Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ ಬೇಡಿಕೆ ಈಡೇರಿಕೆಗಾಗಿ ಸ್ವಿಗ್ಗಿ ಡೆಲಿವರಿ ಬಾಯ್ಸ್ ಪ್ರತಿಭಟನೆ

ಬೇಡಿಕೆ ಈಡೇರಿಕೆಗಾಗಿ ಸ್ವಿಗ್ಗಿ ಡೆಲಿವರಿ ಬಾಯ್ಸ್ ಪ್ರತಿಭಟನೆ

ಬೇಡಿಕೆ ಈಡೇರಿಕೆಗಾಗಿ ಸ್ವಿಗ್ಗಿ ಡೆಲಿವರಿ ಬಾಯ್ಸ್ ಪ್ರತಿಭಟನೆ

(ಸುದ್ದಿಕಿರಣ ವರದಿ)
ಉಡುಪಿ: ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸ್ವಿಗ್ಗಿ ಕಚೇರಿ ಬಳಿ ಸೋಮವಾರ ಡೆಲಿವರಿ ಬಾಯ್ಸ್ (ವಿತರಕರು) ಪ್ರತಿಭಟನೆ ನಡೆಸಿದರು.

ಸ್ವಿಗ್ಗಿ ಸಂಸ್ಥೆಯವರು ಕಡಿಮೆ ವೇತನ ನೀಡುತ್ತಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

ಸ್ವಿಗ್ಗಿ ಸಂಸ್ಥೆಯ ಡೆಲಿವರಿ ಬಾಯ್ಸ್ `ಸುದ್ದಿಕಿರಣ.ಕಾಂ’ನೊಂದಿಗೆ ಮಾತನಾಡಿ, `ಕಿ.ಮೀ. ಲೆಕ್ಕದಲ್ಲಿ ಸೂಕ್ತ ಹಣ ಪಾವತಿಸದೆ ಸಂಸ್ಥೆ ವಂಚಿಸುತ್ತಿದೆ. ಮಣಿಪಾಲದಿಂದ ಉಡುಪಿಗೆ 6 ಕಿ.ಮೀ. ಆಗುತ್ತದೆ. ಆದರೆ, ಕೇವಲ 2 ಕಿ.ಮೀ.ನ ಹಣ ಪಾವತಿಸಲಾಗುತ್ತಿದೆ. ಟಾರ್ಗೆಟ್ ನಲ್ಲಿ ಒಂದು ರೂಪಾಯಿ ಕಡಿಮೆಯಾದರೂ ಪ್ರೋತ್ಸಾಹ ಧನ ನೀಡುತ್ತಿಲ್ಲ. ಅದರೊಂದಿಗೆ ನಮ್ಮ ಡೆಲಿವರಿ ಬಾಯ್ ಗಳಿಗೆ ಅಪಘಾತವಾದಾಗಲೂ ಕಂಪೆನಿ ಅಧಿಕಾರಿಗಳಿಂದ ಸೂಕ್ತ ಸ್ಪಂದನೆ ಸಿಗುತ್ತಿಲ್ಲ.

500 ರೂ.ಗೆ 100 ರೂಪಾಯಿ ಪ್ರೋತ್ಸಾಹಧನ ನೀಡಲಾಗುತ್ತದೆ. ಒಂದುವೇಳೆ ಒಂದು ರೂ. ಕಡಿಮೆಯಾದರೂ ಆ ಪ್ರೋತ್ಸಾಹ ಧನ ಪಾವತಿಸಲಾಗುತ್ತಿಲ್ಲ. ಫ್ಲೋಟಿಂಗ್ ಕ್ಯಾಶ್ ಕಡಿಮೆ ಮಾಡಿ ನಂತರ ಕಾರ್ಯನಿರ್ವಹಿಸುತ್ತಿರುವ ಸಂದರ್ಭದಲ್ಲೇ ಖಾತೆ ಲಾಗೌಟ್ ಮಾಡುತ್ತಾರೆ. ಅದರಿಂದಾಗಿ ನಾವು ಬಹಳಷ್ಟು ಸಮಸ್ಯೆ ಅನುಭವಿಸುವಂತಾಗಿದೆ ಎಂದು ಆರೋಪಿಸಿದರು.

ಸಾಲದೆಂಬಂತೆ ಹೋಟೆಲ್ ಹಾಗೂ ರೆಸ್ಟೋರೆಂಟ್ ನಲ್ಲಿ ಗಂಟೆಗಟ್ಟಲೆ ಕಾಯುತ್ತ ಕುಳಿತುಕೊಳ್ಳಬೇಕಾದ ಪರಿಸ್ಥಿತಿಯಿದೆ.

ಈ ಹಿಂದೆ ಪ್ರತಿಭಟನೆ ನಡೆಸಿದಾಗ ಸಮಸ್ಯೆ ಪರಿಹರಿಸುವುದಾಗಿ ತಿಳಿಸಿದ್ದರು. ಆದರೆ, ಸ್ಥಳೀಯ ಮ್ಯಾನೇಜರ್ ಇತ್ತ ತಿರುಗಿಯೂ ನೋಡಿಲ್ಲ ಎಂದು ತಮ್ಮ ನೋವು ತೋಡಿಕೊಂಡರು.

ಉಡುಪಿ- ಮಣಿಪಾಲ ವಿಭಾಗದಲ್ಲಿ ಸುಮಾರು 150 ಮಂದಿ ಸ್ವಿಗ್ಗಿ ಡೆಲಿವರಿ ಬಾಯ್ ಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ದೈನಂದಿನ ಪ್ರೋತ್ಸಾಹಧನ ಹೆಚ್ಚಳ, ಸಾಪ್ತಾಹಿಕ ಪ್ರೋತ್ಸಾಹ ಧನ ಹೆಚ್ಚಳ, ಜಿ.ಪಿ.ಎಸ್ ವ್ಯವಸ್ಥೆ ಸರಿಪಡಿಸಬೇಕು, ಗ್ರಾಹಕರ ರೇಟಿಂಗ್ ಆಧಾರದಲ್ಲಿ ಕೊಡುವ ಪ್ರೋತ್ಸಾಹಧನ ತೆಗೆದುಹಾಕಬೇಕು. ಅದರಿಂದಾಗಿ ಸಂಸ್ಥೆ ಕಡೆಯಿಂದ ನಕಲಿ ರೇಟಿಂಗ್ ನೀಡುವ ಸಾಧ್ಯತೆಯಿದೆ. ಫ್ಲೋಟಿಂಗ್ ನಗದು ಮಿತಿ ಹೆಚ್ಚಿಸಬೇಕು ಎಂಬಿತ್ಯಾದಿ 13 ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನಾಕಾರರು ಪ್ರತಿಭಟನೆ ನಡೆಸುತ್ತಿದ್ದಾರೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!