Wednesday, August 10, 2022
Home ಸಮಾಚಾರ ರಾಷ್ಟ್ರೀಯ ವಾರ್ತೆ ಕೇದಾರನಾಥದಲ್ಲಿ ಶಂಕರಾಚಾರ್ಯ ಮೂರ್ತಿ ಪ್ರತಿಷ್ಠೆ: ಶಂಗೇರಿ ಜಗದ್ಗುರುಗಳ ಶುಭಾಶಂಸನೆ

ಕೇದಾರನಾಥದಲ್ಲಿ ಶಂಕರಾಚಾರ್ಯ ಮೂರ್ತಿ ಪ್ರತಿಷ್ಠೆ: ಶಂಗೇರಿ ಜಗದ್ಗುರುಗಳ ಶುಭಾಶಂಸನೆ

ಕೇದಾರನಾಥದಲ್ಲಿ ಶಂಕರಾಚಾರ್ಯ ಮೂರ್ತಿ ಪ್ರತಿಷ್ಠೆ: ಶಂಗೇರಿ ಜಗದ್ಗುರುಗಳ ಶುಭಾಶಂಸನೆ

ಶೃಂಗೇರಿ, ನ.7 (ಸುದ್ದಿಕಿರಣ ವರದಿ): ಸನಾತನ ಹಿಂದೂ ಧರ್ಮವನ್ನು ಪುನರುತ್ಥಾನಗೈದು ಅದ್ವೈತ ಮತ ಪ್ರಚುರಪಡಿಸಿದ ಮೇರು ದಾರ್ಶನಿಕ ಲೋಕಗುರು ಶ್ರೀ ಶಂಕರಾಚಾರ್ಯರ ಪುತ್ಥಳಿಯನ್ನು ಕೇದಾರ ಕ್ಷೇತ್ರದಲ್ಲಿ ಪ್ರತಿಷ್ಠಾಪನೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸನ್ನಿಧಾನಂಗಳವರು ಪ್ರಧಾನಿ ಮೋದಿಯವರ ಪ್ರಶಂಸನೀಯ ಕಾರ್ಯವನ್ನು ಮೆಚ್ಚಿ ಅಭಿನಂದಿಸಿ ಹರಸಿದ್ದಾರೆ.

ಹಿಂದೂ ಧರ್ಮ ತೀರಾ ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ವೈದಿಕ ತಳಹದಿಯಲ್ಲಿ ಸರ್ವಮಾನ್ಯವಾಗುವ ತತ್ವ ಪ್ರತಿಪಾದಿಸಿದ ಪುರುಷಧೀರರಲ್ಲಿ ಶ್ರೀ ಶಂಕರ ಭಗವತ್ಪಾದಕರು ಅಗ್ರಮಾನ್ಯರು. ಅವರ ಕಾರ್ಯವನ್ನು ಪ್ರತಿಯೊಬ್ಬರೂ ಸ್ಮರಿಸಲೇಬೇಕು. ಅಂಥ ಸ್ಮರಣೀಯ‌ ಕಾರ್ಯವೆಸಗಿದ ಪ್ರಧಾನಿ ಮೋದಿ ಅವರಿಗೆ ಪರಿಪೂರ್ಣ ಆಶೀರ್ವಾದ ಮಾಡುವುದಾಗಿ ಪ್ರಧಾನಿಗೆ ಪ್ರದಾನಿಸಿದ ಶ್ರೀಮುಖದಲ್ಲಿ ಉಲ್ಲೇಖಿಸಲಾಗಿದೆ.

ಕಾರ್ತೀಕ ಶುದ್ಧ ಪ್ರತಿಪದೆ ನ. 5ರಂದು ಪ್ರಧಾನಿ ಮೋದಿ ಕೇದಾರನಾಥದಲ್ಲಿ ಶ್ರೀ ಶಂಕರಾಚಾರ್ಯರ ಬೃಹತ್ ಪ್ರತಿಮೆ ಅನಾವರಣಗೊಳಿಸಿದ್ದರು.

ಮಠದ ಪ್ರತಿನಿಧಿ
ಉತ್ತರಾಖಂಡದ ಕೇದರನಾಥದಲ್ಲಿ ಜಗದ್ಗುರು ಶ್ರೀ ಶಂಕರಾಚಾರ್ಯರ ಪ್ರತಿಮೆ ಪ್ರತಿಷ್ಠಾಪನೆ ಸಂದರ್ಭದಲ್ಲಿ ಶೃಂಗೇರಿ ಶ್ರೀ ಶಾರದಾ ಪೀಠದ ಪ್ರತಿನಿಧಿಯಾಗಿ ಮಠದ ಪುರೋಹಿತ ಶಿವಕುಮಾರ ಶರ್ಮ ಭಾಗವಹಿಸಿದ್ದರು.

ಮಠದಿಂದ ರಜತ ಪುತ್ಥಳಿ
ಶ್ರೀ ಶಂಕರಾಚಾರ್ಯರ ಸಮಾಧಿ ಸ್ಥಳದಲ್ಲಿ ಪುನರ್ ನಿರ್ಮಾಣಗೊಂಡ ಪ್ರತಿಮೆಯನ್ನು ರಾಷ್ಟ್ರಕ್ಕೆ ಪ್ರಧಾನಿ ಸಮರ್ಪಣೆ ಹಿನ್ನೆಲೆಯಲ್ಲಿ ಶೃಂಗೇರಿ ಮಠದಲ್ಲಿ ಉಭಯ ಜಗದ್ಗುರುಗಳಾದ ಶ್ರೀ ಭಾರತೀತೀರ್ಥ ಮಹಾಸನ್ನಿಧಾನಂಗಳವರು ಮತ್ತು ಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರು ಗುರು ಭವನದಲ್ಲಿ ಶ್ರೀ ಶಂಕರಾಚಾರ್ಯರ ರಜತ ಪುತ್ಥಳಿಗೆ ವಿಶೇಷ ಪೂಜೆ ಸಲ್ಲಿಸಿ, ಪ್ರಸಾದ ಪೂರ್ವಕವಾಗಿ ಶ್ರೀ ಮಠದ ಪ್ರತಿನಿಧಿ ಶಿವಕುಮಾರ ಶರ್ಮ ಮೂಲಕ ಕೇದಾರ ಕ್ಷೇತ್ರಕ್ಕೆ ಕಳಿಸಿಕೊಡಲಾಗಿದೆ.

ನೇರ ಪ್ರಸಾರ
ಕಾರ್ಯಕ್ರಮ ಹಿನ್ನೆಲೆಯಲ್ಲಿ ಶ್ರೀಮಠದ ಶ್ರೀ ಚಂದ್ರಶೇಖರ ಭಾರತೀ ಸಭಾಂಗಣದಲ್ಲಿ ಎಲ್‌ಇಡಿ ಸ್ಟೀನ್ ಮೂಲಕ ಕೇದಾರ ಕ್ಷೇತ್ರದ ಉದ್ಘಾಟನೆಯ ನೇರ ಪ್ರಸಾರ ವ್ಯವಸ್ಥೆ ಮಾಡಲಾಗಿತ್ತು.

ಸಮಾರಂಭವನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಉದ್ಘಾಟಿಸಿದ್ದರು. ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ.ಪ್ರಾಣೇಶ್, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ. ರವಿ, ಮಾಜಿ ಶಾಸಕ ಡಿ. ಎನ್. ಜೀವರಾಜ್, ಮಠದ ಆಡಳಿತಾಧಿಕಾರಿ ಡಾl ವಿ. ಆರ್. ಗೌರಿಶಂಕರ್ ಇದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!