Monday, July 4, 2022
Home ಸಮಾಚಾರ ರಾಜ್ಯ ವಾರ್ತೆ ವಿಶ್ವೇಶತೀರ್ಥರು ದೇಶ ಕಂಡ ಮಹಾನ್ ಯೋಗಿ: ಮುಖ್ಯಮಂತ್ರಿ ಬಣ್ಣನೆ

ವಿಶ್ವೇಶತೀರ್ಥರು ದೇಶ ಕಂಡ ಮಹಾನ್ ಯೋಗಿ: ಮುಖ್ಯಮಂತ್ರಿ ಬಣ್ಣನೆ

ಬೆಂಗಳೂರು: ತಮ್ಮ 8ನೇ ಹರೆಯದಲ್ಲಿ ಸನ್ಯಾಸ ಸ್ವೀಕರಿಸಿ 8 ದಶಕಗಳ ಸುದೀರ್ಘ ಅವಧಿಗೆ ಪೇಜಾವರ ಶ್ರೀ ಅಧೋಕ್ಷಜಪೀಠವನ್ನು ಅಲಂಕರಿಸಿ ದ್ವೈತ ವೇದಾಂತ ಸಾಮ್ರಾಜ್ಯವನ್ನು ಪರಿಶುದ್ಧ ಚಾರಿತ್ರ್ಯ, ಕಠಿಣ ತಪಸ್ಸು, ಸ್ವಾಧ್ಯಾಯ, ವಿದ್ವತ್ತು ಹಾಗೂ ಮಾನವೀಯ ಕಳಕಳಿಯ ಅಸಂಖ್ಯ ಸೇವಾಕಾರ್ಯಗಳಿಂದ ಯಶಸ್ವಿಯಾಗಿ ಮುನ್ನಡೆಸಿ, ಕೋಟ್ಯಂತರ ಭಕ್ತರ ಶ್ರದ್ಧೆ ನಂಬಿಕೆಗೆ ಪಾತ್ರರಾಗಿದ್ದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಈ ದೇಶ ಕಂಡ ಮಹಾನ್ ಯೋಗಿ, ಸಾಧಕ ಯತಿ ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಬಣ್ಣಿಸಿದರು.

ಪೇಜಾವರ ಮಠದ ಕೀರ್ತಿಶೇಷ ಶ್ರೀ ವಿಶ್ವೇಶತೀರ್ಥ ಶ್ರೀಪಾದರ 82ನೇ ಸನ್ಯಾಸ ಪೀಠಾರೋಹಣ ವರ್ಧಂತಿ ಸಂಸ್ಮರಣಾರ್ಥ ಗುರುವಾರ ಇಲ್ಲಿನ ಕತ್ರಿಗುಪ್ಪೆ ಶ್ರೀಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿರುವ ಶ್ರೀಗಳ ವೃಂದಾವನ ಸನ್ನಿಧಿಯಲ್ಲಿ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ನನ್ನ ಭಾಗ್ಯ
ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರತಿಷ್ಠೆ ಸಮಯ ಶ್ರೀ ವಿಶ್ವೇಶತೀರ್ಥ ಶ್ರೀಪಾದರೊಂದಿಗೆ ನಾನಿದ್ದದ್ದು ನನ್ನ ಜನ್ಮದ ಭಾಗ್ಯ ಎಂದು ಬಣ್ಣಿಸಿದ ಮುಖ್ಯಮಂತ್ರಿ, 1992ರಲ್ಲಿ ಅಯೋಧ್ಯೆಯಲ್ಲಿ ವಿವಾದಿತ ಕಟ್ಟಡ ಧ್ವಂಸಗೊಂಡ ಬಳಿಕ ಅದೇ ಜಾಗದಲ್ಲಿ ತಾತ್ಕಾಲಿಕ ಶೆಡ್ ನಿರ್ಮಿಸಿ ಸಾವಿರಾರು ಸಾಧು ಸಂತರು, ಲಕ್ಷಾಂತರ ಕರಸೇವಕರ ಸಮ್ಮುಖದಲ್ಲಿ ಆ ಶೆಡ್ ನಲ್ಲಿ ಶ್ರೀರಾಮಲಲ್ಲಾನ ವಿಗ್ರಹವನ್ನು ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಪ್ರತಿಷ್ಠೆ ಮಾಡಿದ ಸಂದರ್ಭ ನಾನೂ ಅಲ್ಲಿದ್ದು ಅದಕ್ಕೆ ಸಾಕ್ಷಿಯಾಗಿದ್ದೆ ಎಂದು ಸ್ಮರಿಸಿದರು.

ಅದಕ್ಕೂ ಮುನ್ನ ವಿದ್ಯಾಪೀಠ ಆವರಣದಲ್ಲಿರುವ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ನೂತನ ವೃಂದಾವನ ದರ್ಶನ ಪಡೆದು, ಶ್ರೀ ವಿಶ್ವಪ್ರಸನ್ನತೀರ್ಥರು ನೆರವೇರಿಸಿದ ಮಂಗಳಾರತಿ ವೀಕ್ಷಿಸಿದರು.

ಮುಖ್ಯಮಂತ್ರಿ ಸಹಕಾರ ಸ್ಮರಣಾರ್ಹ
ಈ ಸಂದರ್ಭದಲ್ಲಿ ಮಾತನಾಡಿದ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ತಮ್ಮ ಗುರುಗಳೊಂದಿಗೆ ಯಡಿಯೂರಪ್ಪ ಹೊಂದಿದ್ದ ಸುದೀರ್ಘ ಒಡನಾಟ ಬಾಂಧವ್ಯ, ರಾಮ ಜನ್ಮಭೂಮಿ ಆಂದೋಲನದಲ್ಲಿ ಅವರಿಬ್ಬರೂ ಜೊತೆಯಾಗಿ ಭಾಗವಹಿಸಿದ್ದು ಮತ್ತು ಅಧಿಕಾರದಲ್ಲಿದ್ದಾಗಲೆಲ್ಲಾ ಉಡುಪಿಯ ಅಭಿವೃದ್ಧಿ ಹಾಗೂ ಉಡುಪಿ ಮಠಗಳಿಗೆ ವಿಶೇಷ ಸಹಕಾರ ನೀಡಿದ್ದನ್ನು ಸ್ಮರಿಸಿದರು.

ಕಳೆದ ವರ್ಷ ಗುರುಗಳು ಅನಾರೋಗ್ಯಪೀಡಿತರಾಗಿದ್ದ ಸಂದರ್ಭ ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಉಡುಪಿಯಲ್ಲೇ ಇದ್ದು ಗುರುಗಳು ವಿಧಿವಶರಾದ ಬಳಿಕ ಉಡುಪಿ ಮತ್ತು ಬೆಂಗಳೂರಿನಲ್ಲಿ ನಡೆದ ಅವರ ಅಂತ್ಯಕ್ರಿಯೆಯನ್ನು ಅತ್ಯಂತ ಯಶಸ್ವಿಯಾಗಿ ಸರಕಾರಿ ಗೌರವ ಸಹಿತ ನಡೆಸುವಲ್ಲಿ ನೀಡಿದ ಸಹಕಾರವನ್ನು ಉಲ್ಲೇಖಿಸಿ, ಆ ಕಾರ್ಯ ಸದಾ ಸ್ಮರಣೀಯ ಎಂದರು.

ಗೋಹತ್ಯೆ ನಿಷೇಧಕ್ಕೆ ಶ್ಲಾಘನೆ
ಈಚೆಗಷ್ಟೇ ರಾಜ್ಯದಲ್ಲಿ ಗೋಹತ್ಯಾ ನಿಷೇಧ ಕಾನೂನಿಗೆ ಶಾಸನಸಭೆಯಲ್ಲಿ ಅಂಗೀಕಾರ ಪಡೆದು ಕೋಟ್ಯಂತರ ಹಿಂದೂಗಳು ಮತ್ತು ಗೋಪ್ರೇಮಿಗಳ ಆಗ್ರಹಕ್ಕೆ ಮನ್ನಣೆ ನೀಡಿರುವುದಕ್ಕೆ ತುಂಬು ಮನಸ್ಸಿನಿಂದ ಅಭಿನಂದಿಸುವುದಾಗಿ ತಿಳಿಸಿದ ಶ್ರೀ ವಿಶ್ವಪ್ರಸನ್ನತೀರ್ಥರು, ಈ ಕಾನೂನನ್ನು ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಬೇಕು ಎಂದು ಒತ್ತಾಯಿಸುವುದಾಗಿ ತಿಳಿಸಿದರು. ಗೋಹತ್ಯಾ ನಿಷೇಧದಷ್ಟೇ ಗೋ ರಕ್ಷಣೆ ಕಾರ್ಯಗಳಿಗೂ ಬಲ ತುಂಬುವಂತೆ ಆಗ್ರಹಿಸಿದರು.

ಕೋವಿಡ್ ವಿಪತ್ತಿನ ಹೊತ್ತಿನಲ್ಲಿ ಅತ್ಯಂತ ತಾಳ್ಮೆಯಿಂದ ಇಡೀ ರಾಜ್ಯ, ಆ ವಿಪರೀತ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಮತ್ತು ರಾಜ್ಯದಲ್ಲಿ ಪರಿಸ್ಥಿತಿಯನ್ನು ಹತೋಟಿಗೆ ತರುವಲ್ಲಿ ಬಹಳ ಶ್ರಮಪಟ್ಟು ಕಾರ್ಯನಿರ್ವಹಿಸುತ್ತಿರುವ ಮುಖ್ಯಮಂತ್ರಿಯನ್ನು ವಿಶೇಷವಾಗಿ ಪ್ರಶಂಸಿಸಿದರು. ಅವರಿಗೆ ಶಾಲು ಫಲಪುಷ್ಪ ಪ್ರಸಾದ ಸಹಿತ ಗೌರವಿಸಿದರು.

ಅಯೋಧ್ಯೆ ರಾಮಮಂದಿರ ನಿರ್ಮಾಣ ಕಾರ್ಯದಲ್ಲಿ ಎಲ್ಲ ರೀತಿಯ ಸಹಕಾರ ನೀಡುವಂತೆ ಅಪೇಕ್ಷಿಸಿ ಶ್ರೀಗಳು ಮುಖ್ಯಮಂತ್ರಿಗೆ ಪತ್ರ ನೀಡಿದರು.

ಶಾಸಕರಾದ ರವಿಸುಬ್ರಹ್ಮಣ್ಯ ಮತ್ತು ಕೆ. ರಘುಪತಿ ಭಟ್ ಇದ್ದರು.

ವಿದ್ವಾನ್ ಪ್ರಭಂಜನಾಚಾರ್ಯ ಪ್ರಸ್ತಾವನೆಗೈದರು. ವಿದ್ಯಾಪೀಠದ ಪರವಾಗಿ ವ್ಯವಸ್ಥಾಪಕ ಕೇಶವಾಚಾರ್ಯ, ವಿದ್ವಾಂಸರಾದ ಆನಂದತೀರ್ಥ ಆಚಾರ್ ನಾಗಸಂಪಿಗೆ, ಸತ್ಯನಾರಾಯಣ ಆಚಾರ್ಯ, ಬದರೀನಾಥಾಚಾರ್ಯ ಮತ್ತು ಗುರುರಾಜ ಕಲ್ಕೂರ ಹಾಗೂ ಶ್ರೀಗಳವರ ಆಪ್ತರಾದ ಕೃಷ್ಣ ಭಟ್, ವಿಷ್ಣುಮೂರ್ತಿ ಆಚಾರ್ಯ ಮೊದಲಾದವರು ಮುಖ್ಯಮಂತ್ರಿಯನ್ನು ಸಾಂಪ್ರದಾಯಿಕ ಗೌರವಗಳೊಂದಿಗೆ ಬರಮಾಡಿಕೊಂಡರು.

ಬೆಂಗಾವಲು ವಾಹನ: ಆದೇಶ
ಉಡುಪಿ ಶಾಸಕ ರಘುಪತಿ ಭಟ್ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಯಡಿಯೂರಪ್ಪ, ಅಯೋಧ್ಯೆ ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವಿಶ್ವಸ್ಥರೂ ಆಗಿರುವ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರಿಗೆ ಬೆಂಗಾವಲು ವಾಹನ ಸೌಲಭ್ಯ ಒದಗಿಸುವುದಾಗಿ ತಿಳಿಸಿದರು. ಇನ್ನೊಂದೆರಡು ದಿನಗಳಲ್ಲಿ ಇದು ಕಾರ್ಯಗತಗೊಳ್ಳಲಿದೆ ಎಂದು ಸಿಎಂ ಯಡಿಯೂರಪ್ಪ ಪ್ರಕಟಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!