Saturday, August 13, 2022
Home ಸಮಾಚಾರ ಸಂಘಸಂಗತಿ ಮಹಾಲಕ್ಷ್ಮೀ ಬ್ಯಾಂಕ್ ಸಮಾಜಮುಖಿ ಚಟುವಟಿಕೆ ಅಭಿನಂದನೀಯ

ಮಹಾಲಕ್ಷ್ಮೀ ಬ್ಯಾಂಕ್ ಸಮಾಜಮುಖಿ ಚಟುವಟಿಕೆ ಅಭಿನಂದನೀಯ

ಮಹಾಲಕ್ಷ್ಮೀ ಬ್ಯಾಂಕ್ ಸಮಾಜಮುಖಿ ಚಟುವಟಿಕೆ ಅಭಿನಂದನೀಯ
(ಸುದ್ದಿಕಿರಣ ವರದಿ)

ಮಲ್ಪೆ: ಬ್ಯಾಂಕಿಂಗ್ ವ್ಯವಹಾರದೊಂದಿಗೆ ಸ್ವಚ್ಛತಾ ಅಭಿಯಾನ, ಆಶಾ ಕಾರ್ಯಕರ್ತೆರಿಗೆ ಗೌರವಾರ್ಪಣೆಯಂಥ ಸಮಾಜಮುಖಿ ಕಾರ್ಯಕ್ರಮ ರೂಪಿಸುತ್ತಿರುವ ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕಿನ ಚಟುವಟಿಕೆ ಅಭಿನಂದನೀಯ ಎಂದು ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ನಾಡೋಜ ಡಾ| ಜಿ. ಶಂಕರ್ ಹೇಳಿದರು.

ಶನಿವಾರ ಬ್ಯಾಂಕ್ ವತಿಯಿಂದ ಟೀಮ್ ನೇಷನ್ ಫಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ಮಲ್ಪೆ ಪಡುಕೆರೆ ಶಾಂತಿನಗರ ಬೀಚ್ ಸ್ವಚ್ಛತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು

ಸಮಾಜಸೇವೆಗೆ ಲಾಭಾಂಶ
ಅಧ್ಯಕ್ಷತೆ ವಹಿಸಿದ್ದ ಮಹಾಲಕ್ಷ್ಮೀ ಬ್ಯಾಂಕ್ ಅಧ್ಯಕ್ಷ ಯಶ್ ಪಾಲ್ ಸುವರ್ಣ, ಪ್ರಧಾನಿ ಮೋದಿಯವರ ಸ್ವಚ್ಛ ಭಾರತ ಅಭಿಯಾನಕ್ಕೆ ಶಕ್ತಿ ತುಂಬುವ ನಿಟ್ಟಿನಲ್ಲಿ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಜಯಂತಿಯಂದು ಬೀಚ್ ಸ್ವಚ್ಛತಾ ಕಾರ್ಯಕ್ರಮ ಆಯೋಜಿಸಿದ್ದು, ಬ್ಯಾಂಕ್ ಗಳಿಸಿದ ಲಾಭಾಂಶದ ಭಾಗದಲ್ಲಿ ಜಿಲ್ಲಾಡಳಿತದೊಂದಿಗೆ ಕೈಜೋಡಿಸಿ ನಿರಂತರವಾಗಿ ಸಮಾಜಮುಖಿ ಕಾರ್ಯಗಳಿಗೆ ವಿನಿಯೋಗಿಸುವ ಉದ್ದೇಶ ಹೊಂದಿರುವುದಾಗಿ ತಿಳಿಸಿದರು.

ಸ್ವಚ್ಛತಾ ಕಾರ್ಯಕ್ರಮ ಸಂದರ್ಭ ಭೇಟಿ ನೀಡಿದ ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್, ಶಾಸಕ ಕೆ. ರಘುಪತಿ ಭಟ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ನಗರಸಭೆ ಪೌರಾಯುಕ್ತ ಡಾ| ಉದಯ ಶೆಟ್ಟಿ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ರಾಘವೇಂದ್ರ ಕಿಣಿ, ಬ್ಯಾಂಕಿನ ಸಿಬ್ಬಂದಿಗಳು ಹಾಗೂ ಟೀಮ್ ನೇಷನ್ ತಂಡದ ಸುಮಾರು 200 ಮಂದಿ ಸ್ವಯಂ ಸೇವಕರ ತಂಡದ ಸ್ವಚ್ಛತಾ ಕಾರ್ಯವನ್ನು ಶ್ಲಾಘಿಸಿದರು.

ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಮಲ್ಪೆ ಮೀನುಗಾರರ ಸಂಘ ಅಧ್ಯಕ್ಷ ದಯಾನಂದ ಕೆ. ಸುವರ್ಣ, ಕೊಡವೂರು ವಾರ್ಡ್ ನಗರಸಭೆ ಸದಸ್ಯ ವಿಜಯ ಕೊಡವೂರು, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಸದಸ್ಯ ಪ್ರವೀಣ್ ಶೆಟ್ಟಿ ಕಪ್ಪೆಟ್ಟು, ಟೀಮ್ ನೇಶನ್ ಫಸ್ಟ್ ಗೌರವಾಧ್ಯಕ್ಷ ಮೇ| ಪ್ರಕಾಶ್ ರಾವ್, ಅಧ್ಯಕ್ಷ ಸೂರಜ್ ಕಿದಿಯೂರು, ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ದಿವಾಕರ ಖಾರ್ವಿ, ಬ್ಯಾಂಕಿನ ನಿರ್ದೇಶಕರಾದ ಎನ್. ಟಿ. ಅಮೀನ್, ಶಿವರಾಮ್ ಕುಂದರ್, ಸುರೇಶ್ ಬಿ. ಕರ್ಕೇರ, ವನಜ ಪುತ್ರನ್ ಮತ್ತು ವನಜ ಕಿದಿಯೂರು, ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಜಿ. ಕೆ. ಶೀನ ಇದ್ದರು.

ಮಟ್ಟು ಯತೀಶ್ ಕೋಟ್ಯಾನ್ ನಿರೂಪಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!