ಉಡುಪಿ: ದೇಹ ಮತ್ತು ಮನಸ್ಸಿನ ಪ್ರಪುಲ್ಲತೆಗೆ ಕ್ರೀಡೆ ಅಗತ್ಯ ಎಂದು ಅದಮಾರು ಮಠ ಶಿಕ್ಷಣ ಸಂಸ್ಥೆ ಅಧ್ಯಕ್ಷ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಹೇಳಿದರು.
ಇಲ್ಲಿನ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಮೈತುಂಬ ಆಟ ಆಡಿ, ಮನ ತುಂಬಾ ಪಾಠ ಕೇಳಿ, ಮನನ ಮಾಡಿ ಶೈಕ್ಷಣಿಕ ಸಾಧನೆ ಮಾಡಬೇಕು. ಕೈತುಂಬಾ ಸಂಬಳ ಪಡೆದು ಮನೆಯವರನ್ನು ಚೆನ್ನಾಗಿ ನೋಡಿಕೊಂಡು ಅಗತ್ಯ ಇರುವವರಿಗೆ ಮನ ತುಂಬಿ ಸಹಾಯ ಮಾಡಬೇಕು ಎಂದರು.
ಕ್ರಿಕೆಟ್ ಆಟವನ್ನು ಮುಂದುವರಿದ ದೇಶಗಳಾದ ರಷ್ಯಾ, ಅಮೆರಿಕ, ಜಪಾನ್, ಚೀನಾ, ಜರ್ಮನಿಯಂಥ ರಾಷ್ಟ್ರಗಳು ಆಡುತ್ತಿಲ್ಲ. ಆ ಆಟದ ತಂಡದ ಸದಸ್ಯರಲ್ಲಿ ಏಕಕಾಲಕ್ಕೆ ದೈಹಿಕ ಶ್ರಮ ಬಯಸುವುದಿಲ್ಲ ಎಂದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ನಿರ್ದೇಶಕ ಡಾ| ರೋಶನ್ ಕುಮಾರ್ ಶೆಟ್ಟಿ, ಕ್ರೀಡೆಗೆ ಬೇಕಾದ ಮೂಲಭೂತ ಆವಶ್ಯಕತೆ ನಮ್ಮ ಜಿಲ್ಲೆಯಲ್ಲಿದೆ. ಸಿಂಥೆಟಿಕ್ ಟ್ರ್ಯಾಕ್ ವ್ಯವಸ್ಥೆಯೂ ಇದೆ. ಯುವಜನರು ಸರಿಯಾದ ರೀತಿಯಲ್ಲಿ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುತ್ತಿಲ್ಲ. 40 ವರ್ಷಕ್ಕಿಂತ ಮೇಲ್ಪಟ್ಟವರು ಹೆಚ್ಚಿನ ಪ್ರಯೋಜನ ಪಡೆದುಕೊಳ್ಳುತ್ತಿರುವುದು ವಿಶೇಷ. ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳಿಂದ ದೈಹಿಕ ಕ್ಷಮತೆಯೊಂದಿಗೆ ಮಾನಸಿಕ ಸ್ಥಿಮಿತತೆ ಹೆಚ್ಚುತ್ತದೆ ಎಂದರು.
ಕ್ರೀಡಾಳುಗಳಿಗೆ ಶೈವಿ ಶೆಟ್ಟಿ ಹಾಗೂ ಕ್ರೀಡಾಧಿಕಾರಿಗಳಿಗೆ ಉಪನ್ಯಾಸಕ ರಾಘವೇಂದ್ರ ಜಿ. ಜಿ. ಪ್ರತಿಜ್ಞಾವಿಧಿ ಬೋಧಿಸಿದರು. ಕಾಲೇಜು ಪ್ರಾಚಾರ್ಯರ ಡಾ| ಸುಕನ್ಯಾ ಮೇರಿ ಜೆ. ಅಧ್ಯಕ್ಷತೆ ವಹಿಸಿದ್ದರು.
ವಿದ್ಯಾರ್ಥಿಗಳಿಂದ ಪಥಸಂಚಲನ ನಡೆಯಿತು. ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಮೋಘ ಹೆಗಡೆ ಸ್ವಾಗತಿಸಿ, ಉಪಾಧ್ಯಕ್ಷೆ ಗೌತಮಿ ನಿರೂಪಿಸಿದರು. ತನ್ವಿ ಶೆಟ್ಟಿ ವಂದಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಮಂಜುನಾಥ ಜೋಗಿ ಕಾರ್ಯಕ್ರಮ ಸಂಘಟಿಸಿದ್ದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ| ರಾಮಕೃಷ್ಣ ಉಡುಪ ಇದ್ದರು.