Monday, July 4, 2022
Home ಸಮಾಚಾರ ಜಿಲ್ಲಾ ಸುದ್ದಿ ಸರಕಾರಿ ವೈದ್ಯಕೀಯ ಕಾಲೇಜು ಆರಂಭಿಸಲು ಯೋಜನೆ

ಸರಕಾರಿ ವೈದ್ಯಕೀಯ ಕಾಲೇಜು ಆರಂಭಿಸಲು ಯೋಜನೆ

ಉಡುಪಿ: ಪ್ರಸ್ತುತ ಜಿಲ್ಲೆಯಲ್ಲಿ ಕೇವಲ ಒಂದು ಖಾಸಗಿ ವೈದ್ಯಕೀಯ ಕಾಲೇಜು ಮಾತ್ರ ಇದ್ದು, ಸರಕಾರಿ ವೈದ್ಯಕೀಯ ಕಾಲೇಜು ಆರಂಭಿಸಲು ಯೋಜನೆ ರೂಪಿಸುವ ಕುರಿತು ಬೆಂಗಳೂರಿನಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಯಿತು ಎಂದು ಶಾಸಕ ಕೆ. ರಘುಪತಿ ಭಟ್ ತಿಳಿಸಿದರು.

ವಿಧಾನಸೌಧದಲ್ಲಿ ಈಚೆಗೆ ನಡೆದ ಸರಕಾರಿ ಭರವಸೆಗಳ ಸಮಿತಿ ಸಭೆಯಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಬಾಕಿ ಇರುವ ಭರವಸೆಗಳ ಬಗ್ಗೆ ಇಲಾಖಾಧಿಕಾರಿಗಳ ಜೊತೆ ಚರ್ಚಿಸಲಾಯಿತು. ಉಡುಪಿಯಲ್ಲಿ ಸರಕಾರಿ ವೈದ್ಯಕೀಯ ಕಾಲೇಜು ಆರಂಭಿಸುವ ಪ್ರಸ್ತಾವವೂ ಚರ್ಚೆಗೆ ಬಂದು, ಅಧಿಕಾರಿಗಳ ಗಮನ ಸೆಳೆಯಲಾಯಿತು ಎಂದರು.

ಈಗಾಗಲೇ ಉಡುಪಿ ಜಿಲ್ಲಾಸ್ಪತ್ರೆಯನ್ನು 250 ಬೆಡ್ ಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸುವ ಯೋಜನೆಗೆ ಸರಕಾರದಿಂದ ಅನುಮೋದನೆ ದೊರೆತಿದೆ. ಆಸ್ಪತ್ರೆಯ 10 ಕಿ. ಮೀ. ವ್ಯಾಪ್ತಿಯಲ್ಲಿ ಸರಕಾರಿ ವೈದ್ಯಕೀಯ ಕಾಲೇಜು ಆರಂಭಿಸುವ ಉದ್ದೇಶದಿಂದ 20 ಎಕರೆ ಜಾಗವನ್ನು ಈಗಾಗಲೇ ಗುರುತಿಸಲಾಗಿದೆ ಎಂದು ಅಧಿಕಾರಿಗಳ ಗಮನಕ್ಕೆ ತರಲಾಗಿದೆ.

ಜಿಲ್ಲಾಸ್ಪತ್ರೆಗೆ ಹೊಂದಿಕೊಂಡಿರುವ ಕಟ್ಟಡದಲ್ಲಿ ಈ ವರ್ಷದಿಂದಲೇ ಬಿಎಸ್ಸಿ ನರ್ಸಿಂಗ್ ಕಾಲೇಜು ಆರಂಭಿಸುವ ಬಗ್ಗೆ ರಾಜೀವ ಗಾಂಧಿ ಆರೋಗ್ಯ ವಿ.ವಿ. ಕುಲಸಚಿವರೊಂದಿಗೆ ಸಭೆಯಲ್ಲಿ ಚರ್ಚಿಸಲಾಯಿತು ಎಂದು ಶಾಸಕ ಭಟ್ ತಿಳಿಸಿದರು.

ಭರವಸೆಗಳ ಸಮಿತಿ ಸಭೆಯಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಟಿ. ಕೆ. ಅನಿಲ್ ಕುಮಾರ್, ಜಂಟಿ ಕಾರ್ಯದರ್ಶಿ ಎಂ. ಶಿಲ್ಪಾ, ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯ ಕುಲಸಚಿವ ಶಿವಾನಂದ ಕಾಪಸಿ, ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ, ಬ್ರಿಮ್ಸ್ ನಿರ್ದೇಶಕ ಡಾ. ಶಿವಕುಮಾರ್ ಇದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!