Monday, July 4, 2022
Home ಸಮಾಚಾರ ಜಿಲ್ಲಾ ಸುದ್ದಿ ಸಂಘಟನೆಯೊಂದಿಗೆ ಪ್ರಗತಿ: ಸಚಿವ ಅಂಗಾರ ಪ್ರತಿಪಾದನೆ

ಸಂಘಟನೆಯೊಂದಿಗೆ ಪ್ರಗತಿ: ಸಚಿವ ಅಂಗಾರ ಪ್ರತಿಪಾದನೆ

ಉಡುಪಿ: ಲಭಿಸಿರುವ ಅಧಿಕಾರವನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಸರ್ಕಾರದ ಯೋಜನೆಗಳನ್ನು ಅರ್ಹರಿಗೆ ತಲುಪಿಸುವ ಜೊತೆ ಜೊತೆಗೇ ಸಂಘಟನೆಗೂ ಆದ್ಯತೆ ನೀಡಬೇಕು ಎಂದು ಮೀನುಗಾರಿಕೆ ಸಚಿವ ಎಸ್. ಅಂಗಾರ ಹೇಳಿದರು.

ಸಚಿವನಾಗಿ ಮಂಗಳವಾರ ಜಿಲ್ಲೆಗೆ ಪ್ರಥಮ ಬಾರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಏರ್ಪಡಿಸಿದ್ದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

1994ರಿಂದ ಶಾಸಕನಾಗಿರುವ ತಾನು ಎಂದೂ ಅಧಿಕಾರದ ಹಿಂದೆ ಹೋಗಿಲ್ಲ. ಜಾತಿ, ಧರ್ಮ ನೋಡದೇ ಜನಸೇವೆಯಲ್ಲಿ ತೊಡಗಿಕೊಂಡ ತಾನು, ಜನತೆಯ ಆಶಯ ಶ್ರೇಯಸ್ಸಿಗೆ ಪೂರಕ ಎಂದು ಭಾವಿಸಿರುವುದಾಗಿ ತಿಳಿಸಿದರು.

ಅತ್ಯಂತ ಕಡಿಮೆ ವೆಚ್ಚದಲ್ಲಿ ಚುನಾವಣೆ ಎದುರಿಸಬಹುದು ಎಂಬುದನ್ನು ಅಂದಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಎಲ್. ಕೆ. ಅಡ್ವಾಣಿ ಮೂಲಕ ಚುನಾವಣಾ ಆಯೋಗಕ್ಕೆ ತಿಳಿಸಿದ್ದ ತಾನು, ಅಂದು ಕೇವಲ 30 ಸಾವಿರ ರೂ.ಗಳನ್ನು ಮಾತ್ರ ಚುನಾವಣೆಗಾಗಿ ಖರ್ಚು ಮಾಡಿ ಗೆದ್ದಿರುದನ್ನು ನೆನಪಿಸಕೊಂಡರು. ಅದಕ್ಕೆ ಕಾರಣ ಲಾಲಸೆ ಇಲ್ಲದ ಕಾರ್ಯಕರ್ತರು ಎಂದೂ ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ ನಾಯಕ್ ಸಚಿವರನ್ನು ಸನ್ಮಾನಿಸಿದರು.

ಶಾಸಕರಾದ ರಘುಪತಿ ಭಟ್ ಮತ್ತು ಲಾಲಾಜಿ ಮೆಂಡನ್, ನಗರಸಭಾಧ್ಯಕ್ಷೆ ಸುಮಿತ್ರಾ ನಾಯಕ್, ಜಿ. ಪಂ. ಅಧ್ಯಕ್ಷ ದಿನಕರಬಾಬು, ಉಪಾಧ್ಯಕ್ಷೆ ಶೀಲಾ ಶೆಟ್ಟಿ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಕೆ. ರಾಘವೇಂದ್ರ ಕಿಣಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉಡುಪಿ ತಾ. ಪಂ. ಅಧ್ಯಕ್ಷೆ ಸಂಧ್ಯಾ ನಾಯಕ್, ಮೀನುಗಾರಿಕೆ ಫೆಡರೇಶನ್ ಅಧ್ಯಕ್ಷ ಯಶಪಾಲ ಸುವರ್ಣ, ಪಕ್ಷ ಪ್ರಮುಖರಾದ ಉದಯಕುಮಾರ್ ಶೆಟ್ಟಿ, ಮಹೇಶ ಠಾಕೂರ್, ಮನೋಹರ ಕಲ್ಮಾಡಿ, ಜಿ. ಪಂ. ಸದಸ್ಯರಾದ ಶಿಲ್ಪಾ ಸುವರ್ಣ ಮತ್ತು ಗೀತಾಂಜಲಿ ಸುವರ್ಣ, ಶ್ರೀಕಾಂತ ನಾಯಕ್ ಮೊದಲಾದವರಿದ್ದರು.

ಉಡುಪಿ ತಾ. ಪಂ. ಮಾಜಿ ಅಧ್ಯಕ್ಷೆ ನಳಿನಿ ಪ್ರದೀಪ ರಾವ್ ಸ್ವಾಗತಿಸಿ, ಸದಾನಂದ ಉಪ್ಪಿನಕುದ್ರು ನಿರೂಪಿಸಿದರು. ಸುರೇಂದ್ರ ಪಣಿಯೂರು ವಂದಿಸಿದರು.

 

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!