ಉಡುಪಿ: ವಿದ್ಯುತ್ ಬಿಲ್ ಕಡಿಮೆಗೊಳಿಸುವಿಕೆ ಮತ್ತು ಉಳಿಕೆ ವಿದ್ಯುತ್ ನಿಂದ ಆದಾಯ ಸಂಗ್ರಹದ ಆಶಯದಿಂದ ರಾಜ್ಯದ ಎಲ್ಲ ಗ್ರಾಮ ಪಂಚಾಯತ್ ಗಳಿಗೆ ಸೋಲಾರ್ ಅಳವಡಿಸಲು ನಿರ್ಧರಿಸಲಾಗಿದ್ದು, ಅದಕ್ಕಾಗಿ 300 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ. ಎಸ್. ಈಶ್ವರಪ್ಪ ಹೇಳಿದರು.
ಮಂಗಳವಾರ ನಡೆದ ಜನಸೇವಕ್ ಸಮಾವೇಶದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಸೋಲಾರ್ ಅಳವಡಿಕೆಗೆ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, 9 ಕಂಪೆನಿಗಳನ್ನು ಜಿಲ್ಲಾವಾರು ಆಯ್ಕೆ ಮಾಡಲಾಗಿದೆ. ಟೆಂಡರ್ ಪಡೆದ ಕಂಪೆನಿಗಳಿಗೆ 5 ವರ್ಷ ನಿರ್ವಹಣೆಯ ಜವಾಬ್ದಾರಿಯನ್ನೂ ವಹಿಸಲಾಗಿದೆ. ಪಂಚಾಯತ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಪೂರ್ಣಗೊಳ್ಳುತ್ತಿದ್ದಂತೆ ಸೋಲಾರ್ ಉಪಕರಣಗಳ ಅಳವಡಿಕೆ ಆರಂಭವಾಗಲಿದೆ ಎಂದರು.
ಗ್ರಾ. ಪಂ.ಗಳಲ್ಲಿ ಸೋಲಾರ್ ಅಳವಡಿಕೆಯಾದರೆ ವಿದ್ಯುತ್ ಬಿಲ್ ಬಾಕಿ ಸಮಸ್ಯೆ ನಿವಾರಣೆಯಾಗಲಿದೆ. ಪಂಚಾಯತ್ ಗಳು ಉತ್ಪಾದಿಸುವ ಹೆಚ್ಚುವರಿ ವಿದ್ಯುತ್ ನ್ನು ಗ್ರಿಡ್ ಗಳಿಗೆ ಮಾರಾಟ ಮಾಡಬಹುದು. ಸಾರ್ವಜನಿಕರಿಗೆ ಸರಕಾರದ ಸೇವೆಗಳು ತ್ವರಿತವಾಗಿ ಸಿಗಲಿವೆ ಎಂದು ತಿಳಿಸಿದ ಈಶ್ವರಪ್ಪ, ಪಂಚಾಯತ್ ಸದಸ್ಯರ ಗೌರವಧನವನ್ನು 1 ಸಾವಿರ ರೂ.ನಿಂದ 2 ಸಾವಿರಕ್ಕೆ ಹೆಚ್ಚಿಸಲು ಮುಂದಿನ ಬಜೆಟ್ ನಲ್ಲಿ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.
ಕಾಂಗ್ರೆಸ್ ಗೆ ಗೋ ಶಾಪ
ಹಿಂದೆ, ಸದನದಲ್ಲಿ ಗೋಗಳ್ಳರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದಾಗ ಕೋಮುವಾದಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಸಿದ್ದರಾಮಯ್ಯ ಹೇಳಿದ್ದರು. ಗೋ ಶಾಪ ತಟ್ಟಿದ ಪರಿಣಾಮ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತರು, ಮುಖ್ಯಮಂತ್ರಿ ಹುದ್ದೆ ಕಳೆದುಕೊಂಡರು. ಕಾಂಗ್ರೆಸ್ ಗೂ ಗೋಶಾಪ ತಟ್ಟಿರುವುದರಿಂದ ಎಲ್ಲ ಸ್ತರಗಳಲ್ಲಿ ಅಧಿಕಾರ ಕಳೆದುಕೊಂಡಿದೆ ಎಂದು ಈಶ್ವರಪ್ಪ ಹೇಳಿದರು.
ಗೋವುಗಳ ವಿರುದ್ಧ ಹಗುರವಾಗಿ ಮಾತನಾಡಿದರೆ, ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದವರ ವಿರುದ್ಧ ಮಾತನಾಡಿದರೆ ಮುಸ್ಲಿಮರು ಮತ ಹಾಕುವುದಿಲ್ಲ ಎಂಬ ಭ್ರಮೆಯಲ್ಲಿ ಕಾಂಗ್ರೆಸ್ ಇದೆ. ದೇಶದ್ರೋಹಿ ಘೋಷಣೆ ಕೂಗಿದವರ ವಿರುದ್ಧ ಕಾಂಗ್ರೆಸ್ ಮೌನವಾಗಿದ್ದರೂ, ರಾಜ್ಯ ಸಕರ್ಾರ ದೇಶವಿರೋಧಿಗಳ ಸೊಕ್ಕು ಮುರಿಯಲಿದೆ ಎಂದು ಈಶ್ವರಪ್ಪ ಗುಡುಗಿದರು.
ಸಿದ್ದರಾಮಯ್ಯ ಕುರ್ಚಿ ಉಳಿಸಿಕೊಳ್ಳಲಿ
ಸಂಪುಟ ವಿಸ್ತರಣೆ ಬಳಿಕ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಳ್ಳಲಿದೆ ಎಂಬ ಸಿದ್ದರಾಮಯ್ಯ ಹೇಳಿಕೆ ಬಾಲಿಶ. ಮೊದಲು ಅವರು ವಿರೋಧ ಪಕ್ಷದ ಕುರ್ಚಿ ಉಳಿಸಿಕೊಳ್ಳಲಿ. ಡಿ.ಕೆ. ಶಿವಕುಮಾರ್ ಸ್ಥಾನ ಕಿತ್ತುಕೊಳ್ಳಲು ಕಾಯುತ್ತಿದ್ದಾರೆ. ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವ ಹಗಲುಗನಸು ಕಾಣುತ್ತಿದ್ದಾರೆ ಎಂದು ಈಶ್ವರಪ್ಪ ವ್ಯಂಗ್ಯವಾಡಿದರು.
ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ರಘುಪತಿ ಭಟ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ ನಾಯಕ್, ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಮಂಗಳೂರು ಪ್ರಭಾರಿ ಉದಯಕುಮಾರ್ ಶೆಟ್ಟಿ ಮೊದಲಾದವರಿದ್ದರು