Monday, July 4, 2022
Home ಸಮಾಚಾರ ರಾಷ್ಟ್ರೀಯ ವಾರ್ತೆ ಹರಿದ್ವಾರ ಮಧ್ವಾಶ್ರಮದಲ್ಲಿ ಪೇಜಾವರ ಶ್ರೀಗಳಿಗೆ ಉಮಾಭಾರತಿ ಗುರುಪೂಜನ

ಹರಿದ್ವಾರ ಮಧ್ವಾಶ್ರಮದಲ್ಲಿ ಪೇಜಾವರ ಶ್ರೀಗಳಿಗೆ ಉಮಾಭಾರತಿ ಗುರುಪೂಜನ

ಹರಿದ್ವಾರ: ಗುರು ಪೂರ್ಣಿಮೆ ಅಂಗವಾಗಿ, ವಿಷ್ವೈಕ್ಯ ಶ್ರೀ ವಿಶ್ವೇಶತೀರ್ಥ ಶ್ರೀಪಾದರಿಂದ ಮಂತ್ರದೀಕ್ಷೆ ಪಡೆದ ರಾಷ್ಟ್ರದ ಪ್ರಖರ ಹಿಂದೂ ಧ್ವನಿ, ಕೇಂದ್ರ ಮಾಜಿ ಮಂತ್ರಿ ಸಾದ್ವಿ ಉಮಾಭಾರತಿ ಇಲ್ಲಿನ ಪೇಜಾವರ ಮಠದ ಶಾಖೆ ಶ್ರೀ ಮಧ್ವಾಶ್ರಮದಲ್ಲಿ ಗುರು ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಭಾವಚಿತ್ರಕ್ಕೆ ವಿಶೇಷ ಪೂಜೆ ನೆರವೇರಿಸಿ, ಭಕ್ತಿ ನಮನ ಸಲ್ಲಿಸಿದರು.

ಬಳಿಕ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರಿಗೆ ಫಲ ಪುಷ್ಪ ಸಹಿತ ಗುರುಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಚಿತ್ರಕೂಟಾಶ್ರಮದ ಶ್ರೀ ರಾಮಕಿಶನ್ ಜೀ ಮಹಾರಾಜ್ ಅವರಿಗೂ ಗುರು ನಮನ ಅರ್ಪಿಸಿದ ಉಮಾಭಾರತಿ, ಅಲ್ಲಿನ ಹತ್ತಾರು ಸಾಧು ಸಂತರಿಗೂ ವಿಶೇಷ ಉಡುಗೊರೆ ನೀಡಿ ಗೌರವ ಸಲ್ಲಿಸಿದರು.

ಉಮಾಭಾರತಿ ಸಂಕಲ್ಪದಂತೆ ಆಶ್ರಮದಲ್ಲಿ ಎರಡು ದಿನಗಳ ಹಿಂದೆ ವಿದ್ವಾನ್ ಶಶಾಂಕ ಭಟ್ಟ ನೇತೃತ್ವದಲ್ಲಿ ವಿಷ್ಣು ಸಹಸ್ರನಾಮ ಯಾಗ ಸಂಪನ್ನಗೊಂಡಿತ್ತು. ಗುರು ಪೂರ್ಣಿಮೆ ಅಂಗವಾಗಿ ಆಶ್ರಮದಲ್ಲಿರುವ ಆಚಾರ್ಯ ಮಧ್ವರ ಶಿಲಾಪ್ರತಿಮೆಗೆ ವಿಶೇಷ ಅಭಿಷೇಕ ಮತ್ತು ಪೂಜೆ ಪೇಜಾವರ ಶ್ರೀಗಳ ನೇತೃತ್ವದಲ್ಲಿ ನೆರವೇರಿತು.

ಆಶ್ರಮದ ವ್ಯವಸ್ಥಾಪಕ ಮನೋಜ್ ಕಾರ್ಯಕ್ರಮ ಸಂಯೋಜಿಸಿದರು.

ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಜೀವಿತದಲ್ಲಿದ್ದಷ್ಟೂ ಕಾಲ ಪ್ರತೀ ವರ್ಷ ಆಷಾಢ ಪೂರ್ಣಿಮೆಯಂದು ಅವರಿದ್ದಲ್ಲಿಗೇ ಬಂದು ಅಥವಾ ದೆಹಲಿಗೆ ಆಮಂತ್ರಿಸಿ ವಿಶೇಷ ಕಾರ್ಯಕ್ರಮ ಏರ್ಪಡಿಸಿ ಉಮಾಭಾರತಿ ಗುರು ನಮನ ಸಲ್ಲಿಸುತ್ತಿದ್ದರು.

ದೇಶದಲ್ಲಿ ದಲಿತ ಸಮುದಾಯದ ಅಗ್ರಪಂಕ್ತಿಯ ನಾಯಕಿಯಾಗಿ ಗುರುತಿಸಲ್ಪಟ್ಟು ಹಿಂದೂ ವಿಚಾರಧಾರೆಗಳಿಗೆ ತಮ್ಮನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡವರು ಉಮಾಭಾರತಿ. ಅಯೋಧ್ಯಾ ರಾಮಜನ್ಮಭೂಮಿ ಆಂದೋಲನದಲ್ಲಿ ಆಕೆಯ ಪಾತ್ರ ಮಹತ್ವದ್ದು.

ದೇಶಾದ್ಯಂತ ಸಂಚರಿಸಿ ತಮ್ಮ ಪ್ರಖರ ಮಾತುಗಳಿಂದ ಹಿಂದೂ ಜಾಗೃತಿಯ ಕರ್ತವ್ಯ ನಿರ್ವಹಿಸಿದ ಉಮಾ, 1992ರ ನವೆಂಬರ್ 17ರಂದು ನರ್ಮದಾ ನದಿಯ ಉಗಮಸ್ಥಳ ಮಧ್ಯಪ್ರದೇಶದ ಅಮರ ಕಂಟಕ್ ನಲ್ಲಿ ಶ್ರೀ ವಿಶ್ವೇಶತೀರ್ಥರಿಂದ ಮಂತ್ರದೀಕ್ಷೆ ಪಡೆದು ಸಾದ್ವಿಯಾಗಿದ್ದರು. ಆ ಘಟನೆ ಅಂದು ದೇಶದಲ್ಲೇ ಸಂಚಲನ ಮೂಡಿಸಿತ್ತು.

ಹುಬ್ಬಳ್ಳಿ ಈದ್ಗಾ ಮೈದಾನ ಪ್ರಕರಣ ಹೋರಾಟದಲ್ಲೂ ಅತ್ಯಂತ ಸಕ್ರಿಯವಾಗಿ ಭಾಗವಹಿಸಿ ಆ ಪ್ರಕರಣದಲ್ಲಿ ನ್ಯಾಯಾಲಯದ ತೀರ್ಪಿಗೆ ತಲೆಬಾಗಿ ಮಧ್ಯಪ್ರದೇಶದ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೂ ರಾಜೀನಾಮೆ ಸಲ್ಲಿಸಿ ಅಚ್ಚರಿ ಮೂಡಿಸಿದ್ದರು ಉಮಾಭಾರತಿ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!