ಬೆಂಗಳೂರು: ಗ್ರಾಮ ಪಂಚಾಯತ್ ಮತ್ತು ನಗರಾಡಳಿತ ಸಂಸ್ಥೆಯ ಸ್ಥಳೀಯಾಡಳಿತ ಪ್ರತಿನಿಧಿಗಳನ್ನು ಕೊರೊನಾ ವಾರಿಯರ್ ಎಂದು ಗುರುತಿಸಿ ಕೊರೊನಾ ಲಸಿಕೆ ನೀಡುವ ಕುರಿತು ಸಚಿವ ಕೋಟ ಶ್ರೀನಿವಾಸ ಪೂಜಾರಿ ಮನವಿಯನ್ನು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಪುರಸ್ಕರಿಸಿದ್ದಾರೆ. ಆ ಮೂಲಕ ಆದ್ಯತೆಯಲ್ಲಿ ಇವರಿಗೂ ಲಸಿಕೆ ನೀಡಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ರಾಜ್ಯದಲ್ಲಿ 6,020ಕ್ಕೂ ಮಿಕ್ಕಿ ಗ್ರಾಮ ಪಂಚಾಯತ್ ಗಳಿದ್ದು, ಎಲ್ಲಾ ಗ್ರಾಮಗಳೂ ಸೇರಿ 95 ಸಾವಿರಕ್ಕೂ ಅಧಿಕ ಪಂಚಾಯತ್ ಸದಸ್ಯರಿದ್ದಾರೆ. ಪ್ರತೀ ಗ್ರಾಮ ಪಂಚಾಯತ್ ಗಳಲ್ಲಿ ಪ್ರಸ್ತುತ ಕೋವಿಡ್ ಕಾರ್ಯಪಡೆ ರಚಿಸಲಾಗಿದ್ದು, ಪ್ರತಿನಿತ್ಯವೂ ಸಭೆ ಸೇರಿ ಜನರ ಮಧ್ಯೆ ಸಂಪರ್ಕದಲ್ಲಿರುವುದು ಅವಶ್ಯವಾಗಿರುತ್ತದೆ.
ಅಲ್ಲದೆ ಪ್ರತೀ ವಾರ್ಡಿನಲ್ಲಿರುವ ಮನೆ ಮನೆಗೂ ವಾರ್ಡ್ ಸದಸ್ಯರು ಭೇಟಿ ನೀಡಬೇಕೆಂದೂ ಹಾಗೂ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಇಡೀ ಗ್ರಾಮವನ್ನು ಗಮನಿಸುವಂತೆ ಈಗಾಗಲೇ ಸರ್ಕಾರ ನಿರ್ಧರಿಸಿದಂತೆ ರಾಜ್ಯದ ಎಲ್ಲಾ ಗ್ರಾಮ ಪಂಚಾಯತ್ ಕಾರ್ಯಪಡೆಗಳು ಕರ್ತವ್ಯ ನಿರ್ವಹಿಸುತ್ತಿದೆ.
ಅದೇರೀತಿ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್, ಮಹಾನಗರ ಪಾಲಿಕೆ, ನಗರ ಪಂಚಾಯತ್ ಸೇರಿದಂತೆ ರಾಜ್ಯದಲ್ಲಿರುವ ಎಲ್ಲಾ ನಗರಾಡಳಿತ ಸಂಸ್ಥೆಗಳ ಸದಸ್ಯರೂ ನಿತ್ಯ ಕೊರೊನಾ ಪೀಡಿತರನ್ನು ಭೇಟಿ ಮಾಡಿ ಪ್ರತಿನಿತ್ಯ ಕರ್ತವ್ಯ ನಿರ್ವಹಿಸಿ ಕೊರೊನಾ ನಿಯಂತ್ರಣಕ್ಕೆ ತರುವ ಕಾರ್ಯದಲ್ಲಿ ತಲ್ಲೀನರಾಗಿದ್ದಾರೆ.
ಅವರೆಲ್ಲರಿಗೂ ಕೊರೊನಾ ನಿಯಂತ್ರಣಕ್ಕಾಗಿ ಮುಂಚೂಣಿಯಲ್ಲಿ ನಿಂತು ಹೋರಾಡುವ ಕೊರೊನಾ ವಾರಿಯರ್ ಗಳಿಗೆ ಕೊಟ್ಟಂಥ ಪ್ರಾಶಸ್ತ್ಯ ನೀಡಿ ವ್ಯಾಕ್ಸಿನ್ ನೀಡಲು ಸೂಕ್ತ ಆದೇಶ ನೀಡುವಂತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮನವಿ ಮಾಡಿದ್ದರು.
ಸಚಿವರ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ರಾಜ್ಯಾದ್ಯಂತ ಇರುವ ಗ್ರಾಮ ಪಂಚಾಯತ್ ಹಾಗೂ ನಗರ ಸ್ಥಳೀಯಾಡಳಿತ ಸಂಸ್ಥೆಗಳ ಪ್ರತಿನಿಧಿಗಳಿಗೆ ವ್ಯಾಕ್ಸಿನ್ ನೀಡಲು ಆದೇಶಿಸಿದ್ದಾರೆ