ಮಣಿಪಾಲ: ಇಂದ್ರಾಳಿಯ ಹೆದ್ದಾರಿಯನ್ನು ಶೀಘ್ರ ದುರಸ್ತಿಗೊಳಿಸುವಂತೆ ಉಡುಪಿ ನಾಗರಿಕ ಸಮಿತಿ ಆಗ್ರಹಿಸಿದೆ.
ಉಡುಪಿಯಿಂದ ಮಣಿಪಾಲ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ, ಇಂದ್ರಾಳಿ ರೈಲು ಸೇತುವೆ ಬಳಿ ಹೆದ್ದಾರಿ ತನ್ನ ಮೂಲ ಸ್ವರೂಪವನ್ನೇ ಕಳೆದುಕೊಂಡಿದೆ. ಹೊಂಡ ಗುಂಡಿಗಳು ಬಿದ್ದು, ಕೃತಕ ಈಜುಕೊಳ ನಿರ್ಮಾಣಗೊಂಡಿದೆ!
ಇದು ಅಪಘಾತ ವಲಯವಾಗಿ ಮಾರ್ಪಟ್ಟಿದ್ದು ಬೈಕು ಸವಾರರು ಹೊಂಡದಲ್ಲಿ ಎಡವಿ ಬಿದ್ದಿರುವ ಅನೇಕ ಘಟನೆಗಳು ಇಲ್ಲಿ ನಡೆದಿರುವುದು ಕಂಡುಬಂದಿದೆ. ಪಾದಚಾರಿಗಳಂತೂ ನಡೆದು ಸಾಗುವಂತಿಲ್ಲ, ಮಳೆಯಿಂದ ಹೊಂಡದಲ್ಲಿ ಸಂಗ್ರವಾಗಿರುವ ಕೆಸರು ನೀರು ವಾಹನಗಳ ಚಕ್ರದ ಚಲನೆ, ಪಾದಚಾರಿಗಳ ಮೈಮೇಲೆ ಎರಚುತ್ತಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಜಿಲ್ಲಾಡಳಿತ ತಕ್ಷಣ ಹೆದ್ದಾರಿ ದುರಸ್ತಿಗೊಳಿಸುವಂತೆ ಉಡುಪಿ ನಾಗರಿಕ ಸಮಿತಿ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು ಮತ್ತು ತಾರಾನಾಥ ಮೇಸ್ತ ಶಿರೂರು ಆಗ್ರಹಿಸಿದ್ದಾರೆ.
ವಾಹನ ನಿಬಿಡ ಪ್ರಮುಖ ಹೆದ್ದಾರಿ ಇದಾಗಿರುವುದರಿಂದ ಇಲ್ಲಿ ಲಘು ಮತ್ತು ಘನ ವಾಹನಗಳ ಸಂಚಾರ ದಟ್ಟಣೆ ಇಲ್ಲಿರುತ್ತದೆ. ಜೀವರಕ್ಷಕ ಅಂಬುಲೆನ್ಸ್ ವಾಹನಗಳು ಇಲ್ಲಿ ಆಮೆನಡಿಗೆಯಲ್ಲಿ ಸಂಚರಿಸಬೇಕಾದ ಪರಿಸ್ಥಿತಿ ಇದೆ. ಗಂಭೀರ ಸ್ಥಿತಿಯಲ್ಲಿರುವ ರೋಗಿಗಳನ್ನು ಕ್ಲಪ್ತ ಸಮಯದಲ್ಲಿ ಆಸ್ಪತ್ರೆಗೆ ತಲುಪಿಸಲು ಅಸಾಧ್ಯವಾಗುತ್ತಿದೆ.
ಇಂದ್ರಾಳಿ ಪರಿಸರದಲ್ಲಿ ಹೆದ್ದಾರಿಯುದ್ದಕ್ಕೂ ದಾರಿದೀಪದ ವ್ಯವಸ್ಥೆಯೂ ಇಲ್ಲ. ಕಳ್ಳಕಾಕರ ಭಯವೂ ಇಲ್ಲಿ ಉದ್ಭವವಾಗಿದೆ ಎಂದವರು ತಿಳಿಸಿದ್ದಾರೆ.
ಸಮಸ್ಯೆ ಬಗೆಹರಿಸದಿದ್ದಲ್ಲಿ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ.