ಉಡುಪಿ: ವಿಶ್ವಾತ್ಮಕತೆಯೇ ಭಾರತೀಯ ಚಿಂತನೆಯ ವಿಧಾನ ವ್ಯಾಖ್ಯಾನಿಸುತ್ತದೆ. ಸನಾತನ ಧರ್ಮ, ಬೌದ್ಧಧರ್ಮ, ಇಸ್ಲಾಂ, ಕ್ರಿಶ್ಚಿಯನ್ ಮತ್ತೆಲ್ಲಾ ಧರ್ಮಗಳು ಪರಸ್ಪರ ಸಹಬಾಳ್ವೆ ಮಾಡಬೇಕು. ಈ ಎಲ್ಲದರ ಜೈವಿಕ ರಚನೆ ಒಂದೇ ಆಗಿದೆ ಎಂದು ಹಿರಿಯ ಭೂ- ರಾಜಕೀಯ ವಿಶ್ಲೇಷಕ ಪ್ರೊ. ಎಂ. ಡಿ. ನಳಪತ್ ವಿಶ್ಲೇಷಿಸಿದರು.
ಮಣಿಪಾಲ ಮಾಹೆ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸ್ ಆಯೋಜಿಸಿದ್ದ ಜಾಗತಿಕ ರಾಜಕೀಯ ಮತ್ತು ಅಹಿಂಸೆ ಕುರಿತ ಚರ್ಚೆಯಲ್ಲಿ ಮಾತನಾಡಿದರು.
ಭಾರತೀಯ ಧಾರ್ಮಿಕ ಮತ್ತು ತಾತ್ವಿಕ ವ್ಯವಸ್ಥೆಗಳ ಸಾರ ನಂಬಿಕೆ ಮತ್ತು ಇತರ ರಾಷ್ಟ್ರಗಳೊಂದಿಗೆ ಶಾಂತಿಯುತ ಸಹಬಾಳ್ವೆ ಮಾಡುವುದಕ್ಕೆ ಸಂಬಂಧಿಸಿದೆ. ಭೌಗೋಳಿಕ ರಾಜಕೀಯ ಸನ್ನಿವೇಶದಲ್ಲಿ ವಾಸ್ತವಿಕ ವಾದ ಮುಖ್ಯವಾದರೂ ಯುದ್ಧ ಕೊನೆಯ ಆಯ್ಕೆ ಆಗಬೇಕು. ಈ ನಿಟ್ಟಿನಲ್ಲಿ ಶಾಂತಿ ಮತ್ತು ಅಹಿಂಸೆಯ ಸಂದೇಶ ಎತ್ತಿಹಿಡಿಯುವ ಆವಶ್ಯಕತೆಯಿದೆ. ಯುನೆಸ್ಕೊ ಪೀಸ್ ಚೇರ್ ಈ ದಿಸೆಯಲ್ಲಿ ಪ್ರಯತ್ನ ಮುಂದುವರಿಸುತ್ತದೆ ಎಂದರು.
ಪಾಕಿಸ್ತಾನದ ಸಾಮಾನ್ಯ ಜನತೆ ಮತ್ತು ಪಾಕಿಸ್ತಾನದ ಸೈನ್ಯದ ನಡುವಿರುವ ವ್ಯತ್ಯಾಸ ಗುರುತಿಸಬೇಕಾಗಿದೆ. ಅಲ್ಲಿನ ಜನರು ಭಾರತದೊಂದಿಗೆ ಶಾಂತಿ ಬಯಸುವವರಾದರೆ, ಅಲ್ಲಿನ ಸೈನ್ಯಕ್ಕೆ ಅದರದ್ದೇ ಆದ ರಚನೆ ಇದೆ ಎಂದರು.
ಜಿಸಿಪಿಎಎಸ್ ನಿರ್ದೇಶಕ ಪ್ರೊ. ವರದೇಶ್ ಹಿರೆಗಂಗೆ, ಜಾಗತಿಕ ರಾಜಕೀಯದ ವಾಸ್ತವತೆಗಳ ಅರಿವಿದ್ದಾಗಿಯೂ ಅಹಿಂಸೆ ವಿಚಾರದಲ್ಲಿ ಸಾಕಾರಗೊಳ್ಳಲೇಬೇಕಾಗಿರುವುದು ಗುರಿ ಮತ್ತು ದಾರಿ ಎಂದರು.
ಜಿಸಿಪಿಎಎಸ್ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಎಸ್ತೆಟಿಕ್ಸ್ ಮತ್ತು ಪೀಸ್ ಸ್ಟಡೀಸ್ ನಲ್ಲಿ ಬಿಎ ಪದವಿ ಆರಂಭಿಸಲಿದೆ ಎಂದರು.
ವಿದ್ಯಾರ್ಥಿಗಳಾದ ಜೂಡಿ ಫೇಬರ್ ಸ್ವಾಗತಿಸಿದರು. ಟ್ರೈಫೆನ್ ಫೋನ್ಸೆಕಾ ವಂದಿಸಿದರು.