Saturday, August 13, 2022
Home ಸಮಾಚಾರ ಜಿಲ್ಲಾ ಸುದ್ದಿ ನಿರುದ್ಯೋಗಿಗಳ ಸಮೀಕ್ಷೆಗೆ ಯುವ ಕಾಂಗ್ರೆಸ್ ನಿಂದ ಆ್ಯಪ್

ನಿರುದ್ಯೋಗಿಗಳ ಸಮೀಕ್ಷೆಗೆ ಯುವ ಕಾಂಗ್ರೆಸ್ ನಿಂದ ಆ್ಯಪ್

ಸುದ್ದಿಕಿರಣ ವರದಿ
ಶನಿವಾರ, ಜುಲೈ 16

ನಿರುದ್ಯೋಗಿಗಳ ಸಮೀಕ್ಷೆಗೆ ಯುವ ಕಾಂಗ್ರೆಸ್ ನಿಂದ ಆ್ಯಪ್
ಉಡುಪಿ: ರಾಜ್ಯದ ನಿರುದ್ಯೋಗಿ ಯುವಜನತೆಯ ಸಮೀಕ್ಷೆ ನಡೆಸಲು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ನಿರ್ಧರಿಸಿದ್ದು, ಅಧ್ಯಕ್ಷ ಮೊಹಮ್ಮದ್ ಹ್ಯಾರಿಸ್ ನಾಲ್ಪಡ್ ಸೂಚನೆಯಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಯೂತ್ ಜೋಡೋ ಬೂತ್ ಜೋಡೋ ಕಾರ್ಯಕ್ರಮ ಹಾಗೂ ಉದ್ಯೋಗ ಸೃಷ್ಟಿ ಆ್ಯಪ್ ಬಿಡುಗಡೆ ಮಾಡಿರುವುದಾಗಿ ರಾಷ್ಟ್ರೀಯ ಯುವ ಕಾಂಗ್ರೆಸ್ ಸಂಯೋಜಕಿ ತೇಜಸ್ವಿ ಹೇಳಿದರು.

ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಎಲ್ಲಾ ಜಿಲ್ಲೆಗಳ ಪ್ರತೀ ವಿಧಾನಸಭಾ ಕ್ಷೇತ್ರಗಳ ಬ್ಲಾಕ್ ಹಾಗೂ ಪ್ರತೀ ಗ್ರಾಮ ಪಂಚಾಯತ್ ಮಟ್ಟದಲ್ಲಿ ನಿರುದ್ಯೋಗಿಗಳ ಸರ್ವೇ ಮಾಡಲಾಗುತ್ತಿದ್ದು, ಆ ಮೂಲಕ ಜಿಲ್ಲೆಯಲ್ಲಿ ಎಷ್ಟು ಮಂದಿ ನಿರುದ್ಯೋಗಿಗಳಿದ್ದಾರೆ ಎಂಬುದನ್ನು ಅಂಕಿಅಂಶದೊಂದಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನೀಡಿ, ಉದ್ಯೋಗ ಸೃಷ್ಟಿ ಬಗ್ಗೆ ಆಗ್ರಹ ಹಾಗೂ ವಿವರ ನೀಡಲಾಗುವುದು. ಜೊತೆಗೆ ಮುಂದಿನ ದಿನಗಳಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಉದ್ಯೋಗ ಸೃಷ್ಟಿ ಯೋಜನೆ ರೂಪಿಸುವ ಉದ್ದೇಶವೂ ಇದರಲ್ಲಿ ಅಡಗಿದೆ ಎಂದರು.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಿರುದ್ಯೋಗ ದಾಖಲೆ ಪ್ರಮಾಣದಲ್ಲಿ ಹೆಚ್ಚಾಗಿದೆ. ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದ ನರೇಂದ್ರ ಮೋದಿ ಸರ್ಕಾರ, ಉದ್ಯೋಗಿಗಳನ್ನೂ ನಿರುದ್ಯೋಗಿಗಳನ್ನಾಗಿಸಿ ಬೀದಿಗೆ ತಳ್ಳಿದೆ.

ಆದರೆ, ನಾವು ನಿರುದ್ಯೋಗ ವಿಚಾರವಾಗಿ ಬಿಜೆಪಿ ಟೀಕೆಗೆ ಮಾತ್ರ ಸೀಮಿತರಾಗುವುದಿಲ್ಲ. ನಿರುದ್ಯೋಗಿ ಯುವಕರಿಗೆ ಸಾಧ್ಯವಾದಷ್ಟು ಉದ್ಯೋಗ ಕಲ್ಪಿಸಲು ಕಾರ್ಯಕ್ರಮ ರೂಪಿಸುವುದಾಗಿ ತಿಳಿಸಿದರು.

ಸರ್ವೇ ಅಂಕಿಅಂಶಗಳನ್ನು ಡೇಟಾ ಸಮೇತವಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ತಿಳಿಸಲಾಗುವುದು ಎಂದು ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷೆ ಭವ್ಯ ಕೆ. ಆರ್. ತಿಳಿಸಿದರು.

ಪತ್ರಿಕಾಗೋಷ್ಟಿಯಲ್ಲಿ ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿಗಳಾದ ನವೀನ್ ಮತ್ತು ನಝೀರ್, ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್ ಇನ್ನ, ಕಾಪು ಬ್ಲಾಕ್ ಯೂತ್ ಕಾಂಗ್ರೆಸ್ ಅಧ್ಯಕ್ಷ ರಮೀಝ್ ಮೊದಲಾದವರಿದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!