ಸುದ್ದಿಕಿರಣ ವರದಿ
ಗುರುವಾರ, ಜುಲೈ 28
ದಿ ಮೈಸೂರ್ ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಅಧ್ಯಕ್ಷರಾಗಿ ಉದಯಕುಮಾರ್ ಶೆಟ್ಟಿ ನೇಮಕ
ಉಡುಪಿ: ದಿ ಮೈಸೂರ್ ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ (ಎಂ.ಇ.ಐ)ನ ನೂತನ ಅಧ್ಯಕ್ಷರನ್ನಾಗಿ ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ. ಉದಯ ಕುಮಾರ್ ಶೆಟ್ಟಿ ಅವರನ್ನು ಸರ್ಕಾರ ನೇಮಿಸಿದೆ.
ಕೆ. ಉದಯ ಕುಮಾರ್ ಶೆಟ್ಟಿ ಈ ಹಿಂದೆ ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿದ್ದರು.
ಕಳೆದ ಸುಮಾರು ಎರಡು ದಶಕಗಳಿಂದ ಪಕ್ಷದಲ್ಲಿ ಸಕ್ರಿಯರಾಗಿರುವ ಅವರು ಉತ್ತಮ ಸಂಘಟಕರೂ ಆಗಿದ್ದಾರೆ.
ಕೊರೊನಾ ಸಂದರ್ಭದಲ್ಲಿ ತಮ್ಮದೇ ಆದ ಕೆ. ಉದಯ ಕುಮಾರ್ ಫ್ಯಾಮಿಲಿ ಟ್ರಸ್ಟ್ ಮುಖಾಂತರ ಸಾವಿರಾರು ಬಡ ಕುಟುಂಬಗಳಿಗೆ ಆಹಾರ ಧಾನ್ಯಗಳ ಕಿಟ್, ಊಟ ವಿತರಿಸಿದ್ದರು.
ಜಿಲ್ಲೆಯಾದ್ಯಂತ ನಡೆಯುವ ಕ್ರೀಡೆ, ಸಾಂಸ್ಕೃತಿಕ, ಸಮಾಜಮುಖಿ ಕಾರ್ಯಕ್ರಮಗಳಿಗೆ ತಮ್ಮ ಟ್ರಸ್ಟ್ ಮೂಲಕ ನೆರವು ನೀಡುತ್ತಾ ಬಂದಿರುವ ಉದಯಕುಮಾರ್ ಶೆಟ್ಟಿ, ಪ್ರಧಾನಮಂತ್ರಿ ವಿಮಾ ಯೋಜನೆ, ಉಜ್ವಲ ಅನಿಲ ಯೋಜನೆ ಇತ್ಯಾದಿ ಕೇಂದ್ರ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವಲ್ಲಿ ಶ್ರಮಿಸಿದ್ದಾರೆ.
ಮಾತ್ರವಲ್ಲದೆ ಬಡಮಕ್ಕಳ ವಿದ್ಯಾಭ್ಯಾಸ, ಅಶಕ್ತ ಕುಟುಂಬಗಳ ವೈದ್ಯಕೀಯ ವೆಚ್ಚ ಭರಿಸಿ, ಯಾವುದೇ ಪ್ರಚಾರ ಬಯಸದೆ ಸದ್ದಿಲ್ಲದೆ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ.