Sunday, July 3, 2022
Home Uncategorized ಗ್ರಾಹಕರ ಹಕ್ಕುಗಳ ಬಗ್ಗೆ ಜಾಗೃತಿ ಅಗತ್ಯ

ಗ್ರಾಹಕರ ಹಕ್ಕುಗಳ ಬಗ್ಗೆ ಜಾಗೃತಿ ಅಗತ್ಯ

ಸುದ್ದಿಕಿರಣ ವರದಿ
ಭಾನುವಾರ, ಜೂನ್ 12

ಗ್ರಾಹಕರ ಹಕ್ಕುಗಳ ಬಗ್ಗೆ ಜಾಗೃತಿ ಅಗತ್ಯ
ಉಡುಪಿ: ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಮತ್ತು ಗ್ರಾಹಕರ ಹಕ್ಕುಗಳ ಬಗ್ಗೆ ಜಾಗೃತಿ ಅಗತ್ಯ. ಈ ನಿಟ್ಟಿನಲ್ಲಿ ಗ್ರಾಹಕರಿಗೆ ಅವರ ಹಕ್ಕುಗಳ ಬಗ್ಗೆ ತಿಳುವಳಿಕೆ ನೀಡುವುದು ಉತ್ತಮ ಕಾರ್ಯ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಶಾಂತವೀರ ಶಿವಪ್ಪ ಹೇಳಿದರು.

ಗ್ರಾಹಕರು ಮತ್ತು ನಾಗರಿಕರಲ್ಲಿ ತಮ್ಮ ಹಕ್ಕುಗಳ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ವಕೀಲರು ಹಾಗೂ ಸಾಮಾಜಿಕ ಕಾರ್ಯಕರ್ತರು ಆರಂಭಿಸಿರುವ ಯು ಆ್ಯಕ್ಟ್ (ಉಡುಪಿ- ಅಡ್ವೊಕೆಸಿ ಆಫ್ ಕನ್ ಸ್ಯೂಮರ್ಸ್ ಆ್ಯಂಡ್ ಸಿಟಿಜನ್ಸ್) ವೇದಿಕೆಯನ್ನು ಭಾನುವಾರ ನಗರದ ಆಶಾಚಂದ್ರ ಟ್ರೇಡ್ ಸೆಂಟರ್ ನ ಉನ್ನತಿ ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು.

ಅಭ್ಯಾಗತರಾಗಿದ್ದ ಉಡುಪಿ ವಕೀಲರ ಸಂಘದ ಅಧ್ಯಕ್ಷ ಬಿ. ನಾಗರಾಜ್, ಪ್ರಸಕ್ತ ದಿನಗಳಲ್ಲಿ ಜನಸೇವೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ. ಅದಕ್ಕೆ ನ್ಯಾಯಾಲಯವೂ ಹೊರತಲ್ಲ. ಕಾನೂನಿನ ಬಗ್ಗೆ ಮನೆ ಮನೆಗಳಿಗೆ ತೆರಳಿ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಅಂಥ ಕಾರ್ಯಗಳಲ್ಲಿ ವಕೀಲರು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಕೊಳ್ಳಬೇಕು. ವಿದ್ಯಾರ್ಥಿಗಳಿಗೆ ಸೂಕ್ತ ಮಾಹಿತಿ ನೀಡಿದಲ್ಲಿ ಉತ್ತಮ ಉದ್ಯೋಗ ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಸಂಸ್ಥೆಯ ವೆಬ್ ಸೈಟ್ ನ್ನು ನ್ಯಾಯಾಧೀಶರು ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಬಿ. ಸೋಮನಾಥ ಹೆಗ್ಡೆ, ಹಿರಿಯ ವಕೀಲ ಸಿ. ವಿಜಯ್ ಹೆಗ್ಡೆ, ಕಾರ್ಕಳ ವಕೀಲರ ಸಂಘದ ಅಧ್ಯಕ್ಷ ಸುನಿಲ್ ಕುಮಾರ್ ಶೆಟ್ಟಿ, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನಿಯೋಜಿತ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಅಭ್ಯಾಗತರಾಗಿದ್ದರು.

ವಕೀಲ ಹಾಗೂ ಯು ಆ್ಯಕ್ಟ್ ಅಧ್ಯಕ್ಷ ಪ್ರೇಮ್ ಪ್ರಸಾದ್ ಶೆಟ್ಟಿ ಪ್ರಸ್ತಾವಿಕವಾಗಿ ಮಾತನಾಡಿದರು. ವಿಜಯ್ ಡಿ’ಸೋಜ ಸ್ವಾಗತಿಸಿದರು. ಮಾಧವ ಕಾಮತ್ ವಂದಿಸಿದರು. ರಯಾನ್ ಫೆರ್ನಾಂಡಿಸ್ ನಿರೂಪಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!