Thursday, July 7, 2022
Home Uncategorized ಕಾರ್ಕಳದಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ

ಕಾರ್ಕಳದಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ

ಕಾರ್ಕಳದಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ

(ಸುದ್ದಿಕಿರಣ ವರದಿ)
ಕಾರ್ಕಳ: ತಾಲೂಕಿನ ಪ್ರವಾಸಿ ತಾಣಗಳನ್ನು ಇನ್ನಷ್ಟು ಅಭಿವೃದ್ಧಿಗೊಳಿಸುವ ಉದ್ದೇಶದಿಂದ ಪ್ರವಾಸೋದ್ಯಮಕ್ಕೆ ಅಧಿಕ ಒತ್ತುನೀಡಲಾಗುವುದು ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ಹೇಳಿದರು.

ಸೋಮವಾರ ಇಲ್ಲಿನ ಆನೆಕೆರೆ ಬಸದಿ ಅಭಿವೃದ್ದಿ ಕಾಮಗಾರಿಗೆ ಗುದ್ದಲಿ ಪೂಜೆ ನೇರವೇರಿಸಿ ಮಾತನಾಡಿದರು.

ಕಾರ್ಕಳದ ಜೈನರ ಆನೆಕೆರೆ ಬಸದಿಯನ್ನು ಪ್ರವಾಸೋದ್ಯಮ ದೃಷ್ಟಿಯಿಂದ ಅಭಿವೃದ್ಧಿಪಡಿಸಬೇಕು ಎನ್ನುವ ಹಿನ್ನೆಲೆಯಲ್ಲಿ 2 ಕೋ. ರೂ. ವೆಚ್ಚದ ಕಾಮಗಾರಿ ನಿರ್ಮಾಣ ಹಂತದಲ್ಲಿದ್ದು, ಬಸದಿ ಜೀರ್ಣೋದ್ಧಾರ ಹಾಗೂ ಸಂಗೀತ ಕಾರಂಜಿ ನಿರ್ಮಾಣ, ವೀಕ್ಷಕರ ಗ್ಯಾಲರಿ ನಿರ್ಮಾಣ ಕಾಮಗಾರಿಗೆ ಸರಕಾರದಿಂದ 50 ಲಕ್ಷ ರೂ. ಅನುದಾನದ ಜೊತೆಗೆ ಸೇತುವೆ ತಡೆಗೋಡೆ ನಿರ್ಮಾಣಕ್ಕೆ 1 ಕೋ. ರೂ. ಅನುದಾನ ಬಿಡುಗಡೆಗೊಂಡಿದೆ.

ಸಾಣೂರಿನ ಮಠದಕೆರೆ ಮತ್ತು ರಾಮಸಮುದ್ರ ಅಭಿವೃದ್ಧಿಪಡಿಸಲು ಯೋಜನೆ ಸಿದ್ದವಾಗಿದೆ. ಮುಂದಿನ ದಿನಗಳಲ್ಲಿ ಎರಡೂ ಕೆರೆಗಳ ಸಂಪೂರ್ಣ ಅಭಿವೃದ್ಧಿ ಮಾಡಲಾಗುತ್ತಿದೆ. ಕೋಟಿ ಚೆನ್ನಯ ಥೀಂ ಪಾರ್ಕ್, ಬೈಲೂರಿನಲ್ಲಿ ಪರಶುರಾಮ ಕೇಂದ್ರ ಹೀಗೆ ಎಲ್ಲ ದೃಷ್ಟಿಯಿಂದಲೂ ಕಾರ್ಕಳ ತಾಲೂಕು ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿ ಹೊಂದುತ್ತಿದೆ ಎಂದರು.

ಆನೆಕೆರೆ ಬಳಿಯ ಮಸೀದಿ ಹತ್ತಿರದಿಂದ ರಂಗನಾಥ ಕೆಫೆ ತನಕದ ರಸ್ತೆಯನ್ನು ಚತುಷ್ಪಥ ರಸ್ತೆಯಾಗಿ ಅಭಿವೃದ್ಧಿಪಡಿಸಬೇಕಿದ್ದು, ರಸ್ತೆ ಹಾದು ಹೋಗುವ ಪ್ರದೇಶಗಳ ಎರಡು ಖಾಸಗಿ ಭೂಮಾಲಕರ ಜತೆ ಮಾತುಕತೆ ನಡೆಸಲಾಗಿದ್ದು, ಎರಡೂ ಮನೆಗಳ ಸ್ಥಳಾಂತರ ಪ್ರಕ್ರಿಯೆ ನಡೆಯುತ್ತಿದೆ. ನಂತರ ಆನೆಕೆರೆಗೆ ತಡೆಗೋಡೆ ಕಟ್ಟಿ ಹೂಳೆತ್ತಿ ಶಾಶ್ವತವಾಗಿಸಲಾಗುವುದು ಎಂದರು.

ಹೊರ ಜಿಲ್ಲೆ ಹಾಗೂ ಹೊರ ತಾಲೂಕಿನಿಂದ ಆಗಮಿಸುವ ಪ್ರವಾಸಿಗರಿಗೆ ವೀಕ್ಷಣೆಗೆ ಅನುಕೂಲವಾಗುವಂತೆ ಪ್ರವಾಸಿ ತಾಣಗಳ ಕಾಮಗಾರಿಗಳನ್ನು ಅದಷ್ಟೂ ಬೇಗ ಪೂರ್ಣಗೊಳಿಸಬೇಕು. ಪ್ರವಾಸೋದ್ಯಮಕ್ಕೆ ಬೇಕಾಗುವ ಎಲ್ಲಾ ವ್ಯವಸ್ಥೆಗಳನ್ನೊಳಗೊಂಡ ಕಾರ್ಕಳ ನಗರ ಇನ್ನೂ ಹೆಚ್ಚಿನ ಅಭಿವೃದ್ಧಿಯಾಗಬೇಕು ಎಂದರು.

ಕಾರ್ಕಳ ಜೈನ ಮಠದ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.

ಕಾರ್ಯಕ್ರಮದಲ್ಲಿ ಪುರಸಭಾಧ್ಯಕ್ಷೆ ಸುಮಾ ಕೇಶವ್, ಮುಖ್ಯಾಧಿಕಾರಿ ರೂಪಾ ಡಿ. ಶೆಟ್ಟಿ, ಕೆ.ಆರ್.ಐ.ಡಿ.ಎಲ್ ಅಧಿಕಾರಿ ಪ್ರಭಾಕರ್, ಹಿರಿಯ ವಕೀಲ ಎಂ. ಕೆ. ವಿಜಯಕುಮಾರ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮಹಾವೀರ ಹೆಗ್ಡೆ ಇದ್ದರು.

ಗುಣಪಾಲ ಕಡಂಬ ನಿರೂಪಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!