Monday, July 4, 2022
Home ಸಮಾಚಾರ ಜಿಲ್ಲಾ ಸುದ್ದಿ ಕೃಷ್ಣಮಠದಲ್ಲಿ ಸಂಪನ್ನವಾಯಿತು ಉದ್ವಾರ್ಚನೆ

ಕೃಷ್ಣಮಠದಲ್ಲಿ ಸಂಪನ್ನವಾಯಿತು ಉದ್ವಾರ್ಚನೆ

ಉಡುಪಿ: ನಿತ್ಯವೂ ದಂಡ ಕಮಂಡಲುಗಳನ್ನು ಹಿಡಿವ ಕೈಗಳು, ಶ್ರೀಕೃಷ್ಣನಿಗೆ ನಿತ್ಯ ಮಂಗಳ ನೀರಾಜನ ಎತ್ತುವ ಇಲ್ಲಿನ ಅಷ್ಟಮಠಾಧೀಶರ ಕರಗಳು ಶನಿವಾರ ಪೊರಕೆ ಹಿಡಿದು ಶ್ರೀಕೃಷ್ಣನ ಗರ್ಭಗುಡಿಯ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದವು!

ಹೌದು. ಇದು ಇಲ್ಲಿನ ಶ್ರೀಕೃಷ್ಣಮಠದಲ್ಲಿ ಪ್ರತಿವರ್ಷ ನಡೆಯುವ ವಾರ್ಷಿಕ ಪರಿಪೂರ್ಣ ಸ್ವಚ್ಛತಾ ಕಾರ್ಯಕ್ರಮ ಉದ್ವಾರ್ಚನೆಯ ನೋಟ.

ನಿತ್ಯವೂ ಹದಿನಾಲ್ಕು ಬಗೆಯ ಪೂಜೆ ಕೈಕೊಂಬ ಶ್ರೀಕೃಷ್ಣ, ಸೀಯಾಳ ಪಂಚಾಮೃತಗಳ ಮಹಾಸ್ನಪನ ಕೈಗೊಳ್ಳುವ ಮಂಥಪಾಶಧರನ ಗರ್ಭಗುಡಿಯನ್ನು ಆಷಾಢ ಶುದ್ಧ ದಶಮಿಯಂದು ನಡೆಯುವ ಮಹಾಭಿಷೇಕಕ್ಕೂ ಮುನ್ನ ನಡೆಯುವ ಗುಡಿಸಿ, ಸಾರಿಸಿ ಸ್ವಚ್ಛಗೊಳಿಸುವ ಪ್ರಕ್ರಿಯೆ. ಇದು ಲಾಗಾಯ್ತಿನಿಂದ ರೂಢಿಯಲ್ಲಿರುವ ಆಚರಣೆ.

ಉಡುಪಿ ಶ್ರೀಕೃಷ್ಣನನ್ನು ಮುಟ್ಟುವ ಅಧಿಕಾರ ಅಷ್ಟಮಠಾಧೀಶರ ಹೊರತು ಅನ್ಯರಿಗಿಲ್ಲ. ಗರ್ಭಗುಡಿಗೂ ಯತಿಗಳ ವಿನಾ ಅನ್ಯರಿಗೆ ಪ್ರವೇಶ ನಿರ್ಬಂಧ. ಈ ನಿಟ್ಟಿನಲ್ಲಿ ಗರ್ಭಗುಡಿಯ ಸ್ವಚ್ಚತಾ ಕಾರ್ಯವೂ ಕೃಷ್ಣಸೇವೆ ಎಂದೇ ಪರಿಭಾವಿಸಿ ಖಾವಿ ತೊಟ್ಟ ಯತಿಗಳೇ ಸ್ವಚ್ಛತೆ ಕಾರ್ಯದಲ್ಲಿ ತೊಡಗುವುದು ವಿಶೇಷ.

ಈ ಸಂದರ್ಭದಲ್ಲಿ ಆಚಾರ್ಯ ಮಧ್ವ ಪ್ರತಿಷ್ಠಾಪಿತ ಕೃಷ್ಣಮೂರ್ತಿಯನ್ನು ಚಾಪೆ ಹಾಗೂ ಬೊಲ್ಗೊಡೆಗಳಿಂದ ಮುಚ್ಚಿ, ಮೂರ್ತಿಯ ಪಾವಿತ್ರ್ಯತೆಗೆ ಆದ್ಯತೆ ನೀಡಲಾಗುತ್ತದೆ.

ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ನೇತೃತ್ವದಲ್ಲಿ ನಡೆದ ಉದ್ವಾರ್ಚನೆಯಲ್ಲಿ ಭಾವಿ ಪರ್ಯಾಯ ಕೃಷ್ಣಾಪುರ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು, ಸೋದೆ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು, ಪಲಿಮಾರು ಮಠದ ಕಿರಿಯ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಪಾಲ್ಗೊಂಡಿದ್ದರು.

ಜು. 19ರಂದು ಶ್ರೀಕೃಷ್ಣನಿಗೆ ಸೀಯಾಳ ಸಹಿತ ಪಂಚಾಮೃತಪೂರ್ವಕ ಮಹಾಭಿಷೇಕ ನಡೆಯಲಿದೆ. ಮರುದಿನ ತಪ್ತ ಮುದ್ರಾಧಾರಣೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!