Wednesday, August 10, 2022
Home ಸಮಾಚಾರ ಜಿಲ್ಲಾ ಸುದ್ದಿ ಹೆಣ್ಣುಮಕ್ಕಳು, ತಾಯಂದಿರಿಗೆ ಪೋಷಕಾಂಶಯುಕ್ತ ಆಹಾರ ನೀಡಿ

ಹೆಣ್ಣುಮಕ್ಕಳು, ತಾಯಂದಿರಿಗೆ ಪೋಷಕಾಂಶಯುಕ್ತ ಆಹಾರ ನೀಡಿ

ಹೆಣ್ಣುಮಕ್ಕಳು, ತಾಯಂದಿರಿಗೆ ಪೋಷಕಾಂಶಯುಕ್ತ ಆಹಾರ ನೀಡಿ
(ಸುದ್ದಿಕಿರಣ ವರದಿ)

ಶಿರ್ವ: ಹೆಣ್ಣುಮಕ್ಕಳಿಗೆ ಪ್ರೌಢಾವಸ್ಥೆಯಲ್ಲಿ ಅಧಿಕ ಪೋಷಕಾಂಶ ಇರುವ ಆಹಾರ ಅಗತ್ಯ. ವಿವಿಧ ಆಹಾರ ವಸ್ತುಗಳಲ್ಲಿರುವ ಪೋಷಕಾಂಶಗಳ ಬಗ್ಗೆ ತಿಳಿಸಬೇಕು. ನಿತ್ಯ ಆರೋಗ್ಯವರ್ಧಕ ದಿನಚರಿ ಕಲಿಯಬೇಕು.

ಪ್ರಜ್ಞಾವಂತ ನಾಗರಿಕರಾಗಿ ದೇಶಕ್ಕೆ ಉತ್ತಮ ಕೊಡುಗೆ ನೀಡುವಂತಾಗಲು ದೈಹಿಕ ಆರೋಗ್ಯ ಮುಖ್ಯ. ಸೊಪ್ಪು ತರಕಾರಿಗಳು, ಮೊಳಕೆ ಬರಿಸಿದ ಕಾಳುಗಳು, ಹಾಲು, ಹಾಲಿನ ಉತ್ಪನ್ನಗಳು, ಮೊಟ್ಟೆಯಲ್ಲಿ ಅಧಿಕ ಪೋಷಕಾಂಶಗಳಿದ್ದು, ಹೆಣ್ಣುಮಕ್ಕಳು ಮತ್ತು ತಾಯಂದಿರಿಗೆ ಅಧಿಕ ಪೋಷಕಾಶ ಇರುವ ಆಹಾರ ಕೊಡಬೇಕು ಎಂದು ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್ ಹೇಳಿದರು.

ಮೂಡುಬೆಳ್ಳೆ ಗೀತಾ ಮಂದಿರದಲ್ಲಿ ಉಡುಪಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ, ಶಿಶು ಅಭಿವೃದ್ಧಿ ಯೋಜನೆ ಹಾಗೂ ಬೆಳ್ಳೆ ಗ್ರಾಮ ಪಂಚಾಯತ್ ಆಶ್ರಯದಲ್ಲಿ ನಡೆದ ಪೋಷಣ್ ಅಭಿಯಾನ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಪೆರ್ಣಂಕಿಲ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ. ರವೀಂದ್ರ ಬೋರ್ಕರ್ ಮಾತನಾಡಿ, ಆಹಾರ ಹಸಿವು ನೀಗಿಸಲು ಮಾತ್ರವಲ್ಲದೆ ಪೋಷಕಾಂಶಯುಕ್ತ ಆಹಾರಗಳು ದೇಹದ ಸರ್ವಾಂಗೀಣ ಬೆಳವಣಿಗೆಗೆ ಅಗತ್ಯವಾಗಿದೆ. ಮೂರು ವರ್ಷಗಳ ಅವಧಿಯಲ್ಲಿ ನಡೆದ ಪೋಷಣ್ ಅಭಿಯಾನದಲ್ಲಿ ಹಮ್ಮಿಕೊಳ್ಳಲಾಗಿರುವ ಮುಖ್ಯ ಅಂಶಗಳ ಬಗ್ಗೆ ಮಾಹಿತಿ ನೀಡಿ, ಕೈತೋಟದ ರಚನೆ, ಯೋಗ ಮತ್ತು ಅಯುರ್ವೇದದ ಬಗ್ಗೆ ಮಾಹಿತಿ, ಅಪೌಷ್ಠಿಕತೆ ಇರುವ ಮಕ್ಕಳ ಆರೋಗ್ಯ ವರ್ಧನೆಗೆ ಕ್ರಮ, ಗರ್ಭಿಣಿ ಮತ್ತು ಬಾಣಂತಿಯರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದಲ್ಲದೆ ಗ್ರಾಮದಲ್ಲಿ ಕೋವಿಡ್ ಜಾಗೃತಿ, ಲಸಿಕಾ ಅಭಿಯಾನದ ಪ್ರಗತಿ ಬಗ್ಗೆ ಮಾಹಿತಿ ನೀಡಿದರು.

ಮುಖ್ಯ ಅಭ್ಯಾಗತರಾಗಿದ್ದ ಹಿರಿಯ ಪತ್ರಕರ್ತ ಬಿ. ಪುಂಡಲೀಕ ಮರಾಠೆ, ನಮ್ಮ ಹಿರಿಯರು ಹಾಗೂ ಈಗಿನ ಆಹಾರ ಶೈಲಿಯ ಬಗ್ಗೆ ಮಾಹಿತಿ ನೀಡಿ ಸ್ವಯಂ ಶಿಸ್ತು, ಸ್ವಚ್ಛತೆ, ಆರೋಗ್ಯಪೂರ್ಣ ದಿನಚರಿ ಬಗ್ಗೆ ತಿಳಿಸಿದರು.

ಉಡುಪಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ವೀಣಾ ವಿವೇಕಾನಂದ್ ಪ್ರಾಸ್ತಾವಿಕವಾಗಿ ಮಾತನಾಡಿ, ಪೋಷಣ್ ಅಭಿಯಾನ ಬಗ್ಗೆ ಮಾಹಿತಿ ನೀಡಿದರು.

ಬೆಳ್ಳೆ ಗ್ರಾಮ ಪಂಚಾಯತ್ ಅಧ್ಯಕ್ಷ ಸುಧಾಕರ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಸಂತಿಬಾ ಸ್ವಾಗತಿಸಿದರು.

ಕಾರ್ಯಕ್ರಮದಲ್ಲಿ ಗರ್ಭಿಣಿಯರಿಗೆ ಸಾಧಾರಣ ಅಪೌಷ್ಠಿಕತೆ ಇರುವ ಮಕ್ಕಳಿಗೆ ಹಣ್ಣುಹಂಪಲು ಕಿಟ್ ವಿತರಿಸಲಾಯಿತು.

ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸಂಧ್ಯಾ ಎಂ. ಶೆಟ್ಟಿ, ತಾ.ಪಂ. ಮಾಜಿ ಅಧ್ಯಕ್ಷ ದೇವದಾಸ ಹೆಬ್ಬಾರ್, ಸಾಮಾಜಿಕ ನ್ಯಾಯ ಸಮಿತಿಯ ಶಿಲ್ಪಾ, ಗ್ರಾ. ಪಂ. ಸದಸ್ಯರಾದ ಶಶಿಧರ ವಾಗ್ಲೆ, ರಾಜೇಂದ್ರ ಶೆಟ್ಟಿ, ರಂಜನಿ ಹೆಗ್ಡೆ, ಗುರುರಾಜ ಭಟ್, ಪರಶುರಾಮ ಭಟ್, ಪ್ರೇಮಾ ವೆಂಕಟೇಶ್, ಸಂತೋಷ್ ಕುಲಾಲ್, ಮೇರಿ ಡಿ’ಸೋಜ, ದಿವ್ಯಾ ಆಚಾರ್ಯ, ರಕ್ಷಿತಾ ಪೂಜಾರಿ ಇದ್ದರು.

ಸಂಗೀತಾ ಎಂ. ಕೆ. ನಿರೂಪಿಸಿದರು. ಮೇಲ್ವಿಚಾರಕಿ ಶೈಲಾ ವಂದಿಸಿದರು.

ಕಾರ್ಯಕ್ರಮದಲ್ಲಿ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಸ್ತ್ರೀಶಕ್ತಿ ಗುಂಪುಗಳು, ಶಾಲಾ ವಿದ್ಯಾರ್ಥಿಗಳು, ಶಿಕ್ಷಕ ವೃಂದ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!