Wednesday, July 6, 2022
Home ಸಮಾಚಾರ ರಾಷ್ಟ್ರೀಯ ವಾರ್ತೆ ಕರ್ನಾಟಕದಿಂದ ಪ್ರಿಯಾಂಕ ಸ್ಪರ್ಧಿಸಿದರೂ ಸ್ವಾಗತ

ಕರ್ನಾಟಕದಿಂದ ಪ್ರಿಯಾಂಕ ಸ್ಪರ್ಧಿಸಿದರೂ ಸ್ವಾಗತ

ಸುದ್ದಿಕಿರಣ ವರದಿ
ಶನಿವಾರ, ಮೇ 14

ಕರ್ನಾಟಕದಿಂದ ಪ್ರಿಯಾಂಕ ಸ್ಪರ್ಧಿಸಿದರೂ ಸ್ವಾಗತ
ಉಡುಪಿ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಕರ್ನಾಟಕದಿಂದ ರಾಜ್ಯಸಭೆಗೆ ಸ್ಪರ್ಧಿಸಿದರೆ ಸ್ವಾಗತ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಿಂದ ಯಾರು ಬೇಕಾದರೂ ಕರ್ನಾಟಕದಿಂದ ಸ್ವರ್ಧಿಸಬಹುದು. ಪ್ರಿಯಾಂಕ ಅವರ ಅಜ್ಜಿ, ಅಮ್ಮನನ್ನು ಸ್ವಾಗತಿಸಿದ್ದೇವೆ.

ತನ್ನ ಕೆಟ್ಟ ಕಾಲದಲ್ಲಿ ಇಂದಿರಾ ಗಾಂಧಿ ಕರ್ನಾಟಕದಿಂದ ಸ್ಪರ್ಧಿಸಿದ್ದರು, ನಂತರ ಸೋನಿಯಾ ಗಾಂಧಿ ಸ್ಪರ್ಧೆ ಮಾಡಿದ್ದರು; ಇದೀಗ ಪ್ರಿಯಾಂಕ ಸ್ಪರ್ಧಿಸಿದರೂ ಸ್ವಾಗತ ಎಂದು ಸಚಿವೆ ಶೋಭಾ ಹೇಳಿದರು.

ಹಿಂಬಾಗಿಲ ಪ್ರವೇಶ ಬೇಡ
ಇಂದು ಕರ್ನಾಟಕದಲ್ಲಿ ಕಾಂಗ್ರೆಸ್ ನೆಲಕಚ್ಚುತ್ತಿದೆ. ಉತ್ತರ ಪ್ರದೇಶದಲ್ಲೂ ಹಾಗೇ ಆಗಿತ್ತು. ಅಲ್ಲಿ ಕಾಂಗ್ರೆಸ್ ನ್ನು ಮೇಲಕ್ಕೆತ್ತಲು ಪ್ರಿಯಾಂಕ ಹೋಗಿದ್ದರು. ಈಗ ಅದೇ ರೀತಿ ಕರ್ನಾಟಕಕ್ಕೆ ಬರುತ್ತಿರಬಹುದು, ಅದು ಒಳ್ಳೆಯ ಬೆಳವಣಿಗೆ, ಖಂಡಿತಾ ಬರಲಿ ಎಂದು ಶೋಭಾ ವ್ಯಂಗ್ಯವಾಡಿದರು.

ಕಾಂಗ್ರೆಸ್ ಒಂದು ರಾಷ್ಟ್ರೀಯ ಪಕ್ಷ. ಆದ್ದರಿಂದ ಪ್ರಿಯಾಂಕ ಹಿಂಬಾಗಿಲಿನಿಂದ ಸಂಸತ್ ಗೆ ಬರುವ ಬದಲು ಲೋಕಸಭೆಗೆ ಸ್ಪರ್ಧಿಸಿ ಬಂದರೆ ಉತ್ತಮ ಎಂದು ಶೋಭಾ ಕರಂದ್ಲಾಜೆ ಸಲಹೆ ಮಾಡಿದರು.

ನಿರ್ಮಲಾ ಇಲ್ಲಿಂದಲೇ ಸ್ಪರ್ಧಿಸಲಿ
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನಮ್ಮ ರಾಜ್ಯದಿಂದ ಆಯ್ಕೆಯಾಗಿ ದೆಹಲಿಗೆ ಹೋಗಿ ಮಾಡಿರುವ ಸಾಧನೆ ದೊಡ್ಡದು. ದೇಶದ ಆರ್ಥಿಕ ಮತ್ತು ರಕ್ಷಣಾ ಸಚಿವೆಯಾಗಿರುವುದು ಸಣ್ಣ ವಿಚಾರ ಅಲ್ಲ.

ಕೊರೊನಾ ಸವಾಲಿನಲ್ಲಿಯೂ ಉತ್ತಮವಾಗಿ ದೇಶದ ಅರ್ಥ ವ್ಯವಸ್ಥೆಯನ್ನು ಉತ್ತಮವಾಗಿ ನಿರ್ವಹಿಸಿದ್ದಾರೆ.

ಅವರು ಮತ್ತೊಮ್ಮೆ ಕರ್ನಾಟಕದಿಂದಲೇ ರಾಜ್ಯಸಭೆಗೆ ಸ್ಪರ್ಧಿಸಲಿ ಎಂದು ಶೋಭಾ ಕರಂದ್ಲಾಜೆ ಆಶಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!