ಉಡುಪಿ: ಲಭಿಸಿದ ಅಧಿಕಾರಾವಧಿಯನ್ನು ಉತ್ತಮವಾಗಿ ಬಳಕೆ ಮಾಡಿಕೊಂಡು, ಉತ್ತಮ ಆಡಳಿತ ನೀಡುವ ಮನೋಭಾವ ಅಗತ್ಯ ಎಂದು ಪ್ರತಿಪಾದಿಸಿದ ಮೀನುಗಾರಿಕೆ ಮತ್ತು ಬಂದರು ಖಾತೆ ಸಚಿವ ಎಸ್. ಅಂಗಾರ, ಸಮಸ್ಯೆ ಅರಿತು ಸರಕಾರಕ್ಕೆ ಸಹಕಾರ ನೀಡಬೇಕು ಎಂದು ಪ್ರಸ್ತುತ ರಾಜಕೀಯ ವಿದ್ಯಮಾನಗಳತ್ತ ಬೊಟ್ಟುಮಾಡಿ ಕಿವಿಮಾತು ಹೇಳಿದರು.
ಗಣರಾಜ್ಯೋತ್ಸವ ಸಂದರ್ಭದಲ್ಲಿ, ಸಚಿವನಾದ ಬಳಿಕ ಮೊದಲ ಬಾರಿಗೆ ಜಿಲ್ಲೆಗೆ ಭೇಟಿ ನೀಡಿದ ಅವರು, ಸುದ್ದಿಗಾರರೊಂದಿಗೆ ಮಾತನಾಡಿದರು.
`ನಾನು ಸಂಘಟನೆಯೊಂದಿಗೆ, ಸಂಸ್ಕಾರಯುತವಾಗಿ ಬೆಳೆದು ಬಂದವನು. ನನಗೆ ಅಧಿಕಾರಕ್ಕಿಂತ ಸಂಘಟನೆ ಮುಖ್ಯ. ನಾನು ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ 6 ಬಾರಿ ಗೆದ್ದಿದ್ದರೂ ಅಧಿಕಾರದ ಹಿಂದೆಹೋಗಿಲ್ಲ. ಆದರೆ, ಇಂದು ಅಧಿಕಾರವೇ ನನ್ನ ಹಿಂದೆ ಬಂದಿದೆ’ ಎಂದರು.
ಸರ್ಕಾರದ ಒಳಗಿರುವ ಎಲ್ಲರಿಗೂ ಒಂದೇ ರೀತಿ ಆಲೋಚನೆ ಇರಬೇಕು. ನಮ್ಮ ಆಲೋಚನೆಯಲ್ಲಿ ವ್ಯತ್ಯಾಸವಾದರೆ ರಾಜ್ಯಕ್ಕೆ ಸಮಸ್ಯೆ ಬರುತ್ತದೆ. ಉತ್ತಮ ಆಡಳಿತ ಕೊಡುವ ಮನೋಭಾವನೆ ಬೇಕು. ಅದು ಇದ್ದಾಗ ಖಾತೆ ಇತ್ಯಾದಿ ಸಮಸ್ಯೆಯೇ ಬರುವುದಿಲ್ಲ. ಖಾತೆ ಹಂಚಿಕೆ ಬಗ್ಗೆ ಹಿರಿಯರು ಗಮನ ಕೊಡುತ್ತಾರೆ ಎಂದು ಅಸಮಾಧಾನಿತ ಸಚಿವರಿಗೆ ಅಂಗಾರ ಎಚ್ಚರಿಕೆ ನೀಡಿದರು.
ಈಗಷ್ಟೇ ಮೀನುಗಾರಿಕೆ ಹಾಗೂ ಬಂದರು ಮತ್ತು ಒಳನಾಡು ಖಾತೆಯನ್ನು ಮುಖ್ಯಮಂತ್ರಿ ನೀಡಿದ್ದಾರೆ. ಈ ಇಲಾಖೆಯಲ್ಲಿನ ಸಮಸ್ಯೆ ಬಗ್ಗೆ ಇಲಾಖಾಧಿಕಾರಿಗಳೊಂದಿಗೆ ತಿಳಿದು, ಸ್ಥಳಗಳಿಗೆ ಭೇಟಿ ನೀಡಿ, ಮೀನುಗಾರರ ಬೇಡಿಕೆ ಮತ್ತು ಸಮಸ್ಯೆ ಅರಿತುಕೊಂಡು ಅವರ ಹಿತ ಕಾಪಾಡುವ ಕೆಲಸ ಮಾಡುತ್ತೇನೆ ಎಂದರು.
ಶಾಸಕ ರಘುಪತಿ ಭಟ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ ನಾಯಕ್ ಮೊದಲಾದವರಿದ್ದರು