Monday, July 4, 2022
Home ಸಮಾಚಾರ ಜಿಲ್ಲಾ ಸುದ್ದಿ ಪೊಲೀಸರ ಪರ ಬೀದಿಗಿಳಿದು ಹೋರಾಡಲು ಸಿದ್ಧ

ಪೊಲೀಸರ ಪರ ಬೀದಿಗಿಳಿದು ಹೋರಾಡಲು ಸಿದ್ಧ

ಆತ್ಮೀಯ ಓದುಗರೇ,
ಕೋವಿಡ್ ಅನ್ ಲಾಕ್ ಹೇಳಿಲ್ಲ; ಹೇಳಿದ್ದು ಸರ್ಕಾರ. ಇನ್ನೂ ಸಂಪೂರ್ಣ ಕೊರೊನಾ ತೊಲಗಿಲ್ಲ. ಹಾಗಾಗಿ ಸ್ವಚ್ಛತೆ ಕಾಪಾಡಿ, ಮಾಸ್ಕ್ ಧರಿಸಿ, ವ್ಯಕ್ತಿಗತ ಅಂತರ ಪಾಲಿಸಿ. ನೀವು ಸುರಕ್ಷಿತವಿರಿ, ಅನ್ಯರೂ ಸುರಕ್ಷಿತರಾಗಿರಲಿ. ಕೊರೊನಾದಿಂದ ರಕ್ಷಣೆ ನಮ್ಮ ಕೈಯ್ಯಲ್ಲೇ ಇದೆ. ಅಲ್ಲವೇ?
******************************

(ಸುದ್ದಿಕಿರಣ ವರದಿ)

ಉಡುಪಿ, ಜು. 10: ಭಾರತೀಯ ಯೋಧರ ಸಾವು ಬಯಸಿ ಪಾಕಿಸ್ತಾನಿ ಸೈನಿಕರ ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ದೇಶದ್ರೋಹಿಯನ್ನು ಕಾಂಗ್ರೆಸ್ ತನ್ನ ಕಾರ್ಯಕರ್ತ ಎಂದು ಸಮರ್ಥಿಸಿಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಬಿಜೆಪಿ ಹಿಂದುಳಿದ ವರ್ಗಗಳ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶಪಾಲ್ ಸುವರ್ಣ ವಿಷಾದ ವ್ಯಕ್ತಪಡಿಸಿದ್ದಾರೆ.

ಕಾರ್ಕಳದ ಹಿರ್ಗಾನ ನಿವಾಸಿ ರಾಧಾಕೃಷ್ಣ ನಾಯಕ್ ಎಂಬಾತ ಕೆಲವು ತಿಂಗಳ ಹಿಂದೆ ಭಾರತೀಯ ಸೇನೆಯ ವಿರುದ್ಧ ಅವಮಾನಕಾರಿ ಬರಹ ಬರೆದು ತಲೆಮರೆಸಿಕೊಂಡಿದ್ದು, ಈಚೆಗೆ ಆತನನ್ನು ಪೊಲೀಸರು ಕರೆದು ವಿಚಾರಣೆ ನಡೆಸಿದ್ದಾರೆ.

ದೇಶ ಕಾಯುವ ಸೈನಿಕರ ಸಾವನ್ನು ಬಯಸುವ ಇಂಥ ಹೀನ ಮನಸ್ಥಿತಿಯ ವ್ಯಕ್ತಿಯನ್ನು ವಿಚಾರಣೆ ಮಾಡದೆ ಮತ್ತೇನು ಠಾಣೆಯಲ್ಲಿ ಕೂರಿಸಿ ಮಂಗಳಾರತಿ ಎತ್ತಬೇಕಿತ್ತೇ ಎಂದು ಪ್ರಶ್ನಿಸಿರುವ ಯಶಪಾಲ್, ಈತನಿಗೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿರುವುದು ಸತ್ಯಕ್ಕೆ ದೂರವಾದ ಸಂಗತಿ.

ವಿಚಾರಣೆ ಬಳಿಕ ಸರಿಯಾಗಿ ನಡೆದುಕೊಂಡು ಮನೆಗೆ ಹೋದವನನ್ನು ಕಾಂಗ್ರೆಸ್ ನಾಯಕರೇ ಆಸ್ಪತ್ರೆಗೆ ಸೇರಿಸಿ ಪೋಲೀಸರ ಮೇಲೆ ಗೂಬೆ ಕೂರಿಸಲು ಯತ್ನಿಸುತ್ತಿದ್ದಾರೆ.

ಇಂಥ ವಿಕೃತ ವ್ಯಕ್ತಿಯ ಸಮರ್ಥನೆಗೆ ಸಿದ್ದರಾಮಯ್ಯ ಮೊದಲಾದ ಹಿಂದೂ ವಿರೋಧಿ ದೇಶವಿರೋಧಿ ರಾಜಕಾರಣಿಗಳು ಮುಂದಾಗಿರುವುದರಲ್ಲಿ ಯಾವುದೇ ಅಚ್ಚರಿ ಇಲ್ಲ. ಈ ಹಿಂದೆ ಸಿದ್ದರಾಮಯ್ಯ ಅವರು ಸಿಎಎ ವಿರೋಧಿ ದಂಗೆಕೋರರಿಗೂ, ಡಿ.ಜೆ ಹಳ್ಳಿಯ ದುಷ್ಕರ್ಮಿಗಳನ್ನೂ ಬೆಂಬಲಿಸಿ ಟ್ವೀಟ್ ಮಾಡಿದ್ದರು.

ಸಿದ್ದರಾಮಯ್ಯನವರ ಈ ಚಟುವಟಿಕೆಗಳನ್ನು ರಾಜ್ಯದ ಜನತೆ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಯಶಪಾಲ್ ಸುವರ್ಣ ಹೇಳಿದ್ದಾರೆ.

ಕಾರ್ಕಳ ನಗರ ಠಾಣಾ ಪೊಲೀಸ್ ಅಧಿಕಾರಿಗೆ ಸಂವಿಧಾನ ವ್ಯವಸ್ಥೆಯ ಮೇಲೆ ನಂಬಿಕೆ ಇರುವ ಪ್ರತಿಯೊಬ್ಬ ನಾಗರಿಕರ ಬೆಂಬಲವಿದೆ. ವಿನಾಕಾರಣ ಪೊಲೀಸ್ ಅಧಿಕಾರಿಗಳ ತೇಜೋವಧೆಗೆ ಮುಂದಾದಲ್ಲಿ, ಪೊಲೀಸರ ನೈತಿಕ ಸ್ಥೈರ್ಯ ಕುಗ್ಗಿಸಲು ಯತ್ನಿಸಿದಲ್ಲಿ ಕಾಂಗ್ರೆಸಿಗರ ವಿರುದ್ಧ ಬೀದಿಗಿಳಿದು ಪ್ರತಿಭಟಿಸಲು ಸಿದ್ಧ ಎಂದು ಯಶಪಾಲ್ ಸುವರ್ಣ ಎಚ್ಚರಿಕೆ ನೀಡಿದ್ದಾರೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!