ಉಡುಪಿ: ತನ್ನ ವಾಸ್ತವ್ಯದ ಮನೆ ನಿರ್ಮಾಣ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಿತ್ತರಿಸುತ್ತಿರುವ ಆಪಾದನೆ ಕುರಿತು ಸಮಗ್ರ ತನಿಖೆ ನಡೆಸುವಂತೆ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.
ದೂರಿನ ವಿವರ ಇಂತಿದೆ
ಕರ್ನಾಟಕ ರಾಜ್ಯದಲ್ಲಿ ನಾನು ಮೇಲ್ಮನೆ ಶಾಸಕನಾಗಿ 3 ಬಾರಿ ಆಯ್ಕೆಯಾಗಿದ್ದು, 2 ಬಾರಿ ಸಂಪುಟ ದರ್ಜೆಯ ಮಂತ್ರಿಯಾಗಿ 1 ಬಾರಿ ವಿರೋಧ ಪಕ್ಷದ ನಾಯಕನಾಗಿರುತ್ತೇನೆ. ಶಾಸಕನಾದ ಹಿನ್ನೆಲೆಯಲ್ಲಿ ಪ್ರತೀ ವರ್ಷ ಲೋಕಾಯುಕ್ತರಿಗೆ ಆಸ್ತಿಪಾಸ್ತಿ ಮತ್ತು ಉತ್ತರದಾಯಿತ್ವ ವಿವರಗಳನ್ನೊಳಗೊಂಡ ನಿಯಮ 7ರಡಿ ಆಸ್ತಿಪಾಸ್ತಿಗಳ ವಿವರ ಪಟ್ಟಿಯನ್ನು ಲೋಕಾಯುಕ್ತ ಸಂಸ್ಥೆಗೆ ಸಲ್ಲಿಸಿದ್ದೇನೆ.
ಆದರೂ ಕಳೆದ 3 ವರ್ಷದಿಂದ ನಿರ್ಮಾಣ ಹಂತದಲ್ಲಿರುವ ನನ್ನ ವಾಸ್ತವ್ಯದ ಮನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ನಡೆಯುತ್ತಿರುವುದು ಸಹಜವಾಗಿಯೇ ನನಗೆ ನೋವುಂಟುಮಾಡಿದೆ.
ಬ್ರಹ್ಮಾವರ ತಾಲೂಕಿನ ಗಿಳಿಯಾರು ಗ್ರಾಮದ ಸರ್ವೇ ನಂ. 202/ 2ಡಿ 1ಸಿ 4ರ 13 ಸೆಂಟ್ಸ್ ಜಾಗ (5 ಗುಂಟೆ) ನನ್ನ ಸ್ವಂತ ಆದಾಯದ ಖರೀದಿಯಾಗಿದ್ದು, ಆ ಜಾಗದಲ್ಲಿ ಗ್ರಾಮ ಪಂಚಾಯತ್ ಪರವಾನಿಗೆ ಪಡೆದು ನಾನು ವಾಸ್ತವ್ಯಕ್ಕಾಗಿ ಮನೆ ಕಟ್ಟುತ್ತಿದ್ದೇನೆ.
ನನ್ನ ಈಗಿನ ವಾಸ್ತವ್ಯದ ಮನೆ ತಮಗೆ ಈಗಾಗಲೇ ಮಾಹಿತಿ ಒದಗಿಸಿದಂತೆ ಸರ್ವೋಚ್ಛ ನ್ಯಾಯಾಲಯದಲ್ಲಿ ಇತ್ಯರ್ಥಕ್ಕೆ ಬಾಕಿ ಉಳಿದಿದೆ.
ಈ ಹಿನ್ನೆಲೆಯಲ್ಲಿ ನನ್ನ 3 ಮಕ್ಕಳ ಪೈಕಿ ನನ್ನ ಮಗ ಶಶಿಧರ್ ಎಂ.ಬಿ.ಎ. ಮುಗಿಸಿದ್ದು, ಸ್ವಂತ ಉದ್ದಿಮೆ ನಡೆಸುತ್ತಿದ್ದಾನೆ. ನನ್ನ ಇಬ್ಬರು ಹೆಣ್ಣುಮಕ್ಕಳು ಶಿಕ್ಷಣ ಮುಗಿಸುವ ಹಂತದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ನನ್ನ ಕುಟುಂಬಕ್ಕಾಗಿ ಮೇಲೆ ತಿಳಿಸಿದ ಜಾಗದಲ್ಲಿ ವಾಸ್ತವ್ಯದ ಮನೆ ನಿರ್ಮಿಸುತ್ತಿದ್ದು, ಸುಮಾರು 60 ಲಕ್ಷ ರೂ. ವೆಚ್ಚದ್ದಾಗಿದೆ.
ಆ ಪೈಕಿ ರಾಜ್ಯ ಅಪೆಕ್ಸ್ ಬ್ಯಾಂಕಿನಲ್ಲಿ ನಾನು 2 ವರ್ಷದ ಹಿಂದೆಯೇ 35 ಲಕ್ಷ ರೂ. ಸಾಲ ಪಡೆದಿದ್ದು, ತೀರಾ ಈಚಿನ ದಿನದ ವರೆಗೂ ನನ್ನ ಸಂಭಾವನೆ ಮತ್ತು ಗೌರವಧನ ಮೂಲಕ ಸಾಲ ಚುಕ್ತಾ ಮಾಡಿದ್ದೇನೆ. ಆ ಹಣವನ್ನೇ ಮನೆ ಕಟ್ಟಲು ಬಳಸುತ್ತಿದ್ದೇನೆ. ಕಡಿಮೆಯಾದ ಮೊತ್ತಕ್ಕೆ ಎಸ್.ಬಿ.ಐ. ಬ್ರಹ್ಮಾವರ ವಾರಂಬಳ್ಳಿ ಶಾಖೆಯಲ್ಲಿ 40 ಲಕ್ಷ ರೂ. ಸಾಲದ ಮಂಜೂರಾತಿಗಾಗಿ ದಸ್ತಾವೇಜು ಸಲ್ಲಿಸಿದ್ದು, ಮಂಜೂರಾತಿ ಹಂತದಲ್ಲಿದೆ. ಪ್ರಥಮ ಕಂತು ಮಂಜೂರಾಗುವ ಹಂತದಲ್ಲಿದೆ. ಅದನ್ನು ನನ್ನ ಆದಾಯ ಮತ್ತು ಮಗನ ಆದಾಯ ಸೇರಿದಂತೆ ನನ್ನ ವಿವೇಚನೆ ಪ್ರಕಾರ ನನ್ನ ಒಟ್ಟು ಆದಾಯ ವ್ಯಾಪ್ತಿಯಲ್ಲಿ ಮತ್ತು ಕುಟುಂಬದ ನಿರ್ವಹಣೆಗಾಗಿ ಈ ವಾಸ್ತವ್ಯದ ಮನೆಯನ್ನು ಕಟ್ಟಿಸಿದ್ದೇನೆ.
ಪ್ರಚಲಿತ ದಿನದಲ್ಲಿ ರಾಜಕಾರಣದಲ್ಲಿ ಸಚಿವ ಸಂಪುಟ ವಿಸ್ತರಣೆಯೂ ಸೇರಿದಂತೆ ಮಹತ್ತರ ವಿದ್ಯಮಾನಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಒಂದಷ್ಟು ಮಂದಿ ನನ್ನ ಸಾರ್ವಜನಿಕ ಜೀವನವನ್ನು ವಿರೋಧಿಸುವವರು 13 ಸೆಂಟ್ಸ್ ನಲ್ಲಿ ನಿರ್ಮಾಣವಾಗುತ್ತಿರುವ ಮನೆ 6 ಕೋ ಮೌಲ್ಯದ್ದು ಮತ್ತು ಸರಳ ಸಜ್ಜನರಾದವರು 6 ಕೋಟಿ ವೆಚ್ಚದ ಗುಡಿಸಲು ಕಟ್ಟಿಸುತ್ತಿದ್ದಾರೆ ಎಂದು ವ್ಯಂಗವಾಡಿದ್ದಾರೆ.
ಸಾರ್ವಜನಿಕ ಜೀವನದಲ್ಲಿ ಪಾರದರ್ಶಕತೆಗೆ ಮಹತ್ತರ ಸ್ಥಾನ ಕೊಡುತ್ತಾ ಮತ್ತು ನೀತಿ ನಿಯಮ ಗೌರವಿಸಿದವನು ನಾನು. ಆದರೂ ಈ ಅಪಪ್ರಚಾರಕ್ಕೆ ಒಂದು ಅಂತಿಮ ವಿದಾಯ ಹೇಳಲು ತಮಗೆ ಈ ಮನವಿ ಸಲ್ಲಿಸುತ್ತಿದ್ದೇನೆ.
ತಾವು ನನ್ನ ಮನವಿಯನ್ನು ಕೈಗೆತ್ತಿಕೊಂಡು ನನ್ನ ಶಾಸಕತ್ವದ ಆರಂಭದಿಂದ 3 ಬಾರಿ ಕ್ಯಾಬಿನೆಟ್ ದರ್ಜೆ ಒಳಗೊಂಡಂತೆ ನೀಡುವ ಗೌರವಧನ, ಸಂಭಾವನೆ ಇನ್ನಿತರ ಸರ್ಕಾರದ ಆರ್ಥಿಕ ನೆರವು ಮತ್ತು ಸವಲತ್ತು ಸೇರಿದಂತೆ ನನ್ನ ಮಗನ ಉದ್ದಿಮೆ ಆದಾಯವನ್ನೂ ಪರಿಗಣಿಸಿ ನನ್ನಲ್ಲಿರುವ ಒಟ್ಟು ಆದಾಯ ಮತ್ತು ನಾನು ನಿರ್ಮಿಸುತ್ತಿರುವ ವಾಸ್ತವ್ಯದ ಮನೆಯನ್ನು ಪರಿಶೀಲಿಸಿ ನನ್ನ ಆದಾಯಕ್ಕಿಂತ ಮನೆ ನಿರ್ಮಾಣದ ವೆಚ್ಚ ಹೆಚ್ಚಾಗಿದ್ದಲ್ಲಿ ನನ್ನ ಮೇಲೆ ಕ್ರಮ ಕೈಗೊಳ್ಳುವ ಬಗ್ಗೆಯೂ ಸೇರಿದಂತೆ ಸೂಕ್ತ ನಿರ್ಧಾರ ಕೈಗೊಳ್ಳಬೇಕೆಂದು ಮತ್ತು ನನ್ನ ಆದಾಯ ವ್ಯಾಪ್ತಿಯಲ್ಲಿಯೇ ನನ್ನ ವಾಸ್ತವ್ಯದ ಮನೆ ನಿರ್ಮಾಣವಾಗಿದ್ದರೆ ನನ್ನ ಮೇಲೆ ವೃಥಾ ಆರೋಪ ಮಾಡಿ, ಸಾರ್ವಜನಿಕ ಜೀವನದಲ್ಲಿರುವ ನನಗೆ ಇರಿಸುಮುರಿಸು ತರುತ್ತಿರುವ ವ್ಯಕ್ತಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ವಿನಂತಿಸುತ್ತೇನೆ.
ನನಗಿರುವ ಒಟ್ಟು ಅಂಕಿಅಂಶಗಳ ಪ್ರಕಾರ ಯಾವ ಕಾರಣಕ್ಕೂ 1 ರೂಪಾಯಿ ಕೂಡಾ ನನ್ನ ಆದಾಯಕ್ಕಿಂತ ಹೆಚ್ಚು ಖರ್ಚಾಗಿಲ್ಲ ಎಂಬುದನ್ನು ತಮ್ಮ ಅವಗಾಹನೆಗೆ ಆತೀ ಗೌರವದಿಂದ ಸಲ್ಲಿಸಿರುತ್ತೇನೆ. ಈ ಪತ್ರದೊಂದಿಗೆ ತಮ್ಮ ಕಛೇರಿಗೆ ಸಲ್ಲಿಸಿರುವ 2020- 21ನೇ ಸಾಲಿಗೆ ಸಂಬಂಧಪಟ್ಟಂತೆ ಆಸ್ತಿ ಮತ್ತು ಉತ್ತರದಾಯಿತ್ವ ವಿವರಗಳನ್ನೊಳಗೊಂಡ ನಿಯಮ 7ರಡಿ ತಮಗೆ ಸಲ್ಲಿಸಿರುವ ಮಾಹಿತಿಯನ್ನೂ ಲಗ್ತೀಕರಿಸಿರುತ್ತೇನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಕೋಟ ಶ್ರೀನಿವಾಸ ಪೂಜಾರಿ ಕೋಟದಲ್ಲಿ 6 ಕೋ. ರೂ. ಮೌಲ್ಯದ ಮನೆ ನಿರ್ಮಿಸುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿದೆ