Monday, July 4, 2022
Home ಸಮಾಚಾರ ಜಿಲ್ಲಾ ಸುದ್ದಿ ಬೇಡುವ ಬದಲಾಗಿ ನೀಡುವ ರಾಷ್ಟ್ರವಾದ ಭಾರತ

ಬೇಡುವ ಬದಲಾಗಿ ನೀಡುವ ರಾಷ್ಟ್ರವಾದ ಭಾರತ

ಪುತ್ತೂರು: ಸ್ವಾಮಿ ವಿವೇಕಾನಂದರು ಬಯಸಿದ್ದ ಸ್ವಾವಲಂಬನೆ, ಆತ್ಮನಿರ್ಭರ ಭಾರತವಾಗಿ ಇಂದು ಸಾಕಾರಗೊಳ್ಳುತ್ತಿದೆ. ಭಾರತ, ಇತರ ರಾಷ್ಟ್ರಗಳಿಂದ ಬೇಡುವ ಬದಲಾಗಿ ನೀಡುವ ಸ್ಥಿತಿಗೆ ಬಂದಿದೆ. ಇಲ್ಲಿನ ಯುವಶಕ್ತಿ ಇಂಥ ಹಿರಿಮೆಯನ್ನು ಆದರ್ಶವಾಗಿಟ್ಟುಕೊಂಡು ರಾಷ್ಟ್ರೀಯ ಯುವ ದಿನಕ್ಕೆ ಹೊಸ ಅರ್ಥ ಕಲ್ಪಿಸಿಕೊಡಬೇಕು ಎಂದು ಅಂಬಿಕಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ| ವಿನಾಯಕ ಭಟ್ ಗಾಳಿಮನೆ ಆಶಿಸಿದರು.

ಇಲ್ಲಿನ ಬಪ್ಪಳಿಗೆ ನಟ್ಟೋಜ ಫೌಂಡೇಶನ್ ಟ್ರಸ್ಟ್ ಆಶ್ರಯದ ಅಂಬಿಕಾ ಮಹಾವಿದ್ಯಾಲಯದ ಸಂಸ್ಕೃತ, ಕನ್ನಡ ಹಾಗೂ ತತ್ವಶಾಸ್ತ್ರ ವಿಭಾಗ ಸಂಯುಕ್ತಾಶ್ರಯದಲ್ಲಿ ಮಂಗಳವಾರ ನಡೆದ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇಂದು ಯುವ ಜನತೆ ವಿವಿಧ ಆಕರ್ಷಣೆಗಳಿಗೆ ಬಲಿಯಾಗುತ್ತಿರುವುದನ್ನು ನೋಡುವಾಗ ಖೇದವೆನಿಸುತ್ತದೆ. ಯಾರನ್ನು ತಮ್ಮ ಜೀವನದ ಆದರ್ಶ ವ್ಯಕ್ತಿಯನ್ನಾಗಿ ಕಾಣಬೇಕಿತ್ತೋ ಅವರನ್ನು ಮರೆಯುತ್ತಿದ್ದೇವೆ. ಕೇವಲ ನಮ್ಮನ್ನು ಭ್ರಮೆಗೆ ಒಳಪಡಿಸುವ ಮಂದಿಯನ್ನು ನಾವು ಆದರ್ಶವಾಗಿ ಸ್ವೀಕರಿಸುತ್ತಿದ್ದೇವೆ. ಇಂಥ ಮನಃಸ್ಥಿತಿಯಿಂದ ಹೊರಬಂದು ಅತ್ಯುನ್ನತ ಆದರ್ಶವನ್ನು ದೇಶಕ್ಕೆ ನೀಡಿದ ವಿವೇಕಾನಂದರಂಥ ಮೇರುವ್ಯಕ್ತಿಗಳು ನಮಗೆ ಮಾದರಿಯಾಗಬೇಕು ಎಂದವರು ಆಶಿಸಿದರು.

ನಾವು ಜಗತ್ತನ್ನು ಗೆಲ್ಲುವುದು ಶಕ್ತಿಯಿಂದಲ್ಲ, ಬದಲಾಗಿ ಅತ್ಯುತ್ತಮ ಚಾರಿತ್ರ್ಯದಿಂದ. ಹಾಗಾಗಿ ಚಾರಿತ್ರ್ಯ ಬೆಳೆಸಿಕೊಳ್ಳುವುದು ಅತ್ಯಂತ ಮುಖ್ಯ. ದೇಶಪ್ರೇಮ, ದೇಶದೆಡೆಗಿನ ತುಡಿತ ನಮ್ಮನ್ನು ಎತ್ತರಕ್ಕೆ ಒಯ್ಯುತ್ತದೆ. ವಿವೇಕಾನಂದರ ಜನ್ಮದಿನದಂದು ದೇಶಕ್ಕಾಗಿ ನಾನು ದುಡಿಯುತ್ತೇನೆ, ನನ್ನ ಪ್ರತಿಭೆಯನ್ನು ಈ ದೇಶಕ್ಕಾಗಿ ವಿನಿಯೋಗಿಸುತ್ತೇನೆ ಎಂಬ ಪ್ರತಿಜ್ಞೆ ಮಾಡಬೇಕು ಎಂದು ಡಾ| ಗಾಳಿಮನೆ ಕರೆನೀಡಿದರು.

ಅಭ್ಯಾಗತರಾಗಿದ್ದ ಅಂಬಿಕಾ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಸಂದರ್ಶಕ ಪ್ರಾಧ್ಯಾಪಕ ರಾಕೇಶ್ಕುಮಾರ್ ಕಮ್ಮಜೆ, ಪ್ರಪಂಚ ನಮ್ಮೆಡೆಗೆ ತಿರುಗಿ ನೋಡಬೇಕೆಂದು ನಾವಿಂದು ಬಯಸುತ್ತಿದ್ದೇವೆ. ಆದರೆ 1893ರಲ್ಲೇ ಸ್ವಾಮಿ ವಿವೇಕಾನಂದರು ಚಿಕಾಗೋ ಭಾಷಣದ ಮೂಲಕ ಜಗತ್ತನ್ನು ಭಾರತದೆಡೆಗೆ ತಿರುಗಿಸಿ ಹೆಮ್ಮೆತಂದಿದ್ದಾರೆ. ಅವರ ಜನ್ಮದಿನ ಎನ್ನುವುದು ಅವರ ಚಿಂತನೆಗಳನ್ನು ನಮ್ಮ ಜೀವನದಲ್ಲಿ ಎಷ್ಟು ಅಳವಡಿಸಿಕೊಂಡಿದ್ದೇವೆ ಎಂಬುದರ ವಿಮಶರ್ೆಗಾಗಿ ನಿಗದಿಪಡಿಸಲಾದ ದಿನವಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸವಸತಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಶಂಕರನಾರಾಯಣ ಭಟ್, ವಿವೇಕಾನಂದರಿಂದಾಗಿ ಯುವಶಕ್ತಿಗೆ ಹೊಸ ಚೇತನ ದೊರಕಿದೆ. ಅವರ ಚಿಂತನೆ ನಮಗೆ ಸದಾ ಮಾರ್ಗದರ್ಶಕ ಎಂದರು.

ಅಧ್ಯಕ್ಷತೆ ವಹಿಸಿದ್ದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಕೋಶಾಧಿಕಾರಿ ರಾಜಶ್ರೀ ಎಸ್. ನಟ್ಟೋಜ, ಇಂದು ಐ.ಕ್ಯೂ. ಕಲ್ಪನೆ ಹಳತಾಗಿ ಎಸ್.ಕ್ಯು. (ಸ್ಪಿರಿಚುವಲ್ ಕೋಶಂಟ್) ಕಲ್ಪನೆ ಗಾಢವಾಗಿ ಕಾಣಿಸುತ್ತಿದೆ. ಇದು ನಮ್ಮಜೀವನದ ತುರೀಯಾವಸ್ಥೆಯೂ ಹೌದು. ಇದನ್ನು ತಲಪುವುದು ನಮ್ಮ ಬದುಕಿನ ಗುರಿಯಾಗಬೇಕು. ವಿವೇಕಾನಂದರು ಹೇಳಿದಂತೆ ಗುರಿಯೊಂದನ್ನು ಮನದೊಳಗೆ ಪ್ರತಿಷ್ಠಾಪಿಸಿ ಹಗಲಿರುಳೂ ಅದಕ್ಕಾಗಿ ಶ್ರಮಿಸಿ ಯಶಸ್ಸನ್ನು ನಮ್ಮದಾಗಿಸಿಕೊಳ್ಳಬೇಕು ಎಂದರು.

ಸ್ವಾಮಿ ವಿವೇಕಾನಂದ ಜಯಂತಿ ಪ್ರಯುಕ್ತ ಆಯೋಜಿಸಲಾಗಿದ್ದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ವಿದ್ಯಾರ್ಥಿನಿಯರಾದ ಶ್ರೀಲಕ್ಷ್ಮೀ, ನಿಶ್ಚಿತಾ ಹಾಗೂ ಪ್ರಿಯಾ ಪ್ರಾರ್ಥಿಸಿದರು. ವಿದ್ಯಾರ್ಥಿನಿ ಅದಿತಿ ಎಂ. ಎಸ್. ಸ್ವಾಗತಿಸಿ, ಶ್ರೀಲಕ್ಷ್ಮಿ ವಂದಿಸಿದರು. ವೈಷ್ಣವಿ ಜೆ. ರಾವ್ ನಿರೂಪಿಸಿದರು.
ಕೊರೋನಾ ನಿಯಮಗಳಿಗನುಸಾರ ಕಾರ್ಯಕ್ರಮ ಆಯೋಜಿಸಲಾಯಿತು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!