Sunday, July 3, 2022
Home ಸಮಾಚಾರ ಜಿಲ್ಲಾ ಸುದ್ದಿ ನವ ಭಾರತ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ವಪೂರ್ಣ

ನವ ಭಾರತ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ವಪೂರ್ಣ

ನವ ಭಾರತ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ವಪೂರ್ಣ

(ಸುದ್ದಿಕಿರಣ ವರದಿ)
ಉಡುಪಿ: ವಿದ್ಯಾರ್ಥಿಗಳ ಮೂಲಕ ಭವಿಷ್ಯದ ಭಾರತ ನಿರ್ಮಾಣ ಮಾಡುವ ಹೊಣೆಗಾರಿಗೆ ಶಿಕ್ಷಕರಿಗಿದ್ದು, ದೇಶದ ಹಲವು ಸಮಸ್ಯೆಗಳನ್ನು ಬಗೆಹರಿಸಿ, ಮುಂದಿನ ಪ್ರಜೆಗಳಾಗಲಿರುವ ಇಂದಿನ ಮಕ್ಕಳ ಭವಿಷ್ಯದ ಬಾಳ್ವೆ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ರಾಜ್ಯದ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ಹೇಳಿದರು.

ಸೈಂಟ್ ಸಿಸಿಲಿ ಪ್ರೌಢಶಾಲೆಯಲ್ಲಿ ಭಾನುವಾರ ಜಿ. ಪಂ., ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಸಮಿತಿ ಸಹಯೋಗದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ದೇಶದ ಸ್ವಾತಂತ್ರ್ರ್ಯದ ಅಮೃತ ಮಹೋತ್ಸವದ ಈ ಸಮಯದಲ್ಲಿಯೂ ಸ್ವಾತಂತ್ರ್ಯ ಪೂರ್ವದ ಹಲವು ಸಮಸ್ಯೆಗಳೊಂದಿಗೆ ಹಲವು ಹೊಸ ಸಮಸ್ಯೆ ಸೃಷ್ಟಿಯಾಗಿದೆ. ಅವುಗಳ ಪರಿಹಾರಕ್ಕೆ ಪ್ರಧಾನಿ ಆಶಯದ ನವ ಭಾರತ ನಿರ್ಮಾಣದ ಸಾಕಾರ ಶಾಲೆಗಳಿಂದಲೇ ಆರಂಭವಾಗಬೇಕಿದೆ. ಈ ನಿಟ್ಟಿನಲ್ಲಿ ಶಿಕ್ಷಕರು ಉತ್ತಮ ವ್ಯಕ್ತಿತ್ವದ ವಿದ್ಯಾರ್ಥಿಗಳನ್ನು ನಿರ್ಮಾಣ ಮಾಡುವ ಮೂಲಕ ನವ ಭಾರತ ನಿರ್ಮಾಣಕ್ಕೆ ಬದ್ಧರಾಗಬೇಕು ಎಂದರು.

ಕೇಂದ್ರ ಸರ್ಕಾರ ಹೊಸ ಶಿಕ್ಷಣ ನೀತಿ ರೂಪಿಸಿದ್ದು, ಅದರಲ್ಲಿನ ಅಂಶಗಳ ಕುರಿತು ಶಿಕ್ಷಕರು ತಿಳಿದುಕೊಂಡು ಅದನ್ನು ದೊಡ್ಡ ಪ್ರಮಾಣದಲ್ಲಿ ವಿದ್ಯಾರ್ಥಿಗಳಿಗೆ ಹಸ್ತಾಂತರಿಸುವುದರಿಂದ ದೇಶದಲ್ಲಿ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗಲಿದೆ ಎಂದರು.

ಶಿಕ್ಷಕನ ಮಗ ಎಂಬ ಹೆಮ್ಮೆ
ನಾನು ಶಿಕ್ಷಕನ ಮಗ ಎಂಬ ಹೆಮ್ಮೆ ನನಗಿದೆ. ನನ್ನ ತಂದೆ ಹೈಸ್ಕೂಲ್ ಶಿಕ್ಷಕರಾಗಿ, ಕಾಲೇಜು ಉಪನ್ಯಾಸಕರಾಗಿ ಅನೇಕ ಮಂದಿ ವಿದ್ಯಾರ್ಥಿಗಳಲ್ಲಿ ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕೆ ಕಾರಣರಾಗಿದ್ದರು. ನನ್ನ ಶಾಲಾ ದಿನಗಳಲ್ಲಿ ಉತ್ತಮ ಶಿಕ್ಷಕರು ಲಭಿಸಿದ್ದರ ಪರಿಣಾಮ ನಾನಿಂದು ಈ ಮಟ್ಟಿಗೆ ಬೆಳೆಯಲು ಕಾರಣವಾಯಿತು ಎಂದ ಸಚಿವ ಸುನಿಲ್, ಬದಲಾಗುತ್ತಿರುವ ಶಿಕ್ಷಣ ಪದ್ಧತಿಯಲ್ಲಿ ಮಕ್ಕಳಿಗೆ ಪೂರಕವಾಗುವ ಶಿಕ್ಷಣ ನೀಡಬೇಕು ಎಂದು ಶಿಕ್ಷಕರಲ್ಲಿ ಮನವಿ ಮಾಡಿದರು.

ಶಿಕ್ಷಕರ ಹೊಣೆಗಾರಿಕೆ
ಶಿಕ್ಷಣದಿಂದ ವ್ಯಕ್ತಿತ್ವ ನಿರ್ಮಾಣವಾಗಬೇಕು ಎಂಬ ಸ್ವಾಮಿ ವಿವೇಕಾನಂದರ ಆಶಯ, ಶಿಕ್ಷಣದಿಂದ ಸಾಮಾಜಿಕ ಪರಿವರ್ತನೆ ಆಗಬೇಕು ಎಂಬ ಗಾಂಧಿ ಚಿಂತನೆ, ಶಿಕ್ಷಣದಿಂದ ಹೊಸ ಆಲೋಚನೆ ಮೂಡಬೇಕು ಎಂಬ ಓಶೋ ಅಭಿಲಾಷೆ, ವಿದ್ಯಾರ್ಥಿಗಳಲ್ಲಿ ಸಂಶೋಧನೆ ಪ್ರವೃತ್ತಿ ಬೆಳೆಯಬೇಕೆಂಬದ ಅಬ್ದುಲ್ ಕಲಾಂ ಬಯಕೆ ಇಂದಿನ ಶಿಕ್ಷಣದಿಂದ ಸಾಧ್ಯವಾಗುತ್ತಿದೆಯೇ ಎಂದು ಯೋಚಿಸಬೇಕಾಗಿದೆ. ಬದಲಾದ ಕಾಲ ಪರಿಸ್ಥಿತಿಗೆ ಒಗ್ಗಿಕೊಂಡು ಶಿಕ್ಷಣ ನೀಡಬೇಕಾದ ಹೊಣೆಗಾರಿಕೆ ಶಿಕ್ಷಕರಿಗಿದೆ ಎಂದರು.

ಹೆಚ್ಚುವರಿ ನಿರ್ವಹಣೆ
ಜಿಲ್ಲಾಧಿಕಾರಿ ಕೂರ್ಮರಾವ್ ಎಂ. ಮಾತನಾಡಿ, ವಿದ್ಯಾರ್ಥಿಗಳಲ್ಲಿನ ಪ್ರತಿಭೆಯನ್ನು ಹೊರತರುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಪ್ರಮುಖವಾದುದು. ಕೋವಿಡ್ ಸಂಕಷ್ಟದಲ್ಲಿಯೂ ಜಿಲ್ಲೆಯ ಶಿಕ್ಷಕರು ಜಿಲ್ಲಾಡಳಿತ ಸೂಚಿಸಿರುವ ಹೆಚ್ಚುವರಿ ಕರ್ತವ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದು, ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.

ಶಿಕ್ಷಕರಿಂದ ಜಿಲ್ಲೆಗೆ ಹೆಗ್ಗಳಿಕೆ
ಅಧ್ಯಕ್ಷತೆ ವಹಿಸಿದ್ದ ಶಾಸಕ ರಘುಪತಿ ಭಟ್ ಮಾತನಾಡಿ, ಜಿಲ್ಲೆಯಲ್ಲಿ ಹಿಂದಿನ ಶಿಕ್ಷಕರು ಮತ್ತು ಈಗಿನ ಶಿಕ್ಷಕರು ಶೈಕ್ಷಣಿಕ ಗುಣಮಟ್ಟ ಉಳಿಸಿ ಬೆಳೆಸಿ ಉತ್ತಮ ಸೇವೆ ಸಲ್ಲಿಸಿರುವ ಕಾರಣ ಜಿಲ್ಲೆಗೆ ರಾಜ್ಯದಲ್ಲಿ ಅತ್ಯುತ್ತಮ ಶೈಕ್ಷಣಿಕ ಜಿಲ್ಲೆ ಎಂಬ ಹೆಗ್ಗಳಿಕೆ ಇದೆ ಎಂದರು.

ಇದೇ ಸಂದರ್ಭದಲ್ಲಿ ಬಿಂಬ ವಾರ್ಷಿಕ ಸಂಚಿಕೆ ಮತ್ತು ಶಿಕ್ಷಕರ ಗುರುತಿನ ಚೀಟಿಯನ್ನು ಸಚಿವ ಸುನಿಲ್ ಕುಮಾರ್ ಬಿಡುಗಡೆ ಮಾಡಿದರು.

ಜಿಲ್ಲಾ ಪ್ರಶಸ್ತಿ ಪುರಸ್ಕೃತ 17 ಮಂದಿ ಶಿಕ್ಷಕರು ಮತ್ತು 43 ಮಂದಿ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು.

ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ರಾಘವೇಂದ್ರ ಕಿಣಿ, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್, ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು ಇದ್ದರು.
ಡಿಡಿಪಿಐ ಎನ್. ಎಚ್. ನಾಗೂರ ಸ್ವಾಗತಿಸಿದರು. ಉಡುಪಿ ಬಿಇಓ ನಾಗೇಂದ್ರಪ್ಪ ವಂದಿಸಿದರು. ಬಿಆರ್.ಪಿ ನಿರ್ಮಲಾ ಮತ್ತು ಟಿಪಿಓ ಗೋಪಾಲ ಶೆಟ್ಟಿ ನಿರೂಪಿಸಿದರು.

ಕಾರ್ಯಕ್ರಮ ನಡೆಸಲು ಅನುವು ಮಾಡಿಕೊಟ್ಟ ಸೈಂಟ್ ಸಿಸಿಲಿ ಪ್ರೌಢಶಾಲೆ ಮುಖ್ಯ ಶಿಕ್ಷಕಿ ಪ್ರೀತಿ ಜೆ. ಕ್ರಾಸ್ತಾ ಅವರನ್ನು ಗೌರವಿಸಲಾಯಿತು.

ಕೋವಿಡ್ ನಿಯಮ ಪಾಲನೆ
ಕಾರ್ಯಕ್ರಮದಲ್ಲಿ ಕೊವಿಡ್ ನಿಯಮಾವಳಿಯನ್ನು ಪಾಲಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸಭಿಕರ ಸಂಖ್ಯೆಯನ್ನು ಸೀಮಿತಗೊಳಿಸಲಾಗಿದ್ದು, ಮಾಸ್ಕ್ ಧಾರಣೆ, ವ್ಯಕ್ತಿಗತ ಅಂತರ ಪಾಲನೆ, ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿತ್ತು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!