Monday, July 4, 2022
Home ಸಮಾಚಾರ ಜಿಲ್ಲಾ ಸುದ್ದಿ ತುಳು ಲಿಪಿಗೆ ಏಕರೂಪತೆ ಮೂಡಿಸುವ ಯತ್ನ

ತುಳು ಲಿಪಿಗೆ ಏಕರೂಪತೆ ಮೂಡಿಸುವ ಯತ್ನ

ಉಡುಪಿ: ಅವಿಭಜಿತ ದ.ಕ. ಜಿಲ್ಲೆಯ ಒಂದೊಂದು ಕಡೆ ಒಂದೊಂದು ರೀತಿಯಲ್ಲಿರುವ ತುಳು ಭಾಷೆಯ ಲಿಪಿಗೆ ಏಕರೂಪತೆ ಕೊಡುವುದು ಅಗತ್ಯ. ಈ ನಿಟ್ಟಿನಲ್ಲಿ ಯತ್ನ ಸಾಗಿದೆ ಎಂದು ಕಂಪ್ಯೂಟರ್ ಲಿಪಿ ತಜ್ಞ ಪ್ರೊ. ಕೆ. ಪಿ. ರಾವ್ ಹೇಳಿದರು.

ಶ್ರೀಕೃಷ್ಣ ಮಠ ರಾಜಾಂಗಣದಲ್ಲಿ ಶುಕ್ರವಾರ ನಡೆದ ಪರ್ಯಾಯ ಪಂಚ ಶತಮಾನೋತ್ಸವ ಸಭೆ ಹಾಗೂ ಸೌರಮಧ್ವನವಮಿ ಸಂದರ್ಭ ನಡೆದ ತುಳುಲಿಪಿ ಕಲಿಕೆ ಕಾರ್ಯಾಗಾರ ಉದ್ಘಾಟನೆ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಕೊಂಡೆವೂರು ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ, ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು. ಮಾಜಿ ಸಚಿವ ವಿನಯಕುಮಾರ ಸೊರಕೆ, ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶಪಾಲ್ ಸುವರ್ಣ ಅಭ್ಯಾಗತರಾಗಿದ್ದರು.

ತುಳು ಅಧಿಕೃತ ಭಾಷೆಯಾಗಬೇಕು
ಸ್ವಂತ ಲಿಪಿ ಮತ್ತು ಸ್ವಂತ ಕ್ಯಾಲೆಂಡರ್ ಇರುವ ತುಳು ಲಿಪಿ ಅಧಿಕೃತ ರಾಜ್ಯ ಭಾಷೆಯಾಗಬೇಕು ಮತ್ತು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳ್ಳಬೇಕು ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲಸಾರ್ ಹೇಳಿದರು.

ಇಂಗ್ಲಿಷ್ ಗೆ ಕ್ಯಾಲೆಂಡರ್ ಇದ್ದರೂ ಸ್ವಂತ ಲಿಪಿ ಇಲ್ಲ. ಅದಕ್ಕೆ ಇರುವ ಲಿಪಿ ರೋಮನ್ ಲಿಪಿ. ಕನ್ನಡಕ್ಕೆ ಸ್ವಂತ ಲಿಪಿ ಇಲ್ಲ. ಇರುವುದು ಬಟ್ಟಿಪ್ರೊಲು ಲಿಪಿ. ತುಳುವಿಗೆ ಹೀಗಲ್ಲ. ಹಿಂದೆ ತುಳುವಿಗೆ ಸಮನಾದ ನಾಲ್ಕು ಭಾಷೆಗೆ ಸ್ಥಾನಮಾನ ಸಿಕ್ಕಿದರೂ ತುಳುವಿಗೆ ಸಿಗದಿರಲು ನಮ್ಮಲ್ಲಿನ ಒಗ್ಗಟ್ಟಿನ ಕೊರತೆ ಕಾರಣ. ನಾವು ಸಂಘಟಿತರಾಗುವ ಮೂಲಕ ಮೊದಲು ಅಧಿಕೃತ ರಾಜ್ಯ ಭಾಷೆಯಾಗಬೇಕು. ಅದು ಮಧ್ವರ ಜನ್ಮದಿನದ ದಿನವೇ ಆದದ್ದೇ ಆದರೆ ತುಳು ದಿನವಾಗಿ ಘೋಷಿಸಬಹುದು ಎಂದರು.

ಸನ್ಮಾನ
ಈ ಸಂದರ್ಭದಲ್ಲಿ ತುಳುಲಿಪಿ ತಜ್ಞ ಶತಾಯುಷಿ ಅಂಗಡಿಮಾರು ಕೃಷ್ಣ ಭಟ್, ಪಡುಬಿದ್ರಿ ಖಡ್ಗೇಶ್ವರಿ ಬ್ರಹ್ಮಸ್ಥಾನದ ದರ್ಶನಪಾತ್ರಿ ಲಕ್ಷ್ಮೀನಾರಾಯಣ ರಾವ್, ಮೂಳೆತಜ್ಞ ಡಾ| ಭಾಸ್ಕರಾನಂದಕುಮಾರ್, ಜಾನಪದ ವಿದ್ವಾಂಸರಾದ ಕೆ. ಎಲ್. ಕುಂಡಂತಾಯ ಮತ್ತು ಕುದಿ ವಸಂತ ಶೆಟ್ಟಿ, ಉರಗತಜ್ಞ ರವೀಂದ್ರ ಐತಾಳ ಪುತ್ತೂರು, ಕುಂಬಾರಿಕೆ ತಜ್ಞ ಅಣ್ಣು ಮೂಲ್ಯ, ಎರಕ ಶಿಲ್ಪಿ ಕಟಪಾಡಿ ಜನಾರ್ದನ ಆಚಾರ್ಯ, ನಾಟಿವೈದ್ಯ ಹಿರಿಯಡಕ ಭಾಸ್ಕರ ಪೂಜಾರಿ, ಹಿರ್ಗಾನ ಮಜೂರು ಗರೋಡಿ ಪಾತ್ರಿ ಲೋಕು ಪೂಜಾರಿ, ಉಡುಪಿ ತುಳುಕೂಟ, ಸಿರಿ ತುಳುವ ಚಾವಡಿ, ಮಂಗಳೂರಿನ ಜೈ ತುಳುನಾಡು, ಯುವ ತುಳುನಾಡು, ತುಳುಲಿಪಿ ವಾಚಕ ಸುಭಾಸ್ ನಾಯಕ್ ಬಂಟಕಲ್ಲು, ಶಾಸನ ತಾಳೆಗರಿ ವಾಚಕ ರಾಧಾಕೃಷ್ಣ ಬೆಳ್ಳೂರು, ತಾಮ್ರದ ಪಾತ್ರೆಗಳಿಗೆ ಕಲಾಯಿ ಹಾಕುವ ಪೀಟರ್ ಡಿ’ಸೋಜಾ ಅವರನ್ನು ಸಮ್ಮಾನಿಸಲಾಯಿತು.

ತುಳುನಾಡ ವೈಭವ
ಬಳಿಕ ರಾಜಾಂಗಣದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರದಲ್ಲಿ ತುಳು ನಾಡಿನ ಸಂಸ್ಕೃತಿಯನ್ನು ಬಿಂಬಿಸುವ ತುಳುನಾಡ ವೈಭವ ನೃತ್ಯರೂಪಕ ನಡೆಯಿತು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!