ಉಡುಪಿ: ಇಹಲೋಕ ತ್ಯಜಿಸಿದ ಪದ್ಮಶ್ರೀ ಡಾ| ಬನ್ನಂಜೆ ಗೋವಿಂದಾಚಾರ್ಯ ಅವರ ಅಂತ್ಯಕ್ರಿಯೆ ಸಕಲ ಸರಕಾರಿ ಗೌರವಗಳೊಂದಿಗೆ ಬನ್ನಂಜೆಯ ಅವರ ನಿವಾಸ ಈಶಾವಾಸ್ಯಂ ಬಳಿಯ ತೋಟದಲ್ಲಿ ನಡೆಯಿತು.
ಜಿಲ್ಲಾಧಿಕಾರಿ ಜಿ. ಜಗದೀಶ ಅವರು ಸರಕಾರದ ಪರವಾಗಿ ಬನ್ನಂಜೆ ಪಾರ್ಥಿವ ಶರೀರಕ್ಕೆ ರಾಷ್ಟ್ರಧ್ವಜ ಸಮರ್ಪಿಸಿ ಅಂತಿಮ ನಮನ ಸಲ್ಲಿಸಿದರು. ಪೊಲೀಸರು ಗೌರವಾರ್ಥ ಮೂರು ಸುತ್ತಿನ ಗುಂಡು ಹಾರಿಸಿದರು. ಬಳಿಕ
ಚರಮಗೀತೆಯನ್ನು ಪೊಲೀಸ್ ಬ್ಯಾಂಡ್ ಮೂಲಕ ನುಡಿಸಲಾಯಿತು.
ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಬನ್ನಂಜೆಯವರ ಅಭಿಮಾನಿಗಳು ಹಾಗೂ ಬಂಧುಗಳಲ್ಲಿ ದುಃಖ ಮಡುಗಟ್ಟಿತ್ತು. ನೀರವ ಮೌನ ಆವರಿಸಿತ್ತು.
ಶಾಸಕ ರಘುಪತಿ ಭಟ್, ದ.ಕ. ಸಂಸದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ರಾಘವೇಂದ್ರ ಕಿಣಿ,
ಅಂಬಲಪಾಡಿ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ನಾಡೋಜ ಡಾ| ಜಿ. ಶಂಕರ್, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ ನಾಯಕ್, ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಉದಯಕುಮಾರ್ ಶೆಟ್ಟಿ, ದ.ಕ. ಕಸಾಪ
ಅಧ್ಯಕ್ಷ ಪ್ರದೀಪಕುಮಾರ್ ಕಲ್ಕೂರ, ಯಕ್ಷಗಾನ ಕಲಾರಂಗ ಅಧ್ಯಕ್ಷ ಗಂಗಾಧರ ರಾವ್, ಮಾಜಿ ಅಧ್ಯಕ್ಷ ಕೆ. ಗಣೇಶ ರಾವ್, ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ. ಎಂ. ಎಲ್. ಸಾಮಗ, ಆರ್.ಆರ್.ಸಿ ಮಾಜಿ ನಿರ್ದೇಶಕ ಹೆರಂಜೆ ಕೃಷ್ಣ ಭಟ್, ಜ್ಯೋತಿಷಿ ಕಬಿಯಾಡಿ ಜಯರಾಮ ಆಚಾರ್ಯ, ಭಾಸ್ಕರ ರಾವ್ ಕಿದಿಯೂರು, ಎಸ್.ಪಿ.
ವಿಷ್ಣುವರ್ಧನ್, ತಹಶೀಲ್ದಾರ್ ಪ್ರದೀಪ ಕುರ್ಡೇಕರ್, ನಗರಸಭೆ ಪೌರಾಯುಕ್ತ ಉದಯಕುಮಾರ್ ಶೆಟ್ಟಿ, ಬಾಲಾಜಿ ರಾಘವೇಂದ್ರ ಆಚಾರ್ಯ ಮೊದಲಾದವರು ಅಂತಿಮ ನಮನ ಸಲ್ಲಿಸಿದರು.
ಡಾ| ವೀಣಾ ಬನ್ನಂಜೆ ಸಹಿತ ಗೋವಿಂದಾಚಾರ್ಯರ ನಾಲ್ವರು ಪುತ್ರಿಯರು, ಬನ್ನಂಜೆ ಸಹೋದರ ರಾಮಾಚಾರ್ಯ ಅವರ ಪುತ್ರ ಸರ್ವಜ್ಞ ಆಚಾರ್ಯ ಮೊದಲಾದವರು ಇದ್ದರು.
ಬಳಿಕ ಸ್ವಲ್ಪ ಹೊತ್ತು ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಲಾಯಿತು.
ಧಾರ್ಮಿಕ ವಿಧಿ ವಿಧಾನ ನಡೆದ ಬಳಿಕ ಬನ್ನಂಜೆ ಪುತ್ರ ವಿನಯಭೂಷಣ ಆಚಾರ್ಯ ಅಗ್ನಿಸ್ಪರ್ಶ ಮಾಡಿದರು.
ಅದಕ್ಕೂ ಮುನ್ನ ನುಡಿನಮನ ಸಲ್ಲಿಸಿದ ಜಿ. ವಾಸುದೇವ ಭಟ್, ಅಸಾಮಾನ್ಯ ವಿದ್ವಾಂಸರಾಗಿದ್ದ ಬನ್ನಂಜೆ ನಿಧನದಿಂದ ವಿದ್ವತ್ ವಲಯದ ಅಪೂರ್ವ ಕೊಂಡಿ ಕಳಚಿದೆ ಎಂದು ಖಿನ್ನವದನರಾಗಿ ನುಡಿದರು.