Monday, July 4, 2022
Home ಸಮಾಚಾರ ಜಿಲ್ಲಾ ಸುದ್ದಿ ಮಸೀದಿ ಜಾಗ ಮರು ನೋಂದಣಿಗೆ ಆಗ್ರಹ

ಮಸೀದಿ ಜಾಗ ಮರು ನೋಂದಣಿಗೆ ಆಗ್ರಹ

ಉಡುಪಿ: ಕೊಡವೂರು ಕಲ್ಮತ್ ಜಾಮೀಯಾ ಜುಮ್ಮಾ ಮಸೀದಿಗೆ ಮಂಜೂರಾಗಿದ್ದ ಜಾಗವನ್ನು ಸರಕಾರ ವಶಪಡಿಸಿಕೊಂಡಿದ್ದು, ಅದರ ಮರು ನೋಂದಣಿಗೆ ಜಿಲ್ಲಾ ಮುಸ್ಲಿಂ ಒಕ್ಕೂಟ ಆಗ್ರಹಿಸಿದೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹುಸೇನ್ ಕೋಡಿಬೆಂಗ್ರೆ, ಕೊಡವೂರು ಗ್ರಾಮದ ಸರ್ವೇ ನಂಬರ್ 53ಎ 67 ಸೆಂಟ್ಸ್ ಜಮೀನಿನಲ್ಲಿ ಸುಮಾರು 150 ವರ್ಷದ ಹಿಂದಿನಿಂದಲೂ ಮಸೀದಿ ಅಸ್ತಿತ್ವದಲ್ಲಿದ್ದು, ಸ್ವಾತಂತ್ರ್ಯಪೂರ್ವದಿಂದಲೂ ತಸ್ತೀಕ್ ಬರುತ್ತಿದೆ. ಮಸೀದಿ ಮತ್ತು ಅದರ ಆಸ್ತಿ ವಕ್ಫ್ ಬೋರ್ಡಿನಲ್ಲಿ 1993ರಲ್ಲಿ ನೋಂದಣಿಯಾಗಿದ್ದು, 2020ರಲ್ಲಿ ಅಗತ್ಯ ದಾಖಲೆಗಳ ದೃಢೀಕರಣದ ಬಳಿಕ ಗಝೆಟ್ ನೋಟಿಫಿಕೇಷನ್ ಆಗಿದೆ ಎಂದರು.

ಇದೀಗ ಜಿಲ್ಲಾಧಿಕಾರಿ, ಶಾಸಕ ಮತ್ತು ಕಂದಾಯ ಸಚಿವರು ಸೇರಿ ಪಹಣಿಪತ್ರದಲ್ಲಿ ಬಲವಂತವಾಗಿ ಸರಕಾರದ ಹೆಸರನ್ನು ನೋಂದಾಯಿಸಿದ್ದಾರೆ. ಈ ಆದೇಶ ಹಿಂಪಡೆಯಬೇಕು ಹಾಗೂ ಈ ಮುಂಚಿನಂತೆ ಪಹಣಿಪತ್ರದಲ್ಲಿ ಮಸೀದಿ ಹೆಸರನ್ನು ಮರು ನೋಂದಾಯಿಸಿ ಸರಕಾರ ನ್ಯಾಯಯುತವಾಗಿ ವರ್ತಿಸಬೇಕು ಎಂದು ಆಗ್ರಹಿಸಿದರು.

ಈಚಿನ ಕೆಲವು ವರ್ಷಗಳಲ್ಲಿ ಕೊಡವೂರು ಗ್ರಾಮದ ಪಳ್ಳಿಜಿಡ್ಡ ವಠಾರದಲ್ಲಿರುವ ಕೆ. ಟಿ. ಪೂಜಾರಿ ಹಾಗೂ ಅವರ ಸಂಗಡಿಗರು ಮಸೀದಿಯ ಜಮೀನಿನ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು, ಕೆಳ ನ್ಯಾಯಾಲಯ ಪುರಸ್ಕರಿಸಿದ್ದರೂ ಮೇಲ್ಮನವಿ ನ್ಯಾಯಾಲಯ ಸಮಗ್ರ ತನಿಖೆ ಮಾಡಿ ಕೆಳ ನ್ಯಾಯಾಲಯದ ತೀರ್ಪು ರದ್ದುಗೊಳಿಸಿತ್ತು.

ಈಮಧ್ಯೆ, ಮಸೀದಿಯ ವಕ್ಫ್ ಆಸ್ತಿಯಲ್ಲಿ ಕಾನೂನುಬಾಹಿರವಾಗಿ ಬಲವಂತವಾಗಿ ದೇವರ ಮೂರ್ತಿಯೊಂದನ್ನು ತಂದಿಟ್ಟು ತಗಡು ಅಳವಡಿಸಿದ್ದಾರೆ. 2008ರ ಅಕ್ಟೋಬರ್ನಲ್ಲಿ ಅಂದಿನ ಜಿಲ್ಲಾಧಿಕಾರಿ ಮೂರ್ತಿ ಹಾಗೂ ತಗಡು ತೆರವುಗೊಳಿಸಿದ್ದರು.

ಇದೀಗ ಸ್ವಹಿತಾಸಕ್ತಿ ಹೊಂದಿರುವವರ ಒತ್ತಡಕ್ಕೆ ಮಣಿದ ಈಗಿನ ಜಿಲ್ಲಾಧಿಕಾರಿ ಆಧಾರ ರಹಿತ ಟಿಪ್ಪಣಿಯೊಂದಿಗೆ ಸಹಾಯಕ ಕಮಿಷನರ್ ಹಾಗೂ ಪೊಲೀಸ್ ಇಲಾಖೆ ವರದಿ ಆಧಾರದಲ್ಲಿ ಈ ಜಮೀನಿನ ಅಧಿಸೂಚನೆ ರದ್ದುಗೊಳಿಸಲು ಮುಖ್ಯ ಕಾರ್ಯದರ್ಶಿ, ಅಲ್ಪಸಂಖ್ಯಾತರ ಕಲ್ಯಾಣ, ವಕ್ಫ್ ಮತ್ತು ಹಜ್ ಇಲಾಖೆಗೆ ಮನವಿ ಮಾಡಿದ್ದರು. ಜಿಲ್ಲಾಧಿಕಾರಿ ಪತ್ರದ ಆಧಾರದ ಮೇಲೆ ಕಂದಾಯ ಸಚಿವ ಆರ್. ಅಶೋಕ್ ಮಸೀದಿಯ ಸ್ಥಿರಾಸ್ತಿ ಪಹಣಿಪತ್ರದಲ್ಲಿ ಮಸೀದಿ ಹೆಸರನ್ನು ತೆಗೆದು ಸರಕಾರ ಎಂದು ನಮೂದಿಸಿದ್ದಾರೆ ಎಂದು ವಿವರಿಸಿದರು.

ಜಿಲ್ಲಾಧಿಕಾರಿ ಮತ್ತು ಶಾಸಕರ ಸಹಿತ ಜಿಲ್ಲಾಡಳಿತ ಕಂದಾಯ ಸಚಿವರ ಮೇಲೆ ಪ್ರಭಾವ ಬೀರಿ ಈ ನಿರ್ಣಯ ಕೈಗೊಂಡಿದೆ ಎಂದು ಹುಸೇನ್ ಆರೋಪಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಮುಸ್ಲಿಮ್ ಒಕ್ಕೂಟ ಅಧ್ಯಕ್ಷ ಇಬ್ರಾಹಿಮ್ ಕೋಟ, ಸುನ್ನಿ ಸಂಯುಕ್ತ ಜಮಾಅತ್ ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಕಲ್ಲಾಟ್ಟ, ಕರ್ನಾಟಕ ಮುಸ್ಲಿಮ್ ಜಮಾಅತ್ ನ ರಫೀಕ್ ಗಂಗೊಳ್ಳಿ, ಎಂ. ಎ. ಬಾವ, ಪಿಎಫ್.ಐನ ನಝೀರ್, ಅಝೀಜ್ ಉದ್ಯಾವರ, ಇದ್ರಿಸ್ ಹೂಡೆ, ಮುಹಮ್ಮದ್ ಮೌಲ, ಸಲಾಹುದ್ದೀನ್, ಇಕ್ಬಾಲ್ ಮನ್ನಾ ಮೊದಲಾದವರಿದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!