Thursday, July 7, 2022
Home ಸಮಾಚಾರ ರಾಜ್ಯ ವಾರ್ತೆ ಮಂಗಳೂರು- ಬೆಂಗಳೂರು ವಿಸ್ಟಾ ಡೋಮ್ ರೈಲ್ವೆಗೆ ಚಾಲನೆ

ಮಂಗಳೂರು- ಬೆಂಗಳೂರು ವಿಸ್ಟಾ ಡೋಮ್ ರೈಲ್ವೆಗೆ ಚಾಲನೆ

ಮಂಗಳೂರು, ಜು. 11 (ಸುದ್ದಿಕಿರಣ ವರದಿ): ರಾಜ್ಯದ ಪ್ರವಾಸೋದ್ಯಮ ವೃದ್ಧಿಯ ಸಾಧ್ಯತೆ ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಮಂಗಳೂರು ಹಾಗೂ ಬೆಂಗಳೂರು ನಡುವೆ ವಿಸ್ಟಾಡೋಮ್ ವಿಶೇಷ ರೈಲು ಪ್ರಯಾಣ ಆರಂಭಿಸಲಾಗಿದ್ದು, ಭಾನುವಾರ ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಚಾಲನೆ ನೀಡಿದರು.
ಹಗಲಿನಲ್ಲಿ ಪ್ರಕೃತಿಯ ರಮಣೀಯ ದೃಶ್ಯ ವೀಕ್ಷಿಸಲು ಅನುಕೂಲವುಳ್ಳ ವಿಸ್ಟಾಡೋಮ್ ಪ್ರಯಾಣಿಕರಿಗೆ ವಿಶೇಷ ಅನುಕೂಲತೆ ಕಲ್ಪಿಸಿದೆ.

ಇಲ್ಲಿನ ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ಹಸಿರು ನಿಶಾನೆ ನೀಡಿದ ನಳಿನ್ ಕುಮಾರ್ ಕಟೀಲು, ರೈಲ್ವೆ ಇಲಾಖೆ ಮುತುವರ್ಜಿ ವಹಿಸಿ ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತುನೀಡುವ ಕೆಲಸ ಮಾಡಿದೆ. ಸಾರ್ವಜನಿಕರು ಅನೇಕ ಬೇಡಿಕೆ ಮುಂದಿಟ್ಟಿದ್ದು, ಒಂದೊಂದೇ ಬೇಡಿಕೆಗಳನ್ನು ಈಡೇರಿಸುತ್ತಾ ಬಂದಿದೆ. 2014ರ ವರೆಗೆ ಆಮೆಗತಿಯಲ್ಲಿ ಸಾಗುತ್ತಿದ್ದ ಅಭಿವೃದ್ಧಿ ಕಾಮಗಾರಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಸಾಕಷ್ಟು ತ್ವರಿತವಾಗಿ ನಡೆಯುತ್ತಿದೆ ಎಂದರು.
ದಕ್ಷಿಣ ರೈಲ್ವೇ ಡಿಆರ್.ಎಂ ತ್ರಿಲೋಕ್ ಕೊಠಾರಿ, ಶಾಸಕ ವೇದವ್ಯಾಸ ಕಾಮತ್, ಮೇಯರ್ ಪ್ರೇಮಾನಂದ ಶೆಟ್ಟಿ ಹಾಗೂ ರೈಲ್ವೆ ಇಲಾಖೆ ಅಧಿಕಾರಿಗಳು ಇದ್ದರು.

ವಿಸ್ಟಾಡೋಮ್ ಬೋಗಿಗಳ್ಳುಳ್ಳ ರೈಲು, ದಕ್ಷಿಣ ಭಾರತದಲ್ಲಿ ರೈಲ್ವೆ ಇಲಾಖೆಯಿಂದ ಮೊದಲ ಬಾರಿಗೆ ಪರಿಚಯಿಸಲಾಗುತ್ತಿದೆ.

ಮಂಗಳೂರು ಜಂಕ್ಷನ್ ಮತ್ತು ಯಶವಂತಪುರ ನಿಲ್ದಾಣಗಳ ನಡುವೆ ಚಲಿಸುವ ಈ ಎಕ್ಸ್ಪ್ರೆಸ್ ರೈಲಿಗೆ ಅಳವಡಿಸಲಾದ ವಿಸ್ಟಾಡೋಮ್ ಬೋಗಿಗಳು ಪಶ್ಚಿಮ ಘಟ್ಟಗಳ ಮೂಲಕ ಸಂಚರಿಸುವಾಗ ರಮಣೀಯ ಪ್ರಾಕೃತಿಕ ಸೊಬಗನ್ನು ಸವಿಯಬಹುದಾಗಿದೆ. ಉನ್ನತ ಪರ್ವತಗಳ ರಮ್ಯ ನೋಟ, ಕಣಿವೆ, ಆಳವಾದ ಕಮರಿಗಳು ಮತ್ತು ಹಚ್ಚಹಸಿರಿನ ಈ ಪ್ರದೇಶ ಮಳೆಗಾಲದಲ್ಲಿ ಇನ್ನಷ್ಟು ಸುಂದರ ದೃಶ್ಯಾವಳಿಗಳು ನೋಡುಗರನ್ನು ಬೆರಗುಗೊಳಿಸುತ್ತದೆ.

ರೈಲಿನಲ್ಲಿ ಎರಡು ವಿಸ್ಟಾಡೋಮ್ ಬೋಗಿಗಳಿದ್ದು, ಪ್ರತಿ ಬೋಗಿಯಲ್ಲಿ 44 ಆಸನ ಸಾಮರ್ಥ್ಯ ಹೊಂದಿದೆ ಅಗಲವಾದ, ದೊಡ್ಡ ಕಿಟಕಿಗಳು ಪ್ರಯಾಣಿಕರಿಗೆ ಸ್ಪಷ್ಟ ನೋಟ ನೀಡುತ್ತದೆ.

ವಿಸ್ಟಾಡೋಮ್ ಬೋಗಿಗಳನ್ನು ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ ಎಲ್.ಎಚ್.ಬಿ (ಲಿಂಕೆ-ಹಾಫ್ಮನ್-ಬುಶ್ ಪ್ಲಾಟ್ ಫಾರ್ಮ್ ತಂತ್ರಜ್ಞಾನ)ನಲ್ಲಿ ತಯಾರಿಸಲಾಗಿದೆ. ಈ ಬೋಗಿಗಳು ಗಾಜಿನ ಮೇಲ್ಛಾವಣಿ ಹೊಂದಿದ್ದು, ಇದು ಬೇಸಿಗೆಯಲ್ಲೂ ಆಕಾಶದ ಸ್ಪಷ್ಟ ನೋಟ ನೀಡುತ್ತದೆ.

ಕೋಚ್ ನಲ್ಲಿ ಸಿಸಿಟಿವಿ ಕಣ್ಗಾವಲು, ಅಗ್ನಿಶಾಮಕ ಸುರಕ್ಷತಾ ವ್ಯವಸ್ಥೆ, ಎಲ್.ಇಡಿ, ಓವನ್ ಮತ್ತು ರೆಫ್ರಿಜರೇಟರ್, ಮಿನಿ ಪ್ಯಾಂಟ್ರಿ, ಮಲ್ಟಿ-ಟೈರ್ಡ್ ಸ್ಟೀಲ್ ಲಗೇಜ್ ಕಪಾಟುಗಳು, ಪ್ರತಿ ಸೀಟಿನಲ್ಲಿ ಮೊಬೈಲ್ ಚಾರ್ಜಿಂಗ್ ಸಾಕೆಟ್ ಗಳಿವೆ. ಅಲ್ಲದೆ, ಕೋಚ್ ಸ್ವಯಂಚಾಲಿತ ಸ್ಲೈಡಿಂಗ್ ಬಾಗಿಲು ಮತ್ತು ಜೈವಿಕ ಶೌಚಾಲಯ ಹೊಂದಿದೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!