Thursday, July 7, 2022
Home ಲೋಕಾಭಿರಾಮ ಆರೋಗ್ಯ ಸರ್ಜಿಕಲ್ ಗ್ಯಾಸ್ಟ್ರೋ ಎಂಟರಾಲಜಿ ವಿಭಾಗ ಉದ್ಘಾಟನೆ

ಸರ್ಜಿಕಲ್ ಗ್ಯಾಸ್ಟ್ರೋ ಎಂಟರಾಲಜಿ ವಿಭಾಗ ಉದ್ಘಾಟನೆ

ಸುದ್ದಿಕಿರಣ ವರದಿ
ಬುಧವಾರ, ಮಾರ್ಚ್ 16

ಸರ್ಜಿಕಲ್ ಗ್ಯಾಸ್ಟ್ರೋ ಎಂಟರಾಲಜಿ ವಿಭಾಗ ಉದ್ಘಾಟನೆ
ಮಣಿಪಾಲ: ಇಲ್ಲಿನ ಕಸ್ತೂರ್ಬಾ ವೈದ್ಯಕೀಯ ಕಾಲೇಜು (ಕೆಎಂಸಿ) ಮತ್ತು ಆಸ್ಪತ್ರೆಯಲ್ಲಿ ಸರ್ಜಿಕಲ್ ಗ್ಯಾಸ್ಟ್ರೋ ಎಂಟರಾಲಜಿ ವಿಭಾಗವನ್ನು ನವದೆಹಲಿ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಜಠರ ಕರುಳು ಮತ್ತು ಹೆಪಟೊ ಪ್ಯಾಂಕ್ರಿಯಾಟೋ ಬಿಲಿಯರಿ ಸರ್ಜಿಕಲ್ ಆಂಕೋಲಜಿ ವಿಭಾಗ ನಿರ್ದೇಶಕ ಡಾ ವಿವೇಕ್ ಮಂಗ್ಲಾ ಬುಧವಾರ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಸರ್ಜಿಕಲ್ ಗ್ಯಾಸ್ಟ್ರೋ ಎಂಟರಾಲಜಿ ವಿಭಾಗ 1980ರ ದಶಕದಲ್ಲಿ ಆರಂಭವಾಗಿ ಕ್ರಮೇಣ ಮೆಟ್ರೋ ನಗರಗಳಲ್ಲಿ ಅಭಿವೃದ್ಧಿಗೊಂಡಿತು. ಇಂದು ಮಣಿಪಾಲದಂಥ ಸಣ್ಣ ನಗರದಲ್ಲಿ ಪ್ರಾರಂಭವಾಗುತ್ತಿರುವುದು ಸಂತಸದಾಯಕ. ಅದರಿಂದ ಅಂಗಾಂಗ ಆಧರಿತ ವಿಶೇಷತೆಗಳಲ್ಲೊಂದಾದ ವಿಶೇಷ ವೈದ್ಯಕೀಯ ಸೌಲಭ್ಯ ಮನೆ ಬಾಗಿಲಲ್ಲೇ ದೊರೆತಂತಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಮಾಹೆ ಮಣಿಪಾಲ ಉಪಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ) ಎಂ. ಡಿ. ವೆಂಕಟೇಶ್, ಹೊಸ ವಿಶೇಷ ವಿಭಾಗ ಮತ್ತು ಉಪ ವಿಶೇಷ ವಿಭಾಗ ಪ್ರಾರಂಭಿಸುವ ಪ್ರಾಮುಖ್ಯತೆ ಕುರಿತು ಮಾತನಾಡಿದರು.

ಇಂಥ ಉಪ ವಿಶೇಷ ವಿಭಾಗಗಳು ಬೆಳೆಯಲು ಸಾಮಾನ್ಯ ವಿಶೇಷ ವಿಭಾಗಗಳು ಮಾತೃ ಇಲಾಖೆಯಾಗಿದೆ ಮತ್ತು ಯಾವುದೇ ಉಪ ವಿಶೇಷ ವಿಭಾಗಗಳ ಯಶಸ್ಸಿಗೆ ವೈದ್ಯರು ಮತ್ತು ಶುಶ್ರೂಷಾ ಶಕ್ತಿ ಬಹಳ ಮುಖ್ಯ ಎಂದರು.

ಅಭ್ಯಾಗತರಾಗಿದ್ದ ಬೆಂಗಳೂರು ಮಣಿಪಾಲ ಆಸ್ಪತ್ರೆ ಸರ್ಜಿಕಲ್ ಗ್ಯಾಸ್ಟ್ರೋ ಎಂಟರಾಲಜಿ ವಿಭಾಗ ಮುಖ್ಯಸ್ಥ ಮತ್ತು ಮುಖ್ಯ ಸಲಹೆಗಾರ ಡಾ. ನಾಗರಾಜ್ ಪಾಲಂಕರ್, ಕೆಎಂಸಿ ಆಸ್ಪತ್ರೆ ಕರ್ನಾಟಕ ಮಾತ್ರವಲ್ಲದೆ ಕೇರಳ, ಗೋವಾ ಸೇರಿದಂತೆ ನೆರೆಯ ರಾಜ್ಯಗಳ ಜನತೆಗೆ ಆರೋಗ್ಯ ಸೇವೆ ಒದಗಿಸುತ್ತಿದೆ ಎಂದರು.

ಮಾಹೆ ಮಣಿಪಾಲ ಸಹ ಉಪಕುಲಪತಿ (ವೈದ್ಯಕೀಯ ಮತ್ತು ದಂತ ವಿಜ್ಞಾನ) ಡಾ. ಪಿ.ಎಲ್.ಎನ್.ಜಿ. ರಾವ್ ಶುಭ ಹಾರೈಸಿದರು.

ಸರ್ಜಿಕಲ್ ಗ್ಯಾಸ್ಟ್ರೋ ಎಂಟರಾಲಜಿ ವಿಭಾಗ ಸಹಾಯಕ ಪ್ರಾಧ್ಯಾಪಕ ಡಾ. ಜಗನ್ ಮೋಹನ್ ಎಸ್. ಇದ್ದರು.

ಕೆಎಂಸಿ ಮಣಿಪಾಲ ಡೀನ್ ಡಾ. ಶರತ್ ಕುಮಾರ್ ರಾವ್ ಸ್ವಾಗತಿಸಿ, ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ವಂದಿಸಿದರು. ಸರ್ಜಿಕಲ್ ಗ್ಯಾಸ್ಟ್ರೋ ಎಂಟರಾಲಜಿ ವಿಭಾಗ ಮುಖ್ಯಸ್ಥ ಡಾ. ಭರತ್ ಕೆ. ಭಟ್ ಪ್ರಸ್ತಾವನೆಗೈದರು. ಡಾ. ಶ್ರೀದೇವಿ ನಿರೂಪಿಸಿದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!