Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ ಮುಖ್ಯಮಂತ್ರಿಯಿಂದ ವಿಶ್ವಪಥ ಉದ್ಘಾಟನೆ

ಮುಖ್ಯಮಂತ್ರಿಯಿಂದ ವಿಶ್ವಪಥ ಉದ್ಘಾಟನೆ

ಉಡುಪಿ: ಇಲ್ಲಿನ ಶ್ರೀಕೃಷ್ಣಮಠಕ್ಕೆ ಆಗಮಿಸುವ ಭಕ್ತಾದಿಗಳಿಗೆ ಉಡುಪಿಯ ವೈಶಿಷ್ಟ್ಯತೆಗಳನ್ನು ಪರಿಚಯಿಸುವ ಮೂಲಕ ಕೃಷ್ಣ ದರ್ಶನಕ್ಕೆ ಅವಕಾಶ ಕಲ್ಪಿಸುವ ಆಶಯದೊಂದಿಗೆ ಪರ್ಯಾಯ ಅದಮಾರು ಶ್ರೀಕೃಷ್ಣಮಠ ವ್ಯವಸ್ಥೆಗೊಳಿಸಿದ ವಿಶ್ವಪಥ ದೇವರ ದರ್ಶನ ಮಾರ್ಗವನ್ನು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸೋಮವಾರ ಉದ್ಘಾಟಿಸುವರು ಎಂದು ಪರ್ಯಾಯ ಅದಮಾರು ಮಠ ವ್ಯವಸ್ಥಾಪಕ ಗೋವಿಂದರಾಜ್ ತಿಳಿಸಿದರು.

ಭಾನುವಾರ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಸಂಜೆ 5 ಗಂಟೆಗೆ ಉಡುಪಿಗೆ ಆಗಮಿಸುವ ಮುಖ್ಯಮಂತ್ರಿ, ವಿಶ್ವಪಥ ಉದ್ಘಾಟಿಸಿ ಬಳಿಕ ಕೃಷ್ಣದರ್ಶನ ಪಡೆಯುವರು. ಬಳಿಕ ರಾಜಾಂಗಣದಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಉಡುಪಿಗೇ ವಿಶಿಷ್ಟವಾದ ಪರ್ಯಾಯ ಕ್ರಮದ ಪಂಚ ಶತಮಾನೋತ್ಸವವನ್ನು ಉದ್ಘೋಷಿಸುವರು. ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಮತ್ತು ಅದಮಾರು ಹಿರಿಯ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸುವರು.

ಶಾಸಕ ರಘುಪತಿ ಭಟ್, ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದೆ ಶೋಭಾ ಕರಂದ್ಲಾಜೆ ಮೊದಲಾದವರು ಭಾಗವಹಿಸುವರು.

ಇದೇ ಸಂದರ್ಭದಲ್ಲಿ ಸ್ಥಳೀಯ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡುವ ಆಶಯದೊಂದಿಗೆ ಕೃಷ್ಣಮಠ ಪರಿಸರದಲ್ಲಿ ಆರಂಭಿಸಲು ಉದ್ದೇಶಿಸಿದ ಉಡುಪಿ ಸಾವಯವ ಮಳಿಗೆಗೆ ಚಾಲನೆ ನೀಡುವರು ಎಂದು ಗೋವಿಂದರಾಜ್ ತಿಳಿಸಿದರು.

ವೈಭವದ ಶೋಭಾಯಾತ್ರೆ
ಪರ್ಯಾಯ ಮೆರವಣಿಗೆಯನ್ನು ನೆನಪಿಸುವ ಶೋಭಾಯಾತ್ರೆ ಅಪರಾಹ್ನ 3.30ರಿಂದ ನಗರದ ಜೋಡುಕಟ್ಟೆಯಿಂದ ರಥಬೀದಿ ವರೆಗೆ ಸಾಗಿಬರಲಿದೆ. ಆಚಾರ್ಯ ಮಧ್ವರು ಮತ್ತು ವಾದಿರಾಜರ ಗ್ರಂಥಗಳ ಮೆರವಣಿಗೆ ಮಾಡಲಾಗುವುದು. ವಿವಿಧ ಜಾನಪದ ತಂಡಗಳು, ಭಜನಾ ತಂಡಗಳು, ಟ್ಯಾಬ್ಲೊ ಇತ್ಯಾದಿ ಮೆರವಣಿಗೆಯ ಮೆರುಗು ಹೆಚ್ಚಿಸಲಿವೆ.

ಶೋಭಾಯಾತ್ರೆಗೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಅಧ್ಯಕ್ಷ ಮತ್ತು ಸಿಎಂಡಿ ರಾಜಕಿರಣ್ ಚಾಲನೆ ನೀಡುವರು. ಹೊಸಪೇಟೆ ಉದ್ಯಮಿ ಪಿ. ಪ್ರಭಾಕರ ಶೆಟ್ಟಿ ಅಭ್ಯಾಗತರಾಗಿರುವರು ಎಂದು ಶ್ರೀಕೃಷ್ಣ ಸೇವಾ ಬಳಗದ ಪುರುಷೋತ್ತಮ ಅಡ್ವೆ ಮಾಹಿತಿ ನೀಡಿದರು.

ಪರ್ಯಾಯ ಅದಮಾರು ಮಠದ ಪಿ.ಆರ್.ಓ ಶ್ರೀಶ ಭಟ್ ಕಡೆಕಾರ್, ಕೃಷ್ಣಸೇವಾ ಬಳಗದ ವೈ. ಎನ್. ರಾಮಚಂದ್ರ ರಾವ್ ಮತ್ತು ಸಂತೋಷಕುಮಾರ್ ಇದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!