ಉಡುಪಿ: ನಗರದ ಸಿಟಿ ಬಸ್ ನಿಲ್ದಾಣ ಬಳಿ ಪೌರ ಕಾರ್ಮಿಕನ ಮೇಲೆ ನಡೆದ ಹಲ್ಲೆ ಸಂಬಂಧ ಪೌರ ಕಾರ್ಮಿಕರಿಗೆ ಸೂಕ್ತ ಭದ್ರತೆ ಒದಗಿಸುವ ನಿಟ್ಟಿನಲ್ಲಿ ನಗರಸಭೆ ಕಚೇರಿಯಲ್ಲಿ ಶಾಸಕ ಕೆ. ರಘುಪತಿ ಭಟ್ ನಗರಸಭೆ ಸದಸ್ಯರು ಹಾಗೂ ಅಧಿಕಾರಿಗಳ ತುರ್ತು ಸಭೆ ನಡೆಸಿ, ಹಲ್ಲೆ ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವ ಬಗ್ಗೆ ಚರ್ಚಿಸಿದರು.
ಪೌರ ಕಾರ್ಮಿಕರ ಮೇಲಿನ ಹಲ್ಲೆ ಖಂಡಿಸಿದ ಶಾಸಕ ಭಟ್, ತಾವು ಪೌರಕಾರ್ಮಿಕರ ರಕ್ಷಣೆಗೆ ಸದಾ ಬದ್ಧ ಎಂದರು. ಮುಂದಿನ ದಿನಗಳಲ್ಲಿ ಇಂಥ ಘಟನೆಗಳು ನಡೆಯದಂತೆ ಎಚ್ಚರವಹಿಸಲಾಗುವುದು ಎಂದರು.
ಸೂಕ್ತ ಕ್ರಮಕ್ಕೆ ಸಲಹೆ
ಚುನಾವಣೆ ಪ್ರಚಾರ ಕಾರ್ಯ ನಿಮಿತ್ತ ಕೇರಳ ಪ್ರವಾಸದಲ್ಲಿದ್ದ ತಾನು, ಘಟನೆಯ ವಿಷಯ ತಿಳಿದ ತಕ್ಷಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ತಿಳಿಸಿರುವುದಾಗಿ ತಿಳಿಸಿದರು.
ನಗರ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಪೌರಕಾರ್ಮಿಕರ ಕಾರ್ಯ ಶ್ಲಾಘನೀಯ. ಉಡುಪಿಯ ನಾಗರಿಕರು ಅವರಿಗೆ ಸಹಕಾರ ನೀಡಬೇಕು ಎಂದು ಭಟ್ ವಿನಂತಿಸಿದರು
ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ಸ್ಥಾಯಿ ಸಮಿತಿ ಅಧ್ಯಕ್ಷ ಗಿರೀಶ್ ಅಂಚನ್, ನಗರಸಭಾ ಸದಸ್ಯ ಬಾಲಕೃಷ್ಣ ಶೆಟ್ಟಿ ಹಾಗೂ ಪೌರಾಯುಕ್ತ ಉದಯ್ ಶೆಟ್ಟಿ ಮತ್ತು ಕಂದಾಯ ಅಧಿಕಾರಿ ಧನಂಜಯ್ ಇದ್ದರು.