Monday, July 4, 2022
Home ಸಮಾಚಾರ ರಾಷ್ಟ್ರೀಯ ವಾರ್ತೆ `ನಿರ್ದಾಕ್ಷಿಣ್ಯವಾಗಿ ಸತ್ಯ ಹೇಳುವವರ ಅಗತ್ಯವಿದೆ'

`ನಿರ್ದಾಕ್ಷಿಣ್ಯವಾಗಿ ಸತ್ಯ ಹೇಳುವವರ ಅಗತ್ಯವಿದೆ’

ಉಡುಪಿ: ಭ್ರಮೆ ಮತ್ತು ಸುಳ್ಳಿನಿಂದ ಅನರ್ಥ ಎಂಬುದಾಗಿ ಆಚಾರ್ಯ ಮಧ್ವರು ಹೇಳಿದ್ದು, ಸತ್ಯವನ್ನು ನಿರ್ದಾಕ್ಷಿಣ್ಯವಾಗಿ ಹೇಳುವುದು ಅತೀ ಅಗತ್ಯ. ಹಾಗೆ ಹೇಳುವವರು ಇಂದಿನ ಅಗತ್ಯ ಎಂದು ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಪ್ರತಿಪಾದಿಸಿದರು.

ಡಾ| ಪಾದೂರು ಗುರುರಾಜ ಭಟ್ ಮೆಮೋರಿಯಲ್ ಟ್ರಸ್ಟ್ ಆಶ್ರಯದಲ್ಲಿ ಭಾನುವಾರ ಇಲ್ಲಿನ ವಿದ್ಯೋದಯ ಪಬ್ಲಿಕ್ ಸ್ಕೂಲ್ ಸಭಾಂಗಣದಲ್ಲಿ ಖ್ಯಾತ ಪುರಾತತ್ವ ಶಾಸ್ತ್ರಜ್ಞ ಪದ್ಮಶ್ರೀ ಡಾ| ಕೆ. ಕೆ. ಮುಹಮ್ಮದ್ ಮಂಡಿಸಿದ ಅಯೋಧ್ಯೆ ಉತ್ಖನನ ಹಾಗೂ ಮಧ್ಯಪ್ರದೇಶ ಮತ್ತು ಜಾರ್ಖಂಡ್ ಉತ್ಖನನ ವಿಷಯ ಕುರಿತ ಉಪನ್ಯಾಸ ಉದ್ಘಾಟಿಸಿ ಮಾತನಾಡಿದರು.

ಭ್ರಮೆ, ಆಗ್ರಹ, ಸ್ವಾರ್ಥಪರತೆಯನ್ನು ಬದಿಗಿಟ್ಟು ಐತಿಹಾಸಿಕ ಸತ್ಯವನ್ನು ಬಹಿರಂಗಪಡಿಸಿದ ಪರಿಣಾಮ ಅಯೋಧ್ಯೆಯ ಕುರಿತು ತೀರ್ಪು ಬರುವಲ್ಲಿ ಪೂರಕವಾಯಿತು. ಅಂಥ ತಥ್ಯ ವಿಚಾರ ಬಹಿರಂಗಪಡಿಸಿದವರಲ್ಲಿ ಡಾ| ಮುಹಮ್ಮದ್ ಕೂಡಾ ಓರ್ವರು. ಯಾವುದೇ ಪೂರ್ವಾಗ್ರಹವಿಲ್ಲದೆ ಸತ್ಯ ವಿಚಾರವನ್ನು ಅವರು ಬಹಿರಂಗಪಡಿಸಿದರು ಎಂದರು.

ಮುಸಲ್ಮಾನರಾದರೂ ವ್ಯಕ್ತಿತ್ವದಲ್ಲಿ ಭಾರತೀಯರಾದ ಮುಹಮ್ಮದ್ ಅವರನ್ನು ಗೌರವಿಸುತ್ತಿರುವುದು ಶ್ಲಾಘನೀಯ ಎಂದರು.

ಹಿಂದೂ ದೇವಾಲಯಗಳ ಅವಶೇಷ
ಅಯೋಧ್ಯೆ ಉತ್ಖನನ ಬಗ್ಗೆ ಮಾತನಾಡಿದ ಡಾ| ಮುಹಮ್ಮದ್, ದೆಹಲಿ ಪರಿಸರದಲ್ಲಿ ನಡೆಸಿದ್ದ ಉತ್ಖನನಗಳಿಂದ ಮಹಾಭಾರತದ ಯುದ್ಧ ಸನ್ನಿವೇಶಗಳು, ಪಂಚ ಗ್ರಾಮಗಳು, ಆ ಕಾಲದಲ್ಲಿ ಬಳಸುತ್ತಿದ್ದ ಆಯುಧಗಳು ಮತ್ತು ರಥಗಳು ಇತ್ಯಾದಿ ಲಭಿಸಿದ್ದು, ಅವೆಲ್ಲವೂ ತಾಮ್ರ ಯುಗಕ್ಕೆ ಸೇರಿದವುಗಳಾಗಿವೆ ಎಂಬುದು ತಿಳಿದುಬಂತು. ಉತ್ಖನನಗಳಲ್ಲಿ ಲಭಿಸಿದ ಪರಿಕರಗಳ ಪ್ರಕಾರ ಕ್ರಿ. ಪೂ. 1200 ವರ್ಷಗಳಿಗಿಂತಲೂ ಹಿಂದೆ ಮಹಾಭಾರತ ಯುದ್ಧ ನಡೆದಿರುವುದು ದೃಢವಾಯಿತು ಎಂದರು.

ಅದಕ್ಕೂ ಪೂರ್ವದಲ್ಲಿ ರಾಮಾಯಣ ಸಂಭವಿಸಿದ್ದು, ರಾಮಾಯಣ ಕಾಲದ ರಥಗಳು, ಕಟ್ಟಡಗಳ ಅವಶೇಷಗಳು, ರಾಮಾಯಣ ಸನ್ನಿವೇಶದ ಚಿತ್ರಗಳು ಇತ್ಯಾದಿ ಲಭಿಸಿವೆ. ಅಯೋಧ್ಯೆ ಉತ್ಖನನ ನಡೆಸಿದಾಗ ಮಸೀದಿಯ ಕಂಬಗಳು ಇತ್ಯಾದಿಗಳನ್ನು ಅವಲೋಕಿಸಿದಾಗ ಹಿಂದೂ ಧರ್ಮದ ಕುರುಹಾದ ಪೂರ್ಣಕುಂಭ, ಕೀರ್ತಿಮುಖ, ಪ್ರನಾಳ ಇತ್ಯಾದಿಗಳು ಕಂಡುಬಂತು. ಮೃದಂಗ ನುಡಿಸುವ ಮಹಿಳೆ, ಪೂರ್ಣಕುಂಭ ಹಿಡಿದ ನಾರಿ ಇತ್ಯಾದಿಗಳು ಮಸೀದಿಯಲ್ಲಿ ಕಂಡುಬರಲು ಸಾಧ್ಯವೇ ಇಲ್ಲ. ಈ ಹಿನ್ನೆಲೆಯಲ್ಲಿ ಬಾಬರಿ ಮಸೀದಿ ಈಚೆಗೆ ನಿರ್ಮಾಣ ಮಾಡಲ್ಪಟ್ಟದ್ದು ಎಂಬ ನಿರ್ಣಯಕ್ಕೆ ಬರಲಾಯಿತು.

ಮಸೀದಿಯ ಅಡಿಭಾಗ ಉತ್ಖನನ ನಡೆಸಿದಾದ ವಿಷ್ಣು ದೇವಾಲಯದ ಕುರುಹು ಕಂಡುಬಂತು ಎಂದರು.

ಕುತುಬ್ ಮಿನಾರ್ ಹಾಗೂ ಅದರ ಬಳಿ ಇರುವ ಮಸೀದಿಯನ್ನೂ ಹಿಂದೂ ದೇವಾಲಯಗಳ ಅವಶೇಷಗಳನ್ನು ಬಳಸಿಯೇ ನಿರ್ಮಿಸಲಾಗಿದೆ ಎಂದು ಡಾ| ಮುಹಮ್ಮದ್ ಸೋದಾಹರಣೆಯೊಂದಿಗೆ ವಿವರಿಸಿದರು.

ತಮ್ಮ ತಂಡದಲ್ಲಿ ಮುಸ್ಲಿಂ ತಾನೋರ್ವನೇ ಇದ್ದ ಕಾರಣದಿಂದಾಗಿ ಹಿಂದೂ ಪರ ಉತ್ಖನನ ವರದಿ ನೀಡಿದ ಕಾರಣದಿಂದಾಗಿ ಮುಸ್ಲಿಂ ವಾದಿಗಳ ಬೆದರಿಗೆ, ರಾಜಕಾರಣಿಗಳ ಒತ್ತಡ ಇತ್ಯಾದಿಗಳಿಗೆ ಒಳಗಾಗಬೇಕಾಯಿತು ಎಂದು ಖೇದ ವ್ಯಕ್ತಪಡಿಸಿದರು.

ಉತ್ಖನನ ಇತ್ಯಾದಿಗಳಿಗೆ ಕೇಂದ್ರ ಸರ್ಕಾರ ಸಾಕಷ್ಟು ಅನುದಾನ ನೀಡುತ್ತಿಲ್ಲ. ಅದನ್ನು ಹೆಚ್ಚಿಸಬೇಕು ಎಂದೂ ಆಗ್ರಹಿಸಿದರು.

ಪಾದೂರು ಗುರುರಾಜ ಮೆಮೋರಿಯಲ್ ಟ್ರಸ್ಟ್ ಅಧ್ಯಕ್ಷ ಪ್ರೊ. ಪಿ. ಶ್ರೀಪತಿ ತಂತ್ರಿ, ಮಂಗಳೂರು ವಿ.ವಿ. ವಿಶ್ರಾಂತ ಉಪಕುಲಪತಿ ಪ್ರೊ. ಭೈರಪ್ಪ ಇದ್ದರು. ವೆಂಕಟೇಶ ನಾಡಿಗ ನಿರೂಪಿಸಿದರು.

ಕ್ಯಾಲಿಫೋರ್ನಿಯಾ ಕಪಿಲ ಮುನಿ ತಾಣ
ಭಾರತೀಯ ಸನಾತನ ಪರಂಪರೆ ವಿಶ್ವವ್ಯಾಪಿಯಾಗಿತ್ತು. ಈಗಿನ ಕ್ಯಾಲಿಫೋರ್ನಿಯಾ ಕಪಿಲಾರಣ್ಯ ಅಥವಾ ಕಲಿಪಾರಣ್ಯ ಎಂಬುದಾಗಿ ಕರೆಯಲ್ಪಟ್ಟು, ಅದು ಕಪಿಲ ಮುನಿಯ ತಾಣವಾಗಿತ್ತು ಎಂದು ಹೇಳಿದ ಪುತ್ತಿಗೆ ಶ್ರೀಗಳು, ಸಗರ ಪುತ್ರರಿಗೆ ಶಾಪ ನೀಡಿದ ಕುರುಹಾಗಿ ಇಂದಿಗೂ ಆ ಪ್ರದೇಶ ಅತ್ಯಂತ ಬಿಸಿಯಾಗಿದೆ. ಅತ್ಯಂತ ಹೆಚ್ಚು ಜ್ವಾಲಾಮುಖಿ ಸಂಭವಿಸುವ ಸ್ಥಳ ಅದಾಗಿದೆ. ಮಾತ್ರವಲ್ಲದೆ, ಆ ಪ್ರದೇಶದಲ್ಲಿ ಆ್ಯಶ್ ಲ್ಯಾಂಡ್, ಡೆತ್ ವ್ಯಾಲಿ, ಅತ್ಯಂತ ಪರಿಶುದ್ಧ ನೀರು ಎನ್ನಲಾದ ಸ್ಯಾನ್ ಜೋಕ್ವಿನ್ ನದಿ ಇತ್ಯಾದಿಗಳು ರಾಮಾಯಣದಲ್ಲಿ ಉಲ್ಲೇಖವಾದ ಸಗರಾಶ್ರಮ, ಗಂಗಾ ಮೂಲ ಎನ್ನಲಾಗಿದೆ ಎಂದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!