ಸುದ್ದಿಕಿರಣ ವರದಿ
ಸೋಮವಾರ, ಮೇ 9
ಸುರಂಗ ವೀಕ್ಷಣೆಗೆ ಸಂಶೋಧಕರ ದೌಡು
ಮಣಿಪಾಲ: ಇಲ್ಲಿಗೆ ಸಮೀಪದ ಕೆಳಪರ್ಕಳ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಹಿಂಬದಿಯ ಗುಡ್ಡ ಪ್ರದೇಶದಲ್ಲಿ ಸುರಂಗದಂತೆ ಕಂಡುಬಂದಿರುವ ಪ್ರದೇಶದ ವೀಕ್ಷಣೆಗಾಗಿ ಶಿರ್ವ ಮೂಲ್ಕಿ ಸುಂದರರಾಮ್ ಶೆಟ್ಟಿ ಕಾಲೇಜಿನ ಪ್ರಾಚ್ಯವಸ್ತು ಪುರಾತತ್ವ ಸಂಶೋಧಕ ಪ್ರೊ. ಟಿ. ಮುರುಗೇಶಿ ಸೋಮವಾರ ಸ್ಥಳಕ್ಕೆ ಭೇಟಿ ನೀಡಿದರು.
ಸಂಶೋಧನಾರ್ಥಿಯನ್ನು ಸುರಂಗದೊಳಗೆ ಕಳಿಸಿ ಪರಿಶೀಲಿಸಿದರು. ಮಣ್ಣು ಕುಸಿತದಿಂದಾಗಿ ಒಳಗಿನ ಭೂಭಾಗಕ್ಕೆ ಹೋಗಲಾಗಲಿಲ್ಲ.
ಸುರಂಗದೊಳಗೆ ಹೊಕ್ಕಿ ವೀಕ್ಷಣೆ ಮಾಡಿದಾಗ ಒಳಗಡೆ ಮಣ್ಣು ಜರಿದಿರುವುದು ಕಂಡುಬಂದಿದ್ದು, ಮಣ್ಣನ್ನು ಮೇಲಕ್ಕೆ ಎತ್ತುವ ಎಲ್ಲ ಪ್ರಕ್ರಿಯೆಗಳು ನಡೆಯಬೇಕಾಗಿದೆ. ಆ ಬಳಿಕವೇ ಸುರಂಗದ ಬಗ್ಗೆ ಇನ್ನಷ್ಟು ಮಾಹಿತಿ ಪಡೆಯಬಹುದು ಎಂದು ಪ್ರೊ. ಮುರುಗೇಶಿ ತಿಳಿಸಿದ್ದಾರೆ.
ಸಂಶೋಧನಾರ್ಥಿ ವಿದ್ಯಾರ್ಥಿ ಭಟ್, ಸ್ಥಳೀಯರಾದ ತಿಮ್ಮಪ್ಪ ಶೆಟ್ಟಿ ಕುಕ್ಕುದಕಟ್ಟೆ, ಗಣೇಶ್ ರಾಜ್ ಸರಳೇಬೆಟ್ಟು, ವಿನೋದ್ ಭಟ್, ಮಹೇಶ್ ಕುಲಾಲ್ ಮನೆಯವರು ಇದ್ದರು.