Monday, August 15, 2022
Home ಸಮಾಚಾರ ರಾಜ್ಯ ವಾರ್ತೆ `ಉದಯವಾಣಿ' ಸಂಸ್ಥಾಪಕ ಟಿ. ಮೋಹನದಾಸ್ ಪೈ ವಿಧಿವಶ

`ಉದಯವಾಣಿ’ ಸಂಸ್ಥಾಪಕ ಟಿ. ಮೋಹನದಾಸ್ ಪೈ ವಿಧಿವಶ

ಸುದ್ದಿಕಿರಣ ವರದಿ
ಭಾನುವಾರ, ಜುಲೈ 31

 ಉದಯವಾಣಿ ಸಂಸ್ಥಾಪಕ ಟಿ. ಮೋಹನದಾಸ್ ಪೈ ವಿಧಿವಶ
ಉಡುಪಿ: ಮಣಿಪಾಲದ ಪೈ ಕುಟುಂಬದ ಹಿರಿಯ, ವಿವಿಧ ಸಂಘಸಂಸ್ಥೆಗಳಲ್ಲಿ ತೆರೆಮರೆಯಲ್ಲಿದ್ದು ಮಾರ್ಗದರ್ಶನ ನೀಡಿ ಮುನ್ನಡೆಸುತ್ತಿದ್ದ ತೋನ್ಸೆ ಮೋಹನದಾಸ್ ಪೈ (89) ಅಸೌಖ್ಯದಿಂದ ಭಾನುವಾರ ಇಲ್ಲಿನ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

ಮೃತರು ಸಹೋದರರಾದ ಡಾ. ಟಿ. ರಾಮದಾಸ್ ಪೈ, ಟಿ. ನಾರಾಯಣ ಪೈ, ಟಿ. ಅಶೋಕ್ ಪೈ, ಸಹೋದರಿಯರಾದ ವಸಂತಿ ಆರ್. ಶೆಣೈ, ಜಯಂತಿ ಪೈ, ಇಂದುಮತಿ ಪೈ, ಆಶಾ ಪೈ, ಸಹೋದರ ಟಿ. ಸತೀಶ್ ಯು. ಪೈ ಅವರನ್ನು ಅಗಲಿದ್ದಾರೆ.

ಅನಾರೋಗ್ಯಪೀಡಿತರಾಗಿ ಈಚೆಗೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಪೈ ಕುಟುಂಬದ ಎಲ್ಲ ಸದಸ್ಯರು, ಭಾವ ಡಾ. ಬಾಲಕೃಷ್ಣ ಪೈ ಮೊದಲಾದವರು ಜೊತೆಯಲ್ಲಿದ್ದು ಆರೈಕೆಯಲ್ಲಿ ತೊಡಗಿದ್ದರು.
ಆಧುನಿಕ ಮಣಿಪಾಲದ ಶಿಲ್ಪಿ ಡಾ. ಟಿ.ಎಂ.ಎ. ಪೈ ಹೆಸರಿನ ಡಾ. ಟಿಎಂಎ ಪೈ ಪ್ರತಿಷ್ಠಾನ, ಡಾ. ಟಿಎಂಎ ಪೈ ಸ್ಥಾಪಿಸಿದ ಮೊದಲ ಕಾಲೇಜು ಶಿಕ್ಷಣ ಸಂಸ್ಥೆ ಎಂಜಿಎಂ ಕಾಲೇಜಿನ ಟ್ರಸ್ಟಿ, ಸಿಂಡಿಕೇಟ್ ಬ್ಯಾಂಕಿನ ಪೂರ್ವ ರೂಪ ಐಸಿಡಿಎಸ್ ಲಿ., `ಉದಯವಾಣಿ’ಯನ್ನು ನಡೆಸುತ್ತಿರುವ ಮಣಿಪಾಲ್ ಮೀಡಿಯ ನೆಟ್ ವರ್ಕ್ ಲಿ. ಮೊದಲಾದ ಸಂಸ್ಥೆಗಳ ಅಧ್ಯಕ್ಷರಾಗಿ ಹೀಗೆ ಹಲವು ಸಂಸ್ಥೆಗಳ ಬೆಳವಣಿಗೆಗೆ ಕಾರಣರಾಗಿದ್ದರು.

ಕಾನೂನು ಪದವಿಯಲ್ಲಿ ಮೊದಲ ರ್ಯಾಂಕ್
1933ರ ಜೂ. 20ರಂದು ಜನಿಸಿದ ಮೋಹನದಾಸ್ ಪೈ, ಡಾ. ಟಿಎಂಎ ಪೈಯವರ ಹಿರಿಯ ಪುತ್ರ. ಅವರು ಮೂರು ವರ್ಷದವರಿರುವಾಗಲೇ ತಂದೆಯವರು ಉಡುಪಿಯಿಂದ ಮಣಿಪಾಲಕ್ಕೆ ಸ್ಥಳಾಂತರಗೊಂಡ ಕಾರಣ ಇವರೂ ಮಣಿಪಾಲದಲ್ಲಿ ಬೆಳೆದರು. ತಂದೆ ಆರಂಭಿಸಿದ ಹೊಸ ಶಾಲೆಯಲ್ಲಿ (ಮಣಿಪಾಲ ಅಕಾಡೆಮಿ ಶಾಲೆ), ಉಡುಪಿಯ ಮೋಡರ್ನ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಉಡುಪಿಯ ಬೋರ್ಡ್ ಹೈಸ್ಕೂಲ್ ನಲ್ಲಿ ಪ್ರೌಢಶಾಲಾ ಶಿಕ್ಷಣ ಪಡೆದರು. ಬಳಿಕ ತಂದೆಯವರು ನೂತನವಾಗಿ ಆರಂಭಿಸಿದ ಎಂಜಿಎಂ ಕಾಲೇಜಿನಲ್ಲಿ (1949- 51) ಇಂಟರ್ ಮೀಡಿಯೆಟ್ ಶಿಕ್ಷಣ ಪಡೆದರು.

ಎಂಜಿಎಂ ಕಾಲೇಜಿನ ಮೊದಲ ತಂಡದ ವಿದ್ಯಾರ್ಥಿಯಾಗಿದ್ದ ಮೋಹನದಾಸ ಪೈ, ಕೊಲ್ಹಾಪುರದಲ್ಲಿ ಕಾನೂನು ಶಿಕ್ಷಣ ಪಡೆದು (1951-53) ಪುಣೆ ವಿ.ವಿ.ಯಲ್ಲಿ ಪ್ರಥಮ ರ್ಯಾಂಕ್ ಗಳಿಸಿದ್ದರು. ಆಗ ಕಾನೂನು ಪದವಿ ಅಧ್ಯಯನ ನಡೆಸಲು ಇಲ್ಲಿ ಅವಕಾಶವಿರಲಿಲ್ಲ. ಕರಾವಳಿ ಪ್ರದೇಶ ಮದ್ರಾಸ್ ಪ್ರಾಂತ್ಯಕ್ಕೆ ಸೇರಿದ್ದ ಕಾರಣ ಒಂದೋ ಮದ್ರಾಸ್ ಗೆ ತೆರಳಬೇಕಿತ್ತು. ಇಲ್ಲವಾದರೆ ಮುಂಬಯಿ ಪ್ರಾಂತ್ಯಕ್ಕೆ ಹೋಗಬೇಕಿತ್ತು. ಕರಾವಳಿಯವರಿಗೆ ಮದ್ರಾಸ್ ಗಿಂತ ಮುಂಬಯಿ ಪ್ರಾಂತ್ಯ ಹೆಚ್ಚು ಪರಿಚಿತವಾಗಿದ್ದರಿಂದ ಅವರು ಮುಂಬಯಿ ಪ್ರಾಂತ್ಯದ ಕೊಲ್ಹಾಪುರಕ್ಕೆ ಹೋದರು.

ವೃತ್ತಿ ಪ್ರವೇಶ
ಶಿಕ್ಷಣದ ಬಳಿಕ ತಂದೆ ಆರಂಭಿಸಿದ ಸಂಸ್ಥೆಗಳಲ್ಲಿ ತೊಡಗಿದರು. ಅವರು ಮೊದಲಾಗಿ ಪ್ರವೇಶಿಸಿದ್ದು ಮಣಿಪಾಲದಲ್ಲಿ ಹೆಂಚಿನ ಕಾರ್ಖಾನೆ ನಡೆಸುತ್ತಿದ್ದ ಕೆನರಾ ಲ್ಯಾಂಡ್ ಇನ್ ವೆಸ್ಟ್ ಮೆಂಟ್ ನ ಜನರಲ್ ಮೆನೇಜರ್ ಆಗಿ. ಜೊತೆಗೆ ಮಣಿಪಾಲ್ ಪವರ್ ಪ್ರೆಸ್ ನ ಆಡಳಿತ ಪಾಲುದಾರರಾಗಿ ಹೆಚ್ಚುವರಿ ಹೊಣೆಗಾರಿಕೆ ವಹಿಸಿಕೊಂಡರು.

ಆಡಳಿತ ತಜ್ಞ ಯೋಜನಜ್ಞ
ಪೈಯವರು ಆಡಳಿತ ಮತ್ತು ಹಣಕಾಸು ಯೋಜನೆಯ ಜವಾಬ್ದಾರಿ ನೋಡಿಕೊಂಡಿದ್ದರೆ ಟಿ. ಸತೀಶ್ ಪೈ ಉತ್ಪಾದನೆಯ ಜವಾಬ್ದಾರಿ ನೋಡಿಕೊಂಡಿರುತ್ತಿದ್ದರು. ಹೊಸ ರೀತಿ ಆಟೋಮೆಟಿಕ್ ಟೈಪ್ ಸೆಟ್ಟಿಂಗ್ ಮೆಶಿನ್ ಮತ್ತು ಮುದ್ರಣ ಯಂತ್ರವನ್ನು ಗುಣಮಟ್ಟದ ಮುದ್ರಣಕ್ಕಾಗಿ ಹೊರದೇಶದಿಂದ ತರಿಸಲಾಯಿತು.

1961ರಲ್ಲಿ ಪುಸ್ತಕದ ಗುಣಮಟ್ಟದ ಮುದ್ರಣಕ್ಕಾಗಿ ಪ್ರೆಸ್ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದುಕೊಂಡಿತು. ಬಳಿಕ ಹಲವು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರಶಸ್ತಿಗಳು ಮಣಿಪಾಲ್ ಪ್ರೆಸ್ ಗೆ ಬಂದವು. ಅತ್ಯಾಧುನಿಕ ಆಫ್ ಸೆಟ್ ಮೆಶಿನ್, ಫೋಟೋ ಕಂಪೋಸಿಂಗ್ ನೊಂದಿಗೆ ಮುದ್ರಣ ಕ್ಷೇತ್ರದಲ್ಲಿ ದಾಪುಗಾಲು ಇರಿಸಿರುವುದರಲ್ಲಿ ಮೋಹನದಾಸ್ ಪೈಯವರ ಅಪಾರ ಕೊಡುಗೆ ಇದೆ. ಆ ಮೂಲಕ ಮಣಿಪಾಲ ಪ್ರೆಸ್ ರಾಷ್ಟ್ರ ಮಟ್ಟದ ಮಾನ್ಯತೆ ಪಡೆಯಿತು. ಮೈಸೂರು, ಕರ್ನಾಟಕ ವಿ.ವಿ.ಗಳ ಮತ್ತು ವಿವಿಧ ಪ್ರಕಾಶನ ಸಂಸ್ಥೆಗಳ ಪಠ್ಯ ಪುಸ್ತಕಗಳನ್ನು ಮುದ್ರಿಸಿದ ಕೀರ್ತಿ ಈಗಲೂ ಮುನ್ನಡೆಯುತ್ತಿದೆ.

ಉದಯವಾಣಿ ಶಕೆ
1970ರಲ್ಲಿ ಪೈಯವರ ಮುಂದಾಳತ್ವದಲ್ಲಿ `ಉದಯವಾಣಿ’ ದಿನ ಪತ್ರಿಕೆ ಆರಂಭವಾಗಿ ಅಲ್ಪಾವಧಿಯಲ್ಲಿಯೇ ಜನಪ್ರಿಯಗೊಂಡಿತು. ಮೋಹನದಾಸ್ ಪೈ ಆಡಳಿತ ನಿರ್ದೇಶಕರಾಗಿ, ಸತೀಶ್ ಪೈ ಜಂಟಿ ಆಡಳಿತ ನಿರ್ದೇಶಕರಾಗಿರುವ ಮಣಿಪಾಲ್ ಪ್ರಿಂಟರ್ಸ್ ಆ್ಯಂಡ್ ಪಬ್ಲಿಷರ್ಸ್ ಲಿ.ನಿಂದ ಉದಯವಾಣಿ ಆರಂಭಗೊಂಡಿತು.

ವೆಬ್ ಆಫ್ ಸೆಟ್ ಯಂತ್ರದಿಂದ ಮುದ್ರಣ ಕಾರ್ಯ ಆರಂಭಿಸಿದ ಅತ್ಯಂತ ಹಿರಿಯ ದಿನ ಪತ್ರಿಕೆಗಳಲ್ಲಿ ಉದಯವಾಣಿಯೂ ಒಂದು. ಪೈಯವರ ಸಮರ್ಥ ನಾಯಕತ್ವದಲ್ಲಿ `ಉದಯವಾಣಿ’ ಗುಣಮಟ್ಟದ ಮುದ್ರಣಕ್ಕಾಗಿ ಹಲವು ವರ್ಷ ನಿರಂತರವಾಗಿ ರಾಷ್ಟ್ರ ಮಟ್ಟದ ಪ್ರಶಸ್ತಿಗಳನ್ನು ಪಡೆದುಕೊಂಡಿತು.

ತರಂಗ ಶಕೆ
1983ರಲ್ಲಿ ಆರಂಭಗೊಂಡ `ತರಂಗ’ ವಾರಪತ್ರಿಕೆಯೂ ಮೋಹನದಾಸ್ ಪೈ ಕನಸಿನ ಕೂಸು. ಮುಖಪುಟ ಮತ್ತು ಒಳಪುಟಗಳನ್ನು ಕಲರ್ ನಲ್ಲಿ ಮುದ್ರಿಸಲು ಬೇಕಾದ ಅಲ್ಟ್ರಾ ಮೋಡರ್ನ್ ವೆಬ್ ಆಫ್ ಸೆಟ್ ಯಂತ್ರ ಸ್ಥಾಪಿಸಲಾಯಿತು. ತರಂಗಕ್ಕೆ ಅಗತ್ಯವಾದ ಸ್ವಯಂಚಾಲಿತ ಬೈಂಡಿಂಗ್ ಯಂತ್ರವನ್ನೂ ಅಳವಡಿಸಲಾಯಿತು. ಆ ಗುಣಮಟ್ಟಕ್ಕಾಗಿ 2 ಲಕ್ಷ ಪ್ರಸರಣ ಸಂಖ್ಯೆ ದಾಟಿತು.

ವಿದೇಶ ಪ್ರವಾಸಾನುಭವ
ಯುನೈಟೆಡ್ ಕಿಂಗ್ ಡಮ್, ಯೂರೋಪ್, ಅಮೆರಿಕ, ಜಪಾನ್ ಮೊದಲಾದ ದೇಶಗಳಲ್ಲಿ ಸಂಚರಿಸಿದ ಪೈ, ದ್ರುಪ (ಜರ್ಮನಿ), ಐಪೆಕ್ ಸ್ (ಯುಕೆ), ಪ್ರಿಂಟ್ (ಶಿಕಾಗೋ, ಅಮೆರಿಕ) ಮೊದಲಾದ ಮುದ್ರಣ ವಸ್ತುಪ್ರದರ್ಶನಗಳಲ್ಲಿ ಪಾಲ್ಗೊಂಡು ಅಲ್ಲಿನ ಅನುಭವಗಳನ್ನು, ಹೊಸ ಹೊಸ ತಂತ್ರಜ್ಞಾನಗಳನ್ನು ಮಣಿಪಾಲದಲ್ಲಿ ಅಳವಡಿಸಲು ಪ್ರಯತ್ನಿಸಿ ಅದರಲ್ಲಿ ಯಶಸ್ಸು ಕಂಡಿದ್ದಾರೆ. ವಿದೇಶಗಳ ಪತ್ರಿಕೆಗಳ ವಿನ್ಯಾಸ, ಸುದ್ದಿ ವಿಶ್ಲೇಷಣೆಗಳನ್ನು ಗಮನಿಸಿ ಉದಯವಾಣಿಯಲ್ಲಿ ಜಾರಿಗೆ ತರಲು ಶ್ರಮಿಸಿದರು.

ಮಣಿಪಾಲ ಪ್ರಿಂಟರ್ಸ್ ಆ್ಯಂಡ್ ಪಬ್ಲಿಷರ್ಸ್ ಲಿ. ಹೆಸರನ್ನು ಮಣಿಪಾಲ್ ಮೀಡಿಯ ನೆಟ್ ವಕರ್್ ಲಿ. ಎಂದು ಬದಲಾಯಿಸಲಾಯಿತು. ಅದರ ಅಧೀನದಲ್ಲಿ ಮಣಿಪಾಲ, ಬೆಂಗಳೂರು, ಹುಬ್ಬಳ್ಳಿ, ಕಲಬುರಗಿ, ದಾವಣಗೆರೆ, ಮುಂಬಯಿಯಿಂದ ಮುದ್ರಣಗೊಳ್ಳುವ ಉದಯವಾಣಿ, ತರಂಗ ವಾರಪತ್ರಿಕೆ, ರೂಪತಾರ ಚಲನಚಿತ್ರ ಮಾಸ ಪತ್ರಿಕೆ, ತುಷಾರ ಮಾಸಿಕ ಡೈಜೆಸ್ಟ್ ಮುದ್ರಣಗೊಂಡು ಓದುಗರನ್ನು ಸೆಳೆಯುತ್ತಿದೆ.

ಗೌರವ
ಕರ್ನಾಟಕ ಪತ್ರಿಕಾ ಅಕಾಡೆಮಿ ಪತ್ರಿಕಾ ರಂಗದ ಕ್ಷೇತ್ರಕ್ಕಾಗಿ ಸಲ್ಲಿಸಿದ ಕೊಡುಗೆಗಾಗಿ ಮಣಿಪಾಲ್ ಪ್ರಿಂಟರ್ಸ್ ಆ್ಯಂಡ್ ಪಬ್ಲಿಷರ್ಸ್ ಲಿ.ಗೆ ನೀಡಿದ ಪ್ರಶಸ್ತಿಯನ್ನು ಮೋಹನದಾಸ್ ಪೈ ಸ್ವೀಕರಿಸಿದ್ದರು. ಇಂಡಿಯನ್ ನ್ಯೂಸ್ ಪೇಪರ್ ಸೊಸೈಟಿ (ಐಎನ್.ಎಸ್) ಕಾರ್ಯನಿರ್ವಾಹಕ ಸಮಿತಿಯ ಸದಸ್ಯರಾಗಿ ಎರಡು ಅವಧಿಗೆ ಸೇವೆ ಸಲ್ಲಿಸಿದ್ದರು.
ಐಸಿಡಿಎಸ್ ಜಂಟಿ ಆಡಳಿತ ನಿರ್ದೇಶಕರಾಗಿ 1989ರಲ್ಲಿ ನೇಮಕಗೊಂಡ ಪೈ, 1995ರಲ್ಲಿ ಆಡಳಿತ ನಿರ್ದೇಶಕರಾದರು. ಬಳಿಕ ಚೆಯರ್ ಮ್ಯಾನ್ ಮತ್ತು ಆಜೀವ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು.

ಎಂಜಿಎಂ ಕಾಲೇಜು ಟ್ರಸ್ಟ್ ಅಧ್ಯಕ್ಷರಾಗಿ ಅದೇ ವೇಳೆ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಪ್ರಾದೇಶಿಕ ಜಾನಪದ ರಂಗಕಲೆಗಳ ಸಂಶೋಧನ ಕೇಂದ್ರ, ಎಂಜಿಎಂ ಯಕ್ಷಗಾನ ಕೇಂದ್ರದ ಅಧ್ಯಕ್ಷರಾಗಿಯೂ ಆ ಸಂಸ್ಥೆಗಳ ಅಭಿವೃದ್ಧಿಗೆ ಅಪಾರ ಕೊಡುಗೆ ಸಲ್ಲಿಸಿದ್ದಾರೆ.

ಸಾಂಸ್ಕೃತಿಕ ಪ್ರೀತಿ
ಡಾ. ಟಿಎಂಎ ಪೈ ಉಪಯೋಗಿಸುತ್ತಿದ್ದ ಪರಿಕರಗಳನ್ನು ಮಣಿಪಾಲದ `ಸ್ಮೃತಿ ಭವನ’ (ಮ್ಯೂಸಿಯಂ)ದಲ್ಲಿ ಕಾಪಿಡಲು ವಿಶೇಷ ಶ್ರಮ ವಹಿಸಿದ್ದರು. ವಿವಿಧ ರೀತಿಗಳ ಕಲೆಗಳಲ್ಲಿ ಅತ್ಯಾಸಕ್ತರಾಗಿದ್ದ ಮೋಹನದಾಸ್ ಪೈ, ತನ್ನ ಆಸಕ್ತಿಯನ್ನು ಮಣಿಪಾಲದ ವಿಜಯನಾಥ ಶೆಣೈಯವರೊಡಗೂಡಿ ಬಹುಮುಖದ ಸಾಂಸ್ಕೃತಿಕ ತಾಣವೆನಿಸಿದ ಹೆರಿಟೇಜ್ ವಿಲೇಜ್ ರೂಪಿಸುವಲ್ಲಿ ಯೋಗದಾನ ಮಾಡಿದ್ದಾರೆ.

ಸಾರ್ವಜನಿಕ ರಂಗದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳದ ಪೈ, ತಂದೆಯ ಮಾದರಿಯಲ್ಲಿ ಆಧುನಿಕ ಕರ್ನಾಟಕದ ಶಿಲ್ಪಿ ಎನಿಸಿಕೊಂಡಿದ್ದಾರೆ. ಪತ್ರಿಕೋದ್ಯಮದ ಮೂಲಕ ಕರಾವಳಿ ಕರ್ನಾಟಕದ ಅಭಿವೃದ್ಧಿಯಲ್ಲಿ ಅವರಿಗೆ ದೂರದೃಷ್ಟಿ ಇತ್ತು.

ಮೋಹನದಾಸ ಪೈ ಅವರ ಕಳೇಬರದ ಸಾರ್ವಜನಿಕ ಅಂತಿಮ ದರ್ಶನಕ್ಕಾಗಿ ಆಗಸ್ಟ್ 1ರ ಬೆಳಗ್ಗೆ 9ರಿಂದ 11 ಗಂಟೆ ವರೆಗೆ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಅವಕಾಶ ಕಲ್ಪಿಸಲಾಗಿದೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!