Thursday, December 2, 2021
Home ಸಮಾಚಾರ ರಾಜ್ಯ ವಾರ್ತೆ ಪೇಜಾವರಶ್ರೀ ಪದ್ಮವಿಭೂಷಣ ಪ್ರಶಸ್ತಿ ಸ್ವಾಗತ ಸಮಾರಂಭ

ಪೇಜಾವರಶ್ರೀ ಪದ್ಮವಿಭೂಷಣ ಪ್ರಶಸ್ತಿ ಸ್ವಾಗತ ಸಮಾರಂಭ

ಪೇಜಾವರಶ್ರೀ ಪದ್ಮವಿಭೂಷಣ ಪ್ರಶಸ್ತಿ ಸ್ವಾಗತ ಸಮಾರಂಭ

ಉಡುಪಿ, ನ. 11 (ಸುದ್ದಿಕಿರಣ ವರದಿ): ಕೀರ್ತಿಶೇಷ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರಿಗೆ ಭಾರತ ಸರ್ಕಾರ ನೀಡಿದ್ದ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿ ಸ್ವೀಕರಿಸಿ, ಉಡುಪಿಗೆ ಮರಳಿದ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರನ್ನು ಗುರುವಾರ ಅದ್ದೂರಿಯಾಗಿ ಸ್ವಾಗತಿಸಲಾಯಿತು.

ನಗರದ ಶ್ರೀಮನ್ಮಮಧ್ವಸಿದ್ಧಾಂತಪ್ರಬೋಧಿನೀ ಸಂಸ್ಕೃತ ಮಹಾಪಾಠಶಾಲೆ ಬಳಿಯಿಂದ ಕೃಷ್ಣಮಠ ವರೆಗೆ ಸಾಲಂಕೃತ ವಾಹನದಲ್ಲಿ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಬೃಹತ್ ಭಾವಚಿತ್ರ ಹಾಗೂ ಪದ್ಮವಿಭೂಷಣ ಪ್ರಶಸ್ತಿಯನ್ನು ತೆರೆದ ವಾಹನದ ಮೂಲಕ ಮೆರವಣಿಗೆಯಲ್ಲಿ ತರಲಾಯಿತು.

ಶ್ರೀಕೃಷ್ಣಾರ್ಪಣ
ಪ್ರಶಸ್ತಿಯನ್ನು ಕೃಷ್ಣಮಠದೊಳಕ್ಕೆ ತರಲಾಯಿತು. ಕನಕ ನವಗ್ರಹ ಕಿಂಡಿ ಬಳಿ ಶ್ರೀಕೃಷ್ಣನಿಗೆ ಪ್ರಶಸ್ತಿಯನ್ನು ಸಮರ್ಪಿಸುವ ಮೂಲಕ ಶ್ರೀಕೃಷ್ಣಾರ್ಪಣಗೊಳಿಸಲಾಯಿತು. ಬಳಿಕ ಸರ್ವಜ್ಞಪೀಠದಲ್ಲಿ ಮಂಡಿಸಿರುವ ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ಸಹಿತ ಅಷ್ಟಮಠಗಳ ಯತಿಗಳಿಗೆ ಪ್ರದರ್ಶಿಸಲಾಯಿತು.

ಮತ್ತೆ ಸಾಗಿಬಂದ ಮೆರವಣಿಗೆ ಪೇಜಾವರ ಮಠಕ್ಕೆ ಚಿತ್ತೈಸಿ, ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಮಂಟಪದಲ್ಲಿಟ್ಟು ಆರತಿ ಬೆಳಗಲಾಯಿತು.

ಬಳಿಕ ಪೇಜಾವರ ಮಠ ಎದುರು ನಿರ್ಮಿಸಲಾದ ವೇದಿಕೆಯಲ್ಲಿ ಸ್ವಾಗತ ಸಂಭ್ರಮ ಸಮಾರಂಭ ನಡೆಯಿತು.

ಪೇಜಾವರರದು ಮತ ಮೀರಿ ನಿಂತ ಪ್ರೀತಿ
ಸಾನ್ನಿಧ್ಯ ವಹಿಸಿದ್ದ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಮಾತನಾಡಿ, ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರದು ಮತ ಧರ್ಮ ಮೀರಿ ನಿಂತ ಪ್ರೀತಿಯಾಗಿತ್ತು. ಎಲ್ಲ ಧರ್ಮೀಯರಿಂದ ಗೌರವಿಸಲ್ಪಡುತ್ತಿದ್ದ ಅವರು ಎಲ್ಲ ಧರ್ಮೀಯರನ್ನೂ ಪ್ರೀತಿಸುತ್ತಿದ್ದರು ಎಂದರು.

ನಿತ್ಯಾನುಷ್ಠಾನ, ಪೂಜೆ, ಪಾಠ ಪ್ರವಚನಗಳನ್ನು ಅನೂಚಾನವಾಗಿ ಪಾಲಿಸಿಕೊಂಡು ಬರುತ್ತಲೇ ಸಮಾಜದ ಎಲ್ಲ ವರ್ಗಗಳವರಿಗೂ ಸಕಾಲಿಕ ಮಾರ್ಗದರ್ಶನ ನೀಡುತ್ತಿದ್ದ ಶ್ರೀಪಾದರು, ಎಲ್ಲ ಸಮಸ್ಯೆಗಳಿಗೂ ಸ್ಪಂದಿಸುತ್ತಿದ್ದ ಯತಿ ಎಂದರು.

ಪೀಠಾಧಿಪತಿಯಾಗುತ್ತಲೇ ವಿಶ್ವೇಶ ಪ್ರಶಸ್ತಿಗೆ ಭಾಜನರಾದ ಪೇಜಾವರರು ವಿಶ್ವಪೂಜ್ಯರಾದವರು ಎಂದರು.

ಆಸ್ತಿಕ ವೃಂದಕ್ಕೆ ಸಂದ ಪ್ರಶಸ್ತಿ
ಸೋದೆ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಮಾತನಾಡಿ, ಪೇಜಾವರ ಶ್ರೀಪಾದರಿಗೆ ಸಂದ ಪ್ರಶಸ್ತಿ ಸಮಸ್ತ ಆಸ್ತಿಕ ವೃಂದಕ್ಕೆ ಲಭಿಸಿದ ಪ್ರಶಸ್ತಿ. ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಆಸ್ತಿಕ ವೃಂದದ ಪ್ರತಿನಿಧಿಯಾಗಿದ್ದರು.

ಪದ್ಮದಂತಿದ್ದ ಅವರು, ಪ್ರಶಸ್ತಿಗಳಿಗೆ ಎಂದೂ ಹಿಗ್ಗದೇ ಸ್ಥಿತಪ್ರಜ್ಞರಾಗಿದ್ದರು ಎಂದರು.

ಕರ್ತವ್ಯಪ್ರಜ್ಞೆಯ ಸಾಧನೆ
ಪಲಿಮಾರು ಕಿರಿಯ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಮಾತನಾಡಿ, ಸಾಧನೆಗೆ ಜ್ಞಾನ ಮತ್ತು ಕರ್ಮ ಕಾರಣ ಎಂದು ತಿಳಿದಿದ್ದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು, ಯಾವುದೇ ಪ್ರಚಾರ ಪ್ರಸಿದ್ಧಿಗಳನ್ನು ಬಯಸದೇ ಕರ್ತವ್ಯ ಪ್ರಜ್ಞೆಯಿಂದ ಸಾಧನೆ ಮಾಡಿದ ಮಹಾನುಭಾವರು ಎಂದು ಬಣ್ಣಿಸಿದರು.

ಗುರುವಿಗೆ ಲಭಿಸಿದ ಪ್ರಶಸ್ತಿಯನ್ನು ಶಿಷ್ಯರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಪಡೆಯುವ ಮೂಲಕ ಭಾಗ್ಯಶಾಲಿಗಳಾದರು ಎಂದರು.

ಮಾನವನಲ್ಲಿ ಮಾಧವ ರೂಪ
ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಮಾತನಾಡಿ, ಪರಮ ಆಸ್ತಿಕರೂ ಭಗವದ್ಭಕ್ತರೂ ಆಗಿದ್ದ ತಮ್ಮ ಗುರುಗಳಾದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಗುಡಿಗಳಲ್ಲಿ ಮಾತ್ರ ದೇವರನ್ನು ಕಾಣದೇ ಪ್ರತಿಯೊಬ್ಬರ ಹೃದಯದಲ್ಲೂ ದೇವರನ್ನು ಕಂಡು ಸಮಾಜಸೇವೆಯನ್ನು ದೇವಪೂಜೆಯಾಗಿಸಿದ್ದವರು.

ಪರಮಹಂಸ ಪರಿವ್ರಾಜರಕರಾಗಿದ್ದ ಅವರಿಗೆ ಸಂದ ಪ್ರಶಸ್ತಿಯಿಂದ ಪ್ರಶಸ್ತಿಯ ಮೌಲ್ಯ ವೃದ್ಧಿಸಿದೆ ಎಂದರು.

ಪೇಜಾವರ ಶ್ರೀಪಾದರು ನಮ್ಮವರು ಎಂಬ ಭಾವ ಎಲ್ಲರಲ್ಲೂ ಇದ್ದು, ಗುರುಗಳಾದ ಶ್ರೀ ವಿಶ್ವೇಶತೀರ್ಥ ಶ್ರೀಪಾದರಿಗೆ ಪ್ರಶಸ್ತಿ ಲಭಿಸಿದಾಗ ಅವರ ಅಭಿಮಾನಿಗಳೆಲ್ಲರೂ ತಮಗೇ ಪ್ರಶಸ್ತಿ ಲಭಿಸಿದ ಸಂತಸ ಅನುಭವಿಸಿದರು.

ಈಮಧ್ಯೆ, ಶ್ರೀ ವಿಶ್ವೇಶತೀರ್ಥ ಶ್ರೀಪಾದರು ನಮ್ಮೊಂದಿಗಿಲ್ಲ ಎಂಬ ಕೊರಗು ರಾಷ್ಟ್ರಪತಿ ಕೋವಿಂದ್ ಸಹಿತ ಎಲ್ಲರಿಗೂ ಕಾಡುತ್ತಿದೆ ಎಂದರು.

ಸಾಧಕರಿಗೆ ಸ್ಪೂರ್ತಿ
ಅಧ್ಯಕ್ಷತೆ ವಹಿಸಿದ್ದ ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಯಾವುದೇ ಕೆಲಸ ಮಾಡುವಾಗ ಸ್ವಾರ್ಥ ರಹಿತವಾಗಿ ಮಾಡಬೇಕು ಹಾಗೂ ಶಾಸ್ತ್ರದ ಎಲ್ಲೆ ಮೀರಿ ವರ್ತಿಸಬಾರದು ಎನ್ನುವುದಕ್ಕೆ ಪೇಜಾವರರು ಮಾದರಿ. ಅವರಿಗೆ ಲಭಿಸಿರುವ ಪ್ರಶಸ್ತಿ ಸಾಧಕರಿಗೆ ಸ್ಪೂರ್ತಿ, ಅವರು ನಮಗೆಲ್ಲರಿಗೂ ಆದರ್ಶ ಎಂದರು.

ಗಳಿಸಿದ ಆಸ್ತಿ
ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಹಲವು ಕಾರಣಗಳಿಂದಾಗಿ ಉಡುಪಿಗೆ ಕೀರ್ತಿ ತಂದಿತ್ತ ಪೇಜಾವರ ಶ್ರೀ ವಿಶ್ವೇಶತೀರ್ಥರಿಗೆ ಪದ್ಮವಿಭೂಷಣ ಪ್ರಶಸ್ತಿ ಲಭಿಸುವ ಮೂಲಕ ಮತ್ತೊಮ್ಮೆ ಉಡುಪಿಯ ಕೀರ್ತಿ ಎಲ್ಲೆಡೆ ಪಸರಿಸಿದೆ. ಅವರ ಸಂಸರ್ಗದಲ್ಲಿ ನಾವೆಲ್ಲ ಇದ್ದೆವು ಎಂಬುದೇ ನಾವು ಗಳಿಸಿರುವ ದೊಡ್ಡ ಆಸ್ತಿ ಎಂದು ಬಣ್ಣಿಸಿದರು.

ಸಾಧನೆಯ ಮೂಲಕ ಪ್ರಶಸ್ತಿ ನೀಡುವ ಸಂಪ್ರದಾಯಕ್ಕೆ ನಾಂದಿ ಹಾಡಿದ ಪ್ರಧಾನಿ ಮೋದಿ ಅಭಿನಂದನಾರ್ಹರು ಎಂದು ಪ್ರಮೋದ್ ಪ್ರಶಂಸಿಸಿದರು.

ಅರಸಿಬಂದ ಪ್ರಶಸ್ತಿ
ಉಪಾಸನೆ, ಆರಾಧನೆ, ಜನಸೇವೆ, ಹಿಂದೂಗಳನ್ನು ಒಗ್ಗೂಡಿಸುವಿಕೆ ಇತ್ಯಾದಿಗಳಿಗಾಗಿ ಶ್ರೀ ವಿಶ್ವೇಶತೀರ್ಥ ಶ್ರೀಪಾದರಿಗೆ ಪದ್ಮವಿಭೂಷಣ ಪ್ರಶಸ್ತಿ ಅರಸಿ ಬಂದಿದೆ. ಆ ಮೂಲಕ ಮೊತ್ತ ಮೊದಲ ಬಾರಿಗೆ ಮಾಧ್ವ ಯತಿಯೋರ್ವರಿಗೆ, ಅದೂ ಉಡುಪಿ ಅಷ್ಟಮಠಗಳ ಯತಿಗೆ ಪದ್ಮ ಪ್ರಶಸ್ತಿ ಲಭಿಸಿರುವುದು ಉಡುಪಿ ಹಾಗೂ ಕೃಷ್ಣ ಭಕ್ತರಿಗೆ ಹೆಮ್ಮೆಯ ಸಂಗತಿ ಎಂದು ಸರ್ವರನ್ನೂ ಸ್ವಾಗತಿಸಿದ ಕಾರ್ಯಕ್ರಮದ ರೂವಾರಿ, ಶಾಸಕ ರಘುಪತಿ ಭಟ್ ಹೇಳಿದರು.

ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉಡುಪಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ರಾಷ್ಟ್ರೀಯ ಮಹಿಳಾ ಆಯೋಗ ಸದಸ್ಯೆ ಶ್ಯಾಮಲಾ ಕುಂದರ್ ಇದ್ದರು.

ವಿಶ್ರಾಂತ ಮುಖ್ಯೋಪಾಧ್ಯಾಯ ಮುರಳಿ ಕಡೆಕಾರ್ ಮತ್ತು ಸಮಾಜ ಸೇವಕ ವಾಸುದೇವ ಭಟ್ ಪೆರಂಪಳ್ಳಿ ನಿರೂಪಿಸಿದರು. ಸೋದೆ ಮಠ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ರತ್ನಕುಮಾರ್ ವಂದಿಸಿದರು.

ಬಳಿಕ ಸಾರ್ವಜನಿಕರಿಂದ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸಲಾಯಿತು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!