Monday, August 15, 2022
Home ಸಮಾಚಾರ ರಾಜ್ಯ ವಾರ್ತೆ ಸಿದ್ದರಾಮಯ್ಯ ಜನ್ಮದಿನೋತ್ಸವ ಕಾಂಗ್ರೆಸ್ ಬಲವರ್ಧನೆಗೆ ಬಳಕೆ

ಸಿದ್ದರಾಮಯ್ಯ ಜನ್ಮದಿನೋತ್ಸವ ಕಾಂಗ್ರೆಸ್ ಬಲವರ್ಧನೆಗೆ ಬಳಕೆ

ಸುದ್ದಿಕಿರಣ ವರದಿ
ಶನಿವಾರ, ಜುಲೈ 23

ಸಿದ್ದರಾಮಯ್ಯ ಜನ್ಮದಿನೋತ್ಸವ ಕಾಂಗ್ರೆಸ್ ಬಲವರ್ಧನೆಗೆ ಬಳಕೆ
ಉಡುಪಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಟ್ಟುಹಬ್ಬ ಅಂಗವಾಗಿ ಆಗಸ್ಟ್ 3ರಂದು ಅವರ ಅಭಿಮಾನಿಗಳು ಸೇರಿ ಸಂಭ್ರಮಾಚರಣೆ ಮಾಡಲು ತೀರ್ಮಾನಿಸಿದ್ದಾರೆ. ಆ ಕಾರ್ಯಕ್ರಮ ಕಾಂಗ್ರೆಸ್ ಪಕ್ಷದ ಶಕ್ತಿ ಪದರ್ಶನಕ್ಕೂ ವೇದಿಕೆಯಾಗಲಿದೆ. ಪಕ್ಷದ ಬಲವರ್ಧನೆಗೂ ಆ ಕಾರ್ಯಕ್ರಮ ವೇದಿಕೆಯನ್ನು ಬಳಸಿಕೊಳ್ಳಲಾಗುವುದು ಎಂದು ಕಾಂಗ್ರೆಸ್ ಮುಖಂಡ ಮಧು ಬಂಗಾರಪ್ಪ ಹೇಳಿದರು.

ಶನಿವಾರ ಇಲ್ಲಿನ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಸಮಾವೇಶ ಯಾವುದೇ ವ್ಯಕ್ತಿಯ ವೈಭವೀಕರಣವಲ್ಲ. ಕಾಂಗ್ರೆಸ್ ಪಕ್ಷವನ್ನು ಬಲಿಷ್ಠವಾಗಿ ಬೆಳೆಸಿದ ನಾಯಕನಿಗೆ ಅಭಿಮಾನಿಗಳು ಸಲ್ಲಿಸುವ ಗೌರವ. ಕಾರ್ಯಕ್ರಮದ ಬಗ್ಗೆ ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ ಎಂದರು.

ಕರ್ನಾಟಕವೂ ಸೇರಿದಂತೆ ದೇಶದಲ್ಲಿ ಕಾಂಗ್ರೆಸ್ ಗೆ ಉತ್ತಮ ಭವಿಷ್ಯ ಗೋಚರಿಸಲಿದೆ ಎಂದು ಮಧು ಬಂಗಾರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಕುಟುಂಬ ಹೊರತಾಗಿ ಸ್ಥಾನ ಬಿಟ್ಟುಕೊಡಲಿ
ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿ, ಯಡಿಯೂರಪ್ಪ ತನ್ನ ಮಗನಿಗೆ ಸ್ಥಾನ ಬಿಟ್ಟುಕೊಡುವುದರಲ್ಲಿ ಯಾವುದೇ ವಿಶೇಷತೆ ಇಲ್ಲ. ಕುಟುಂಬದಿಂದ ಹೊರತಾದ ವ್ಯಕ್ತಿಗೆ ಟಿಕೆಟ್ ನೀಡಬೇಕು.

ಮುಂದಿನ ಚುನಾವಣೆಯಲ್ಲಿ ಮೂಲ್ಕಿ- ಮೂಡುಬಿದಿರೆ ಕ್ಷೇತ್ರದಲ್ಲಿ ನಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಯುವ ನಾಯಕ ಮಿಥುನ್ ರೈ ಅವರಿಗೆ ಟಿಕೆಟ್ ನೀಡುವಂತೆ ಈಗಾಗಲೇ ಪಕ್ಷ ವರಿಷ್ಠರನ್ನು ವಿನಂತಿಸಿದ್ದೇನೆ ಎಂದರು.

ಕಾಂಗ್ರೆಸ್ ಪಕ್ಷ ನಾಶವಾದರೆ ನಾವೂ ಅಸ್ತಿತ್ವ ಕಳೆದುಕೊಳ್ಳುತ್ತೇವೆ. ಹಾಗಾಗಿ ಪಕ್ಷದಲ್ಲಿ ಗುಂಪುಗಾರಿಕೆಗೆ ಅವಕಾಶ ನೀಡಬಾರದು. ಈ ಹಿಂದೆ ನಾವು ಗುಂಪುಗಾರಿಕೆ ಮಾಡಿದವರು. ಆದರೆ, ಈಗ ಪರಿಸ್ಥಿತಿ ಭಿನ್ನವಾಗಿದೆ ಎಂದು ಅಭಯಚಂದ್ರ ತಿಳಿಸಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕಕುಮಾರ್ ಕೊಡವೂರು, ಪಕ್ಷ ಪ್ರಮುಖರಾದ ಎಂ. ಎ. ಗಫೂರ್, ಕೃಷ್ಣಮೂರ್ತಿ ಆಚಾರ್ಯ, ರಮೇಶ ಕಾಂಚನ್ ಮೊದಲಾದವರಿದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!