Saturday, July 2, 2022
Home ಸಮಾಚಾರ ರಾಜ್ಯ ವಾರ್ತೆ ಅನುದಾನ ರಹಿತ ಶಾಲಾ ಶಿಕ್ಷಕರು, ಬೋಧಕೇತರ ಸಿಬ್ಬಂದಿಗೆ ವಿಶೇಷ ಪ್ಯಾಕೇಜ್

ಅನುದಾನ ರಹಿತ ಶಾಲಾ ಶಿಕ್ಷಕರು, ಬೋಧಕೇತರ ಸಿಬ್ಬಂದಿಗೆ ವಿಶೇಷ ಪ್ಯಾಕೇಜ್

ಬೆಂಗಳೂರು: ರಾಜ್ಯದ ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿಗಳಿಗೆ 2021- 22ನೇ ಸಾಲಿಗೆ 10,347.25 ಲಕ್ಷ ರೂ. ಕೋವಿಡ್ ವಿಶೇಷ ಪ್ಯಾಕೇಜ್ ಪರಿಹಾರ ಬಿಡುಗಡೆಗೊಳಿಸಿ ಸರ್ಕಾರ ಆದೇಶಿಸಿದೆ.

ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದು, ರಾಜ್ಯದ ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ 1,72,945 ಶಿಕ್ಷಕರು ಮತ್ತು 34 ಸಾವಿರ ಬೋಧಕೇತರ ಸಿಬ್ಬಂದಿ ಒಳಗೊಂಡಂತೆ ಒಟ್ಟು 2,06,945 ನೌಕರರಿಗೆ 5 ಸಾವಿರ ರೂ.ನಂತೆ ವಿಶೇಷ ಪ್ಯಾಕೇಜ್ ಪರಿಹಾರಧನ ಬಿಡುಗಡೆಗೊಳಿಸಲಾಗಿದೆ.

ಬಿಡುಗಡೆಗೊಳಿಸಲಾದ ಅನುದಾನವನ್ನು ಸರ್ಕಾರೇತರ ಪ್ರಾಥಮಿಕ ಶಾಲೆಗಳಿಗೆ ಆರ್.ಟಿ.ಇ ಅಡಿಯ ಖಾಸಗಿ ಶಾಲೆಗಳ ಶುಲ್ಕ ಮರುಪಾವತಿ ಕಾರ್ಯಕ್ರಮದಲ್ಲಿ ಇದುವರೆಗೆ ಬಿಡುಗಡೆ ಮಾಡಲಾದ ಮತ್ತು ಮಾಡಲಾಗುವ ಅನುದಾನದಿಂದ ನಿಯಮಾನುಸಾರ ಭರಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಆದೇಶಿಸಿದ್ದಾರೆ.

ನೋಂದಾಯಿತ ಅರ್ಹ ಫಲಾನುಭವಿಗಳಿಗೆ ನೇರವಾಗಿ ಅವರ ಬ್ಯಾಂಕ್ ಖಾತೆಗೇ ಖಜಾನೆ- 2 ತಂತ್ರಾಂಶದಡಿ ಪರಿಹಾರಧನ ವರ್ಗಾಯಿಸಲಾಗುವುದು.

ಪರಿಹಾರಧನ ಬಿಡುಗಡೆಗೊಳಿಸುವ ಮುನ್ನ ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆ, ಆಧಾರ್ ನೊಂದಿಗೆ ಸಂಯೋಜಿಸಲ್ಪಟ್ಟಿರುವುದನ್ನು ಖಾತರಿಪಡಿಸಿಕೊಳ್ಳಬೇಕು ಹಾಗೂ ಭರಿಸಲಾಗುವ ವೆಚ್ಚದ ವಿವರವನ್ನು ಪ್ರತಿ ತಿಂಗಳು ಹೊಸ ಡಿಜಿಟಲ್ ಸಪೋರ್ಟ್ ಸಿಸ್ಟಂ (ಅವಲೋಕನ) ತಂತ್ರಾಂಶದಲ್ಲಿ ಅಳವಡಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!