Monday, August 15, 2022
Home ಸಮಾಚಾರ ಜಿಲ್ಲಾ ಸುದ್ದಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿ

ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿ

ಸುದ್ದಿಕಿರಣ ವರದಿ
ಶುಕ್ರವಾರ, ಜುಲೈ 29

ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿ
ಉಡುಪಿ: ರಾಜ್ಯದಲ್ಲಿ ಅಮಾಯಕ ಯುವಕರ ಕೊಲೆಯಾಗುತ್ತಿದ್ದು, ಅದಕ್ಕೆ ಆಡಳಿತಾರೂಢ ಸರಕಾರದ ವೈಫಲ್ಯಗಳೇ ಕಾರಣವಾಗಿದೆ. ಈ ನಿಟ್ಟಿನಲ್ಲಿ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಗೃಹಮಂತ್ರಿ ಆರಗ ಜ್ಞಾನೇಂದ್ರ ಕೂಡಲೇ ರಾಜೀನಾಮೆ ನೀಡುವಂತೆ ಕೆಪಿಸಿಸಿ ಪ್ಯಾನಲಿಸ್ಟ್ ವೆರೋನಿಕಾ ಕರ್ನೇಲಿಯೊ ಆಗ್ರಹಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಪ್ರವೀಣ್ ಪೂಜಾರಿ, ಉದಯ ಗಾಣಿಗ, ಹರ್ಷ, ಮಸೂದ್, ಪ್ರವೀಣ್ ನೆಟ್ಟಾರ್, ಫಾಝಿಲ್ ಸೇರಿದಂತೆ ಹಲವಾರು ಅಮಾಯಕ ಯುವಕರು ಮಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಕೊಲೆಯಾಗುತ್ತಿದ್ದು ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಬೊಮ್ಮಾಯಿ, ಶವದ ಮೇಲೆ ಆಡಳಿತ ಮಾಡುತ್ತಿದ್ದಾರೆ.

ಮೊದಲ ಘಟನೆ ನಡೆದಾಗಲೇ ಸರ್ಕಾರ ಸೂಕ್ತ ಮುನ್ನೆಚ್ಚರಿಕೆ ವಹಿಸಿದ್ದಿದ್ದರೆ ಮುಂದೆ ಅಂಥ ಘಟನೆಗಳು ನಡೆಯುತ್ತಿರಲಿಲ್ಲ. ಆದರೆ, ಸರ್ಕಾರ ಸಂಪೂರ್ಣ ನಿದ್ರಾವಸ್ಥೆಯಿಂದ ಕೂಡಿದ್ದರ ಪರಿಣಾಮವಾಗಿ ಪ್ರತಿನಿತ್ಯ ಅಮಾಯಕ ಯುವಕರು ಕೊಲೆಯಾಗುತ್ತಿದ್ದಾರೆ ಎಂದು ವೆರೊನಿಕಾ ವಿಶ್ಲೇಷಿಸಿದ್ದಾರೆ.

ರಾಜ್ಯ ಬಿಜೆಪಿ ಸರಕಾರ ಜಾತಿ, ಧರ್ಮ ನೋಡಿ ವರ್ತಿಸುವುದು ಗುರುವಾರ ಮುಖ್ಯಮಂತ್ರಿ ಮಂಗಳೂರಿಗೆ ಭೇಟಿ ನೀಡಿದ ವೇಳೆ ಮತ್ತೊಮ್ಮೆ ಸಾಬೀತಾಗಿದೆ. ತನ್ನ ಪಕ್ಷದ ಕಾರ್ಯಕರ್ತ ಕೊಲೆಯಾಗಿದ್ದು, ಅವರ ಮನೆಗೆ ತೆರಳಿ ಮನೆಯವರಿಗೆ ಸಾಂತ್ವನ ಹೇಳಿ ಪರಿಹಾರ ನೀಡಿರುವುದು ತಪ್ಪಲ್ಲ. ಆದರೆ, ಅದೇ ರೀತಿ ಮಸೂದ್ ಎಂಬ ಯುವಕ ಕೊಲೆಯಾಗಿದ್ದು, ಆತನ ಮನೆಗೂ ಭೇಟಿ ನೀಡಿ ಆತನ ಹೆತ್ತವರಿಗೆ ಸಾಂತ್ವನ ಹೇಳುವ ಕೆಲಸ ಯಾಕೆ ಸಿಎಂ ಮಾಡಲಿಲ್ಲ? ಚುನಾಯಿತ ಸರಕಾರ ಯಾವಾಗಲೂ ಪಕ್ಷಪಾತವಿಲ್ಲದೆ ಪ್ರತಿಯೊಬ್ಬರಿಗೂ ನ್ಯಾಯ ಕೊಡಿಸುವ ಕೆಲಸ ಮಾಡಬೇಕಾಗಿದೆ. ಈ ನಡುವೆ ಮುಖ್ಯಮಂತ್ರಿ ಬೊಮ್ಮಾಯಿ ಮಂಗಳೂರಿನಲ್ಲಿದ್ದಾಗಲೇ ಇನ್ನೋರ್ವ ಯುವಕ ಸುರತ್ಕಲ್ ನಲ್ಲಿ ಕೊಲೆಯಾಗಿರುವುದು ರಾಜ್ಯದಲ್ಲಿ ಕಾನೂನು ಸುವವ್ಯಸ್ಥೆ ಸಂಪೂರ್ಣ ಹದಗೆಟ್ಟಿರುವುದನ್ನು ತೋರಿಸುತ್ತದೆ.

ಕೇವಲ ಕಠಿಣ ಕ್ರಮದ ಭರವಸೆ ಬಾಯಲ್ಲಿ ನೀಡದೇ ಅದನ್ನು ಕಾರ್ಯರೂಪಕ್ಕೆ ತಂದದ್ದೇ ಆದಲ್ಲಿ ಮುಂದೆ ಅಂಥ ಘಟನೆ ನಡೆಯಲು ಆಸ್ಪದವಿರುತ್ತಿರಲಿಲ್ಲ. ಜಾತಿ ಧರ್ಮದ ಆಧಾರದಲ್ಲಿ ವಿಂಗಡನೆ, ಪಕ್ಷಪಾತ ಮಾಡಿದಾಗ ಇಂಥ ಘಟನೆಗಳು ಮರುಕಳಿಸಲು ಅವಕಾಶ ಮಾಡಿಕೊಟ್ಟಂತಾಗುತ್ತದೆ.

ಆದ್ದರಿಂದ ಸರಕಾರ ಈ ಬಗ್ಗೆ ನೈತಿಕ ಹೊಣೆ ಹೊರಬೇಕಾಗುತ್ತದೆ ಎಂದು ವೆರೊನಿಕಾ ಕರ್ನೇಲಿಯೊ ಅಭಿಪ್ರಾಯ ವ್ತಕ್ತಪಡಿಸಿದ್ದಾರೆ.

 

 

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!