Saturday, July 2, 2022
Home ಸಮಾಚಾರ ರಾಜ್ಯ ವಾರ್ತೆ `ವಿಹಿಂಪ ಪುಂಡು ಪೋಕರಿಗಳ ಸಂಸ್ಥೆಯಲ್ಲ'

`ವಿಹಿಂಪ ಪುಂಡು ಪೋಕರಿಗಳ ಸಂಸ್ಥೆಯಲ್ಲ’

ಉಡುಪಿ: ಶ್ರೀರಾಮ ಜನ್ಮಭೂಮಿ ಟ್ರಸ್ಟ್ ಬೇನಾಮಿ ಸಂಸ್ಥೆ ಅಲ್ಲ, ಬದಲಾಗಿ ಅದೊಂದು ನೋಂದಣಿಯಾಗಿರುವ ಸಂಸ್ಥೆಯಾಗಿದ್ದು ನೋಂದಣಿಗೆ ಅದರದ್ದೇ ಆದ ನೀತಿ ನಿಯಮಾವಳಿ ಇದೆ. ಮಾತ್ರವಲ್ಲದೆ, ವಿಶ್ವ ಹಿಂದೂ ಪರಿಷತ್ ಪುಂಡು ಪೋಕರಿಗಳ ಸಂಸ್ಥೆ ಅಲ್ಲ ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಹೇಳಿದರು.

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಅವರು, ಶ್ರೀರಾಮ ಮಂದಿರಕ್ಕೆ ದೇಣಿಗೆ ಸಂಗ್ರಹ ಮಾಡಲು ಅದರದ್ದೇ ಆದ ಕಾನೂನು ಇದ್ದು, ನಮಗೆ ಸಂವಿಧಾನವೇ ಅಧಿಕಾರ ನೀಡಿದೆ. ಹಣದ ವಿಚಾರದಲ್ಲಿ ಪಾರದರ್ಶಕತೆ ಖಂಡಿತವಾಗಿ ಬೇಕೇ ಬೇಕು. ಯಾರೇ ಆದರೂ ಸಂಶಯ ವ್ಯಕ್ತಪಡಿಸಿದರೆ ಸೂಕ್ತ ಪರಿಹಾರ ಕಂಡುಕೊಳ್ಳಬಹುದು. ಟ್ರಸ್ಟ್ ನಲ್ಲಿ ಮುಚ್ಚುಮರೆಯ ಯಾವುದೇ ವಿಷಯ ನಡೆಯುವುದಿಲ್ಲ. ಆಡಿಟ್ ನಡೆಸಿ ಅದಕ್ಕೆ ಬೇಕಾಗಿರುವ ಪುರಾವೆ ನೀಡಲು ಸಾಧ್ಯವಿದೆ. ಹಾಗಾಗಿ ಯಾವುದೇ ಸಂಶಯ ಹೊಂದಿ ಆರೋಪಿಸುವುದು ಸೂಕ್ತವಲ್ಲ ಎಂದವರು ಹೇಳಿದರು.

ರಾಮ ಜನ್ಮಭೂಮಿ ಟ್ರಸ್ಟ್ ನಂತೆ ಅಧಿಕೃತವಾಗಿರುವ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ದೇಣಿಗೆ ಸಂಗ್ರಹ ಮಾಡುತ್ತಿದ್ದಾರೆ. ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರಿಗೆ ದೇಣಿಗೆ ಸಂಗ್ರಹದ ಜವಾಬ್ದಾರಿ ನೀಡಲಾಗಿದೆ. ವಿಹಿಂಪ ಮುಖ್ಯಸ್ಥರು ಆಯಾ ಊರಿನಲ್ಲಿ ಸಂಗ್ರಹ ನಿರತರಾಗಿದ್ದಾರೆ. ಹಿರಿಯರು, ಮುಂದಾಳುಗಳ ನೇತೃತ್ವದಲ್ಲಿ ಕಾರ್ಯಕರ್ತರು ನಿಧಿ ಸಂಗ್ರಹದಲ್ಲಿ ತೊಡಗಿದ್ದಾರೆ.

ವಿಹಿಂಪ ಪುಂಡು ಪೋಕರಿಗಳ ಸಂಸ್ಥೆಯಲ್ಲ. ಅದು ಅಧಿಕೃತ ಸಂಸ್ಥೆ. ಹಾಗಾಗಿ ಇಂಥ ಮಾತು ಬಳಸುವುದು ಯುಕ್ತವಲ್ಲ ಎಂದರು.

ಶ್ರೀರಾಮನ ಹೆಸರಿನಲ್ಲಿ ಪಾರದರ್ಶಕತೆ ಇಟ್ಟುಕೊಳ್ಳದೆ ಯಾರೋ ಬೀದಿ ಬೀದಿಯಲ್ಲಿ ಪೋಲಿ ಪುಂಡರು ಹಣ ಸಂಗ್ರಹ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಆರೋಪಿಸಿದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!