Monday, August 15, 2022
Home ಸಮಾಚಾರ ಅಪರಾಧ ವಿಶಾಲ ಗಾಣಿಗ ಕೊಲೆ ಪ್ರಕರಣ: ಮತ್ತೋರ್ವ ಆರೋಪಿ ಸೆರೆ

ವಿಶಾಲ ಗಾಣಿಗ ಕೊಲೆ ಪ್ರಕರಣ: ಮತ್ತೋರ್ವ ಆರೋಪಿ ಸೆರೆ

ಸುದ್ದಿಕಿರಣ ವರದಿ
ಶನಿವಾರ, ಜುಲೈ 9

ವಿಶಾಲ ಗಾಣಿಗ ಕೊಲೆ ಪ್ರಕರಣ: ಮತ್ತೋರ್ವ ಆರೋಪಿ ಸೆರೆ
ಉಡುಪಿ: ಬ್ರಹ್ಮಾವರ ಕುಮ್ರಗೋಡು ಮಿಲನ್ ರೆಸಿಡೆನ್ಸಿಯಲ್ಲಿ ಕಳೆದ ಸುಮಾರು ಒಂದು ವರ್ಷದ ಹಿಂದೆ ನಡೆದ ವಿಶಾಲ ಗಾಣಿಗ ಕೊಲೆ ಪ್ರಕರಣದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಬ್ರಹ್ಮಾವರ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಯನ್ನು ಮಹಾರಾಷ್ಟ್ರದ ಗಾಂಧೇವಿ ನಿವಾಸಿ ರೋಹಿತ್ ರಾಣಾ ಪ್ರತಾಪ್ ನಿಶಾದ್ ಯಾನೆ ಸೋನು (21) ಎಂದು ಗುರುತಿಸಲಾಗಿದೆ

2021ರ ಜುಲೈ 12ರಂದು ಕುಮ್ರಗೊಡು ಗ್ರಾಮದ ಮಿಲನ್ ರೆಸಿಡೆನ್ಸಿಯಲ್ಲಿ ಒಬ್ಬಂಟಿಯಾಗಿದ್ದ ಮಹಿಳೆ ವಿಶಾಲ ಗಾಣಿಗ ಅವರನ್ನು ಭೀಕರವಾಗಿ ಕೊಲೆಗೈದು, ಆಕೆಯ ಕುತ್ತಿಗೆಯಲ್ಲಿದ್ದ ಚಿನ್ನದ ಮಂಗಳ ಸೂತ್ರ ಹಾಗೂ ಕೈಯಲ್ಲಿದ್ದ ಚಿನ್ನದ ಬಳೆಗಳನ್ನು ಸುಲಿಗೆ ಮಾಡಲಾಗಿತ್ತು. ಪ್ರಕರಣವನ್ನು ಶೀಘ್ರವಾಗಿ ಪತ್ತೆಹಚ್ಚಿದ ಪೊಲೀಸರು, ಕೊಲೆ ಕೃತ್ಯವನ್ನು ಮೃತ ವಿಶಾಲ ಗಾಣಿಗ ಪತಿ ರಾಮಕೃಷ್ಣ ಗಾಣಿಗ ವಿದೇಶದಲ್ಲಿದ್ದುಕೊಂಡು ಹೆಂಡತಿಯ ಕೊಲೆಗೆ ಸುಪಾರಿ ನೀಡಿದ್ದ.

ರಾಮಕೃಷ್ಣ ಗಾಣಿಗ ಹಾಗೂ ಉತ್ತರ ಪ್ರದೇಶದ ಗೋರಖಪುರದ ಸುಪಾರಿ ಹಂತಕ ಸ್ವಾಮಿನಾಥ ನಿಶಾದನನ್ನು ಈಗಾಗಲೇ ಬಂಧಿಸಿದ್ದು ಸುಲಿಗೆ ಮಾಡಿದ ಮೃತಳ ಚಿನ್ನಾಭರಣ ಸ್ವಾಧೀನಪಡಿಸಿಕೊಳ್ಳಲಾಗಿದೆ. ಆರೋಪಿಗಳು ಕಳೆದ ಒಂದು ವರ್ಷದಿಂದ ಹಿರಿಯಡ್ಕ ಜೈಲಿನಲ್ಲಿದ್ದು, ಅವರ ವಿರುದ್ದ ದೋಷಾರೋಪಣೆ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.

ಪ್ರಕರಣದ ಇನ್ನೋರ್ವ ಸುಪಾರಿ ಹಂತಕ ರೋಹಿತ್ ರಾಣಾ ಪ್ರತಾಪ್ ನಿಶಾದ್ ಯಾನೆ ಸೋನು ತಲೆಮರೆಸಿಕೊಂಡಿದ್ದ. ಆತ ಕಾಣೆಯಾಗಿರುವ ಬಗ್ಗೆ ಆತನ ಪೋಷಕರು ಮುಂಬೈಯ ಗಾಮ್ ದೇವಿ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಪ್ರಕರಣದ ತನಿಖಾಧಿಕಾರಿ ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತಪದ್ಮನಾಭ ನೇತೃತ್ವದಲ್ಲಿ ಬ್ರಹ್ಮಾವರ ಪೊಲೀಸ್ ಉಪನಿರೀಕ್ಷಕ ಗುರುನಾಥ ಹಾದಿಮನಿ ಹಾಗೂ ಸಿಬ್ಬಂದಿಗಳಾದ ವೆಂಕಟರಮಣ ದೇವಾಡಿಗ, ರಾಘವೇಂದ್ರ ಮತ್ತು ಪ್ರವೀಣ್ ಶೆಟ್ಟಿಗಾರ್ ಅವರನ್ನೊಳಗೊಂಡ ವಿಶೇಷ ತಂಡ ಸುಪಾರಿ ಹಂತಕ ರೋಹಿತ್ ರಾಣಾ ಪ್ರತಾಪ್ ನಿಶಾದ್ ಯಾನೆ ಸೋನುನನ್ನು ಗೋರಖಪುರದಲ್ಲಿ ಬಂಧಿಸಿದ್ದಾರೆ.

ಈ ಸುಪಾರಿ ಹಂತಕನನ್ನು ಸೆರೆಹಿಡಿಯಲು ಕಳೆದ ಒಂದು ವರ್ಷದಿಂದ ಬ್ರಹ್ಮಾವರ ವೃತ್ತದ ಕೋಟ, ಬ್ರಹ್ಮಾವರ, ಹಿರಿಯಡ್ಕ ಪೊಲೀಸ್ ಠಾಣೆ ಅಧಿಕಾರಿ ಮತ್ತು ಸಿಬ್ಬಂದಿ ಮಹಾರಾಷ್ಟ್ರ, ಗೋವಾ ಹಾಗೂ ಉತ್ತರ ಪ್ರದೇಶ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗೆ ತೆರಳಿ ಪತ್ತೆಗೆ ಪ್ರಯತ್ನಿಸಿದ್ದರು. ವಿಶಾಲ ಗಾಣಿಗ ಕೊಲೆ ಬಳಿಕ ಆತ ಮಹಾರಾಷ್ಟ್ರದ ತನ್ನ ಸ್ವಂತ ಮನೆ ತೊರೆದು ನೇಪಾಳ ಗಡಿಯ ಮಹಾರಾಜ ಗಂಜ್ ಪರಿಸರದಲ್ಲಿ ತಲೆಮರೆಸಿಕೊಂಡು ಓಡಾಡುತ್ತಿದ್ದ.
ಹೆಚ್ಚಿನ ತನಿಖೆಗಾಗಿ ಆತನನ್ನು ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ.

ಪ್ರಕರಣ ಭೇದಿಸಿದ ಪೊಲೀಸರ ತಂಡವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್ ಅಭಿನಂದಿಸಿದ್ದಾರೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!