Wednesday, July 6, 2022
Home ಸಮಾಚಾರ ಜಿಲ್ಲಾ ಸುದ್ದಿ ವ್ಯಸನಗಳಿಂದ ದೂರವಿದ್ದಲ್ಲಿ ಆರೋಗ್ಯ ಸದೃಢ

ವ್ಯಸನಗಳಿಂದ ದೂರವಿದ್ದಲ್ಲಿ ಆರೋಗ್ಯ ಸದೃಢ

ಉಡುಪಿ: ಮಾದಕ ವ್ಯಸನಕ್ಕೆ ಯಾರು ಬೇಕಾದರೂ ಒಳಗಾಗಬಹುದು. ಅದಕ್ಕೆ ವಯಸ್ಸಿನ ಹಂಗಿಲ್ಲ. ಆಸೆಯೇ ವ್ಯಸನಕ್ಕೆ ಕಾರಣ. ವ್ಯಸನದಿಂದ ಚಿತ್ತ ವಿಘಟನೆಯಾಗುತ್ತದೆ. ಮಾದಕ ವ್ಯಸನದಿಂದ ದೂರವಿದ್ದರೆ ಆರೋಗ್ಯ ಸದೃಢವಾಗಿರುತ್ತದೆ ಎಂದು ದೊಡ್ಡಣಗುಡ್ಡೆ ಡಾ. ಎ. ವಿ. ಬಾಳಿಗ ಆಸ್ಪತ್ರೆ ಆಪ್ತ ಸಮಾಲೋಚಕ ಲೋಹಿತ್ ಹೇಳಿದರು.

ಇಲ್ಲಿನ ಸಂತ ಮೇರಿ ಕಾಲೇಜಿನ ವ್ಯಸನ ಮುಕ್ತ ಕೋಶ ಮತ್ತು ಐಕ್ಯೂಎಸಿ ನೇತೃತ್ವದಲ್ಲಿ ನಡೆದ ಮಾದಕ ವ್ಯಸನ ಮತ್ತು ಯುವಜನತೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಾದಕ ವ್ಯಸನದಿಂದಲೇ ಇಂದು ಸಮಾಜದಲ್ಲಿ ಅತ್ಯಾಚಾರ, ವಿವಾಹ ವಿಚ್ಛೇದನೆಗಳು ಹೆಚ್ಚಾಗುತ್ತಿವೆ. ವ್ಯಸನಕ್ಕೆ ಒಳಗಾದ ವ್ಯಕ್ತಿ ಆತ್ಮಸಾಕ್ಷಿಗೆ ವಿರುದ್ಧವಾಗಿ ಸಮಾಜ ಘಾತಕ ಚಟುವಟಿಕೆಗಳಲ್ಲಿ ತೊಡಗುತ್ತಾನೆ. ಮಾದಕ ವ್ಯಸನದ ಜೊತೆಗೆ ಮೊಬೈಲ್ ಕೂಡಾ ವ್ಯಸನವಾಗಿ ಯುವ ಪೀಳಿಗೆಯನ್ನು ಕಾಡುತ್ತಿದೆ. ಆದ್ದರಿಂದ ಭಾವನೆಗಳನ್ನು ಆತ್ಮೀಯರ ಜೊತೆಗೆ ಹಂಚಿಕೊಳ್ಳಿ, ಅದರಿಂದ ಒತ್ತಡ ಕಡಿಮೆ ಮಾಡಿಕೊಳ್ಳಿ. ಆತ್ಮವಿಶ್ವಾಸ ಬೆಳೆಸಿಕೊಳ್ಳಿ, ಕೀಳರಿಮೆಯಿಂದ ಹೊರಬನ್ನಿ ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ| ಹೆರಾಲ್ಡ್ ಐವನ್ ಮೋನಿಸ್, ಹದಿಹರೆಯದ ಮಕ್ಕಳು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ವಿದ್ಯಾರ್ಥಿಗಳು ಚಟಗಳಿಗೆ ಬಲಿಯಾಗಿ ತಮ್ಮ ಭವಿಷ್ಯ ಹಾಳು ಮಾಡಿಕೊಳ್ಳಬಾರದು ಎಂದರು.

ಕಾಲೇಜಿನ ವ್ಯಸನ ಮುಕ್ತ ಕೋಶ ಸಂಚಾಲಕಿ ಡಾ. ಗುಲಾಬಿ ಸ್ವಾಗತಿಸಿದರು. ಪ್ರಥಮ ಬಿಸಿಎ ವಿದ್ಯಾರ್ಥಿನಿ ಛಾಯಾ ನಿರೂಪಿಸಿದರು. ವ್ಯಸನಮುಕ್ತ ಕೋಶ ಸಹ ಸಂಚಾಲಕಿ ಪದ್ಮಾಸಿನಿ ಯು. ವಂದಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!