಜವಾದ ಅರ್ಥ ಬರುತ್ತದೆ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ ಸಚಿವ ಎಸ್. ಅಂಗಾರ ಹೇಳಿದರು.

ಅಜ್ಜರಕಾಡು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ಗಣರಾಜ್ಯೋತ್ಸವ ಸಂದರ್ಭದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಸುದೀರ್ಘ ಅಧ್ಯಯನದ ಬಳಿಕ ರೂಪಿಸಲಾದ ಭಾರತದ ಸಂವಿಧಾನ ವಿಶ್ವಕ್ಕೇ ಮಾದರಿ. ಡಾ| ಅಂಬೇಡ್ಕರ್ ನೇತೃತ್ವದ ಸಮಿತಿ ನೀಡಿದ ಇಷ್ಟು ದೊಡ್ಡ ಲಿಖಿತ ಸಂವಿಧಾನ ವಿಶ್ವದ ಯಾವುದೇ ದೇಶ ಹೊಂದಿಲ್ಲ. ಅಂಥ ಸಂವಿಧಾನದಲ್ಲಿ ನಿರೂಪಿಸಿದಂತೆ ದೇಶವನ್ನು ಸರ್ವತಂತ್ರ ಸ್ವತಂತ್ರ ಗಣರಾಜ್ಯವಾಗಿ ಘೋಷಿಸಿ, ಎಲ್ಲ ಭಾರತೀಯರಿಗೆ ಸಾಮಾಜಿಕ, ಆರ್ಥಿಕ, ಧಾರ್ಮಿಕ ಮತ್ತು ರಾಜಕೀಯ ಸ್ವಾತಂತ್ರ್ಯದ ಜೊತೆಗೆ ಚಿಂತನೆ, ಅಭಿವ್ಯಕ್ತಿ, ಸ್ಥಾನಮಾನ ಮತ್ತು ಅವಕಾಶಗಳಲ್ಲಿ ಸಮಾನತೆ ನೀಡಲಾಗಿದೆ. ಆ ಮೂಲಕ ಭ್ರಾತೃತ್ವ ಭಾವ ರೂಪಿಸುವುದೇ ಆಶಯವಾಗಿದೆ ಎಂದರು.

ದೇಶದ ಕಟ್ಟಕಡೆಯ ವ್ಯಕ್ತಿಯೂ ಸ್ವಾಭಿಮಾನಿ ಮತ್ತು ಸ್ವಾವಲಂಬಿಯಾಗಿ ಬಾಳಬೇಕೆಂಬ ಆಶಯದೊಂದಿಗೆ ಸರಕಾರಗಳು ವಿವಿಧ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಅಭಿವೃದ್ಧಿ ಸಾಧಿಸಿವೆ. ಅನೇಕ ಜನಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಿವೆ.

ಅದರಂತೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕೋವಿಡ್ ಸಂಕಷ್ಟ ಪರಿಸ್ಥಿತಿಯಲ್ಲಿಯೂ ಅನೇಕ ಜನಪರ ಕಾರ್ಯಕ್ರಮ ರೂಪಿಸಿವೆ. ಕೋವಿಡ್ 19 ನಿಯಂತ್ರಣಕ್ಕಾಗಿ ಪ್ರಧಾನಿ ಮೋದಿ ಚಾಲನೆ ನೀಡಿದ ಲಸಿಕೆ ಕಾರ್ಯಕ್ರಮವನ್ನು ಜಿಲ್ಲೆಯಲ್ಲೂ ಅನುಷ್ಠಾನಗೊಳಿಸಲಾಗಿದ್ದು, ಪ್ರಸ್ತುತ ಸರಬರಾಜಾದ 23,900 ಡೋಸ್ ಗಳ ಪೈಕಿ ಪ್ರಥಮ ಹಂತದಲ್ಲಿ 22,103 ಸರಕಾರಿ ಮತ್ತು ಖಾಸಗಿ ಆರೋಗ್ಯ ಕಾರ್ಯಕರ್ತರನ್ನು ಗುರುತಿಸಲಾಗಿದ್ದು, ಕಳೆದ ಜ. 23ರ ವರೆಗೆ ಒಟ್ಟು 4,816 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗಿದೆ. ಈ ತಿಂಗಳಾಂತ್ಯದೊಳಗೆ ಉಳಿದ ಆರೋಗ್ಯ ಕಾರ್ಯಕರ್ತರು ಮತ್ತು ಸಮಾಜದ 50 ವರ್ಷ ಮೇಲ್ಪಟ್ಟವರಿಗೆ ಹಾಗೂ 50 ವರ್ಷಕ್ಕಿಂತ ಕೆಳಗಿನವರ ಪೈಕಿ ಇತರ ಕಾಯಿಲೆ ಉಳ್ಳವರಿಗೂ ಲಸಿಕೆ ನೀಡಲಾಗುವುದು ಎಂದರು.

ಮೀನುಗಾರಿಕೆ ಇಲಾಖೆಯೂ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಅನೇಕ ಕಾರ್ಯಕ್ರಮ ರೂಪಿಸಲಾಗಿದೆ. ಪ್ರವಾಸೋದ್ಯಮ ವೃದ್ಧಿಗೆ ಆದ್ಯತೆ ನೀಡಲಾಗಿದೆ. ಆ ಮೂಲಕ ಸ್ಥಳೀಯರಿಗೆ ಉದ್ಯೋಗಾವಕಾಶ ವೃದ್ಧಿಗೂ ಯೋಜನೆ ರೂಪಿಸಲಾಗಿದೆ ಎಂದರು.

ಭಾರತೀಯರಾದ ನಾವು ನಮ್ಮ ಸಂಸ್ಕೃತಿ, ಪರಂಪರೆ, ಇತಿಹಾಸ, ತತ್ವಜ್ಞಾನ ಹಾಗೂ ಹಿರಿಯರ ಜೀವನಾದರ್ಶಗಳ ಹಿರಿಮೆಯನ್ನು ಗೌರವದಿಂದ ಕಂಡು, ಭವ್ಯ ಭಾರತದ ಪ್ರಗತಿಗಾಗಿ ಶ್ರಮಿಸಬೇಕಾಗಿದೆ ಎಂದರು.

ಶಾಸಕ ರಘುಪತಿ ಭಟ್, ಜಿ. ಪಂ. ಅಧ್ಯಕ್ಷ ದಿನಕರಬಾಬು, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ನಗರಸಭಾಧ್ಯಕ್ಷೆ ಸುಮಿತ್ರಾ ನಾಯಕ್, ಉಡುಪಿ ತಾ. ಪಂ. ಅಧ್ಯಕ್ಷೆ ಸಂಧ್ಯಾ ಕಾಮತ್, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ರಾಘವೇಂದ್ರ ಕಿಣಿ, ಜಿಲ್ಲಾಧಿಕಾರಿ ಜಿ. ಜಗದೀಶ, ಎಸ್ಪಿ ವಿಷ್ಣುವರ್ಧನ್, ಜಿ. ಪಂ. ಸಿಇಓ ಡಾ. ನವೀನ ಭಟ್, ಕರಾವಳಿ ಕಾವಲು ಪಡೆ ಎಸ್.ಪಿ ಚೇತನ್ ಇದ್ದರು.

ಈ ಸಂದರ್ಭದಲ್ಲಿ ಸಾಧಕ ಕೃಷಿಕರು, ಕಳೆದ ಸಾಲಿನ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಶೇ. 100 ಫಲಿತಾಂಶ ದಾಖಲಿಸಿದ ಸರಕಾರಿ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜು ಮುಖ್ಯಸ್ಥರು ಹಾಗೂ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಜಿಲ್ಲೆಯಲ್ಲಿ ಅಗ್ರಸ್ಥಾನ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು ಸ್ವಾಗತಿಸಿದರು.

ಅದಕ್ಕೂ ಪೂರ್ವದಲ್ಲಿ ಪೊಲೀಸ್, ಗೃಹರಕ್ಷಕದಳ, ಸ್ಕೌಟ್ಸ್ ಗೈಡ್ಸ್, ಎನ್.ಸಿಸಿ ಮತ್ತು ಎನ್.ಎಸ್.ಎಸ್ ವಿದ್ಯಾರ್ಥಿಗಳಿಂದ ಗೌರವ ರಕ್ಷೆ ನಡೆಯಿತು. ಸಚಿವರು ಪಥ ಸಂಚಲನ ವೀಕ್ಷಿಸಿದರು.

ಬಳಿಕ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!