ಉಡುಪಿ: ಕರಾಟೆ ಶಿಕ್ಷಕರಿಗೂ ಪ್ರೋತ್ಸಾಹಧನ ಒದಗಿಸುವಂತೆ ಕರಾಟೆ ಶಿಕ್ಷಕ ಹಾಗೂ ಜಿಲ್ಲಾ ಕರಾಟೆ ಶಿಕ್ಷಕರ ಸಂಘ ಕೋಶಾಧಿಕಾರಿ ವಾಮನ ಪಾಲನ್ ಅಂಬಲಪಾಡಿ ಸರ್ಕಾವನ್ನು ಒತ್ತಾಯಿಸಿದ್ದಾರೆ.
ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಕರಾಟೆ ಉತ್ತಮ ಕ್ರೀಡೆಯಾಗಿದೆ. ಶಾಲಾ ವಿದ್ಯಾರ್ಥಿಗಳಿಂದ ಮೊದಲ್ಗೊಂಡು ಎಲ್ಲ ವಯೋಮಾನದವರೂ ಆರೋಗ್ಯ ಕಾಳಜಿಯಿಂದ ಕರಾಟೆ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಆದರೆ, ಕಠಿಣ ಪರಿಶ್ರಮ ಹಾಗೂ ಬದ್ಧತೆಯಿಂದ ಕರಾಟೆ ತರಗತಿಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಕರಾಟೆ ಶಿಕ್ಷಕರು ಕೋವಿಡ್ ನಿಯಂತ್ರಣಕ್ಕಾಗಿ ಸರ್ಕಾರ ಕೈಗೊಂಡಿರುವ ಸಮಯೋಚಿತ ಲಾಕ್ ಡೌನ್ ನಿರ್ಧಾರದಿಂದ ಸಂಕಷ್ಟಕ್ಕೊಳಗಾಗಿದ್ದು ಜೀವನೋಪಾಯಕ್ಕಾಗಿ ಹರಸಾಹಸಪಡುತ್ತಿದ್ದಾರೆ.
ಸರ್ಕಾರ ಘೋಷಿಸಿರುವ ಕೋವಿಡ್ ಪ್ಯಾಕೇಜ್ ಗಳಲ್ಲಿ ಕರಾಟೆ ಶಿಕ್ಷಕರ ಬಗ್ಗೆ ಯಾವುದೇ ಸೌಲಭ್ಯ ನೀಡದಿರುವುದು ಕರಾಟೆ ಶಿಕ್ಷಕರಿಗೆ ಅತೀವ ನಿರಾಸೆ ಉಂಟುಮಾಡಿದೆ. ಈ ಬಗ್ಗೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಆದರೂ ಪ್ರಯೋಜನವಾಗಿಲ್ಲ. ಕರಾಟೆ ಶಿಕ್ಷಕರಿಗೆ ಸರ್ಕಾರ ಶೀಘ್ರ ಪ್ರೋತ್ಸಾಹಧನ ಮಂಜೂರು ಮಾಡುವ ಮೂಲಕ ಆರೋಗ್ಯ ಕಾಳಜಿಯಿಂದ ಸೇವೆ ಸಲ್ಲಿಸುತ್ತಿರುವ ಕರಾಟೆ ಶಿಕ್ಷಕರಿಗೆ ನೆರವಾಗುವಂತೆ ಕರಾಟೆ ಮುಖ್ಯ ಶಿಕ್ಷಕ ಹಾಗೂ ಬುಡೋಕಾನ್ ಕರಾಟೆ ಆ್ಯಂಡ್ ಸ್ಪೋರ್ಟ್ಸ್ ಅಸೋಸಿಯೇಶನ್ ಅಧ್ಯಕ್ಷ ಮತ್ತು ಉಡುಪಿ ಜಿಲ್ಲಾ ಕರಾಟೆ ಶಿಕ್ಷಕರ ಸಂಘ ಕೋಶಾಧಿಕಾರಿ ವಾಮನ ಪಾಲನ್ ಅಂಬಲಪಾಡಿ ಸರ್ಕಾವನ್ನು ಆಗ್ರಹಿಸಿದ್ದಾರೆ