Monday, July 4, 2022
Home ಸಮಾಚಾರ ರಾಷ್ಟ್ರೀಯ ವಾರ್ತೆ ವಿಶ್ವೇಶತೀರ್ಥ ಶ್ರೀಪಾದರು ಯುಗದ ಋಷಿ

ವಿಶ್ವೇಶತೀರ್ಥ ಶ್ರೀಪಾದರು ಯುಗದ ಋಷಿ

ಉಡುಪಿ: ಭಾರತದ ಧೀಮಂತ ಅಧ್ಯಾತ್ಮಿಕ ಪರಂಪರೆ ಮತ್ತು ಆರ್ಷ ಸಂಸ್ಕೃತಿಯ ಎಲ್ಲ ಶ್ರೇಷ್ಠ ಗುಣ ವಿಶೇಷಗಳ ಅಪೂರ್ವ ಸಂಗಮವಾಗಿದ್ದ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಕೇವಲ ಓರ್ವ ಸಾಮಾನ್ಯ ಸಂತರಾಗಿರದೇ ಯುಗದ ಋಷಿಗಳಾಗಿದ್ದಾರೆ ಎಂದು ಅಂತಾರಾಷ್ಟ್ರೀಯ ಖ್ಯಾತಿಯ ಯೋಗ ಗುರು ಬಾಬಾ ರಾಮ್ ದೇವ್ ಬಣ್ಣಿಸಿದ್ದಾರೆ.
ಶ್ರೀ ವಿಶ್ವೇಶತೀರ್ಥ ಸೇವಾ ಸಂಘದ ಸಂಯೋಜನೆಯಲ್ಲಿ ನಾಡಿನ ಅನೇಕ ಗಣ್ಯರಿಂದ ಶ್ರೀಗಳವರ ಒಡನಾಟ ಸ್ಮರಿಸಿಕೊಳ್ಳುವ ಪ್ರಯುಕ್ತ ನಡೆಯುತ್ತಿರುವ ಶ್ರೀ ವಿಶ್ವೇಶ ವಿಶ್ವ ದರ್ಶನ ಆನ್ ಲೈನ್ ಉಪನ್ಯಾಸ ಸರಣಿಯಲ್ಲಿ ರಾಮ್ ದೇವ್ ಶನಿವಾರ ಭಾಗವಹಿಸಿ ಶ್ರೀಗಳ ಬಗ್ಗೆ ಅಭಿಮಾನದ ಮಾತುಗಳನ್ನಾಡಿದರು.
ಸುಮಾರು 18 ವರ್ಷದ ಹಿಂದೆ ಹರಿದ್ವಾರದಲ್ಲಿ ಪತಂಜಲಿ ಯೋಗ ಪೀಠ ಪ್ರಾರಂಭಿಸಿದಂದಿನಿಂದಲೂ ನಿರಂತರವಾಗಿ ತನ್ನ ಬಗ್ಗೆ ವಾತ್ಸಲ್ಯಪೂರ್ಣ ಮಾರ್ಗದರ್ಶನ ಧಾರೆಯೆರೆದಿದ್ದಾರೆ. ಭ್ರಷ್ಟಾಚಾರ ಹಾಗೂ ಕಪ್ಪು ಹಣದ ವಿರುದ್ಧ ರಾಷ್ಟ್ರವ್ಯಾಪಿ ಹಮ್ಮಿಕೊಂಡ ಆಂದೋಲನದಲ್ಲಿಯೂ ಭಾಗವಹಿಸಿ ಧೈರ್ಯ, ಉತ್ಸಾಹ ತುಂಬಿದ್ದನ್ನು ಮರೆಯಲಾರೆ. ಇಂದು ಯಾವುದೇ ಸಂತರನ್ನು ಯಾವ ಜಾತಿ ಎಂದು ತಿಳಿದು ಮಣೆ ಹಾಕುವ ಪರಿಸ್ಥಿತಿ ಇದೆ. ಆದರೆ, ಶ್ರೀಗಳು ಯಾವತ್ತೂ ತನ್ನ ಜಾತಿ ಕೇಳಿಯೇ ಇಲ್ಲ. ಆದರೆ, ಅವರು ತನಗೆ ಕೊಟ್ಟ ಪ್ರೀತಿ ಮಮತೆಗೆ ಪರ್ಯಾಯವೇ ಇಲ್ಲ ಎಂದ ಬಾಬಾ ರಾಮ್ ದೇವ್ ಅದ್ಭುತ ವಿದ್ವತ್ತು, ವಿನಯ, ವೀರತ್ವ, ಪರಿಶುದ್ಧ ಚಾರಿತ್ರ್ಯ, ಸಜ್ಜನಿಕೆ, ಸ್ವಧರ್ಮ ನಿಷ್ಠೆ, ಪರಧರ್ಮ ಸಹಿಷ್ಣುತೆ, ಮಗುವಿನಂಥ ಮುಗ್ಧತೆ, ಸ್ವಾಧ್ಯಾಯ, ತಪಸ್ಸು ಮೊದಲಾದ ಶ್ರೇಷ್ಠ ಗುಣ ಹೊಂದಿದ್ಧ ಶ್ರೀಗಳು ವರ್ತಮಾನ ಭಾರತದ ಎಲ್ಲ ಸಾಧು ಸಂತರಿಗೆ ಆದರ್ಶಗಿದ್ದಾರೆ ಎಂದರು.
ನಾವೆಲ್ಲರೂ ಅವರ ಅಧ್ಯಾತ್ಮಿಕ ಶಿಷ್ಯತ್ವ ಪಡೆದ ಭಾಗ್ಯಶಾಲಿಗಳು. ಅವರ ಚಿಂತನೆ, ಜೀವನ ದೃಷ್ಟಿ, ಧ್ಯೇಯದೆಡೆಗಿನ ನಿರ್ಭೀತ ನಡೆಗಳಲ್ಲೆಲ್ಲ ಅವರಲ್ಲಿ ಓರ್ವ ದಾರ್ಶನಿಕನನ್ನು ಕಂಡಿದ್ದೇನೆ. ನನ್ನ ಎಲ್ಲ ಕರ್ತವ್ಯಗಳ ಹೊತ್ತಿನಲ್ಲಿ ನಿರಂತರವಾಗಿ ಅವರನ್ನು ಸ್ಮರಿಸುತ್ತಿದ್ದೇನೆ. ಉಡುಪಿ ಶ್ರೀಕೃಷ್ಣ ಮಠ ಮತ್ತು ಅಷ್ಟ ಮಠಗಳಿಗೆ ಜಾಗತಿಕ ಮಾನ್ಯತೆಯನ್ನು ತಮ್ಮ ಕರ್ತವ್ಯ ಸಾಧನೆ ಸೇವಾ ಕಾರ್ಯಗಳಿಂದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ತಂದಿದ್ದಾರೆ. ಅವರ ಶಿಷ್ಯ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರೂ ಗುರುಗಳಂತೆಯೇ ಎಲ್ಲ ಶ್ರೇಷ್ಠ ಗುಣಗಳನ್ನು ಹೊಂದಿದ್ದಾರೆ. ಇತ್ತೀಚೆಗೆ ಹರಿದ್ವಾರದ ಪತಂಜಲಿ ಯೋಗ ಪೀಠಕ್ಕೆ ಅವರು ಭೇಟಿ ನೀಡಿದಾಗಲೂ ಶ್ರೀ ವಿಶ್ವೇಶತೀರ್ಥ ಶ್ರೀಪಾದರೇ ಭೇಟಿ ನೀಡಿದಷ್ಟು ಸಂತಸವಾಗಿದೆ. ಪೇಜಾವರ ಮಠ ಮತ್ತು ಪತಂಜಲಿ ಯೋಗಪೀಠದೊಂದಿಗಿನ ಈ ಬಾಂಧವ್ಯ ಇದೇ ರೀತಿ ಮುಂದುವರಿಯಬೇಕು ಎಂದು ಆಶಿಸಿದ ರಾಮ್ ದೇವ್ ಬಾಬಾ, ಶ್ರೀ ವಿಶ್ವೇಶತೀರ್ಥ ಶ್ರೀಪಾದರ ದಿವ್ಯ ಆದರ್ಶ ಚಿಂತನೆಗಳ ಸಾಕಾರ, ಶ್ರೇಷ್ಠ ಭಾರತ ನಿರ್ಮಾಣಕ್ಕೆ ನಾವೆಲ್ಲ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.
ಸಾನ್ನಿಧ್ಯ ವಹಿಸಿದ್ದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಬಾಬಾ ರಾಮ್ ದೇವ್ ಅವರು ಗುರುಗಳ ಬಗ್ಗೆ ಅಭಿಮಾನದ ಮಾತುಗಳನ್ನಾಡಿರುವುದಕ್ಕೆ ಮತ್ತು ಹರಿದ್ವಾರದ ತಮ್ಮ ಇತ್ತೀಚಿನ ಭೇಟಿ ವೇಳೆ ತಮಗೆ ನೀಡಿದ ಆದರಾತಿಥ್ಯಗಳಿಗೆ ಅತೀವ ಸಂತಸ ವ್ಯಕ್ತಪಡಿಸಿದರು.
ವಿದ್ವಾಂಸರಾದ ಬದರೀನಾಥ ಆಚಾರ್ಯ ಮತ್ತು ವೇಂಕಟೇಶ ಆಚಾರ್ಯ ಸಂಯೋಜಿಸಿ, ನಿರೂಪಿಸಿದರು. ಸುಧೀಂದ್ರ ಆಚಾರ್ಯ ವಂದಿಸಿದರು. ಪತಂಜಲಿ ಯೋಗ ಪೀಠದ ಕರ್ನಾಟಕ ರಾಜ್ಯ ಪ್ರಭಾರಿ ಭವರ್ ಲಾಲ್ ಜೀ ಆರ್ಯ, ಶ್ರೀಗಳ ಆಪ್ತ ಕಾರ್ಯದರ್ಶಿ ಕೃಷ್ಣ ಭಟ್, ವಿಷ್ಣುಮೂತರ್ಿ ಆಚಾರ್ಯ ಸಹಕರಿಸಿದರು.
ದೇಶಾದ್ಯಂತ ಪೇಜಾವರ ಶ್ರೀಗಳ ಸುಮಾರು 30 ಸಾವಿರಕ್ಕೂ ಅಧಿಕ ಭಕ್ತರು ಮತ್ತು ಅಭಿಮಾನಿಗಳು ಆನ್ ಲೈನ್ ಮೂಲಕ ಈ ಕಾರ್ಯಕ್ರಮ ವೀಕ್ಷಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!