Saturday, August 13, 2022
Home Uncategorized ಪೇಜಾವರ ಶ್ರೀಗಳನ್ನು ಟೀಕಿಸುವಂಥ ಮಾತು ಹಂಸಲೇಖ ಬಾಯಿಯಿಂದ ಬರಬಾರದಾಗಿತ್ತು

ಪೇಜಾವರ ಶ್ರೀಗಳನ್ನು ಟೀಕಿಸುವಂಥ ಮಾತು ಹಂಸಲೇಖ ಬಾಯಿಯಿಂದ ಬರಬಾರದಾಗಿತ್ತು

ಪೇಜಾವರ ಶ್ರೀಗಳನ್ನು ಟೀಕಿಸುವಂಥ ಮಾತು ಹಂಸಲೇಖ ಬಾಯಿಯಿಂದ ಬರಬಾರದಾಗಿತ್ತು

ಉಡುಪಿ, ನ. 15 (ಸುದ್ದಿಕಿರಣ ವರದಿ): ಕೀರ್ತಿಶೇಷ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರನ್ನು ಟೀಕಿಸುವಂಥ ಮಾತು ಹಂಸಲೇಖ ಬಾಯಿಯಿಂದ ಬರಬಾರದಾಗಿತ್ತು.

ಸಮಾಜದ ಎಲ್ಲರ ಉದ್ಧಾರವನ್ನು ಶ್ರೀ ವಿಶ್ವೇಶತೀರ್ಥರು ಬಯಸಿದ್ದರು. ನಮ್ಮ ಗುರುಗಳು ಜನರ ಹೃದಯದಲ್ಲಿ ಯಾವ ಕೃಷ್ಣನನ್ನು ಕಂಡಿದ್ದರೋ ಆ ಕೃಷ್ಣನೇ ಅದಕ್ಕೆ ಬೇಕಾದ ಪ್ರತೀಕಾರ ಮಾಡುತ್ತಾನೆ ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ನೊಂದು ನುಡಿದಿದ್ದಾರೆ.

ಅಗ್ಗದ ಪ್ರಚಾರ ಬೇಕಿರಲಿಲ್ಲ
ಮೈಸೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪೇಜಾವರ ಶ್ರೀಗಳ ಕುರಿತು ಹಂಸಲೇಖ ಆಡಿದ ಮಾತಿಗೆ ಸೋಮವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶ್ರೀ ವಿಶ್ವಪ್ರಸನ್ನತೀರ್ಥರು, ನಮ್ಮ ಗುರುಗಳಿಗೆ ಪದ್ಮವಿಭೂಷಣ ಪ್ರಶಸ್ತಿ ಬಂದಿರುವ ಕಾರಣದಿಂದಾಗಿ ಹಂಸಲೇಖ ನನ್ನ ಗುರುಗಳನ್ನು ಟೀಕಿಸಿರಬೇಕು.

ಸಮಾಜ ಅವರನ್ನು ಎತ್ತರದಲ್ಲಿರಿಸಿ ಗೌರವಿಸುತ್ತದೆ. ಪ್ರಚಾರಕ್ಕೋಸ್ಕರ ಸಾಕಷ್ಟು ಮಂದಿ ಹೀಗೆ ಮಾಡುತ್ತಾರೆ. ಹಂಸಲೇಖ ಅವರಿಗೆ ಇಂಥ ಅಗ್ಗದ ಪ್ರಚಾರ ಬೇಕಾಗಿರಲಿಲ್ಲ.

ಐಕ್ಯ ಸಂದೇಶ ನಮ್ಮ ಆಶಯ
ಶ್ರೀಕೃಷ್ಣನಿಗೆ ಅಗ್ರಪೂಜೆ ನೀಡುವಾಗ ಶಿಶುಪಾಲನೂ ಇದೇ ರೀತಿ ವಿರೋಧಿಸಿದ್ದ. ಆದರೆ, ಶಿಶುಪಾಲನಿಗೆ ಕೃಷ್ಣನೇ ತಕ್ಕ ಶಾಸ್ತಿ ಮಾಡಿದ್ದ. ನನ್ನ ಗುರುಗಳು ಸಮಾಜದ ಎಲ್ಲರ ಹೃದಯದಲ್ಲಿ ಕಷ್ಣನನ್ನು ಕಂಡವರು. ಆದ್ದರಿಂದಲೇ ಅವರು ದಲಿತರ ಕೇರಿಗೂ ಹೋಗುತ್ತಿದ್ದರು. ನೆರೆಹಾವಳಿ ಭೂಕಂಪ ಆದಾಗಲೂ ಭೇಟಿ ನೀಡುತ್ತಿದ್ದರು.
ಸಮಾಜದ ಎಲ್ಲರ ಉದ್ಧಾರವನ್ನು ಶ್ರೀ ವಿಶ್ವೇಶತೀರ್ಥರು ಬಯಸಿದ್ದರು ಎಂದರು.

ನಮ್ಮ ಉದ್ದೇಶ ಪ್ರಾಮಾಣಿಕವಾಗಿದೆ. ಯಾರೋ ಏನೋ ಹೇಳಿದರು ಎಂದ ಮಾತ್ರಕ್ಕೆ ನಮ್ಮ ಕೆಲಸ ನಿಲ್ಲಿಸುವುದಿಲ್ಲ. ಯಾರ ಹೊಗಳಿಕೆಗೂ ನಾವು ಈ ಕೆಲಸ ಮಾಡಿದ್ದಲ್ಲ. ದಲಿತರ ಜೊತೆ ನಾವಿದ್ದೇವೆ, ದಲಿತರು ನಮ್ಮಿಂದ ಹೊರತಲ್ಲ ಎಂಬ ಐಕ್ಯ ಸಂದೇಶ ನೀಡುವ ಸಲುವಾಗಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ.

ಗುರುಗಳ ಅಭಿಮಾನದಿಂದ ಯಾರಾದರೂ ಪ್ರತಿಭಟಿಸಿದರೆ ಅದು ಅವರವರ ವೈಯಕ್ತಿಕ ವಿಚಾರ. ಈ ಬಗ್ಗೆ ನಾವಂತೂ ಯಾವುದೇ ಪ್ರತಿಭಟನೆ ನಡೆಸುವುದಿಲ್ಲ ಎಂದರು.

ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಂಸಲೇಖ ಪೇಜಾವರ ಸ್ವಾಮಿಗಳು ದಲಿತರ ಮನೆಗೆ ವಾಸ್ತವ್ಯಕ್ಕೆ ಹೋಗಿದ್ದಾರೆ ಅಂತ ಸ್ಟೇಟ್ ಮೆಂಟ್ ಬಂದಿದೆ. ಪೇಜಾವರ ಸ್ವಾಮಿಗಳು ದಲಿತರ ಮನೆಗೆ ಹೋಗಿ ಅಲ್ಲಿ ಕುಳಿತುಕೊಳ್ಳಬಹುದಷ್ಟೇ, ಅವರು ಕೋಳಿ ಕೊಟ್ಟರೆ ತಿನ್ನೋಕೆ ಆಗುತ್ತದೆಯೇ..? ಕೋಳಿ ಬೇಡ, ಕುರಿ ರಕ್ತದ ಫ್ರೈ ಮಾಡಿಕೊಟ್ಟರೆ ತಿಂತಾರಾ..? ಲಿವರ್ ಫ್ರೈ ತಿಂತಾರಾ, ಆಗತ್ತಾ..? ಅಂದರೆ, ದಲಿತರ ಮನೆಗೆ ಬಲಿತರು ಹೋಗೋದು ಏನ್ ದೊಡ್ಡ ವಿಷ್ಯಾ ಅಂತ ನಂಗ್ ಅನ್ನಿಸ್ತು. ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಅಂತ ಶುರು ಮಾಡಿದ್ರು. ಈಗ ಎಲ್ಲರೂ ಗ್ರಾಮ ವಾಸ್ತವ್ಯ ಶುರು ಮಾಡಿದ್ದಾರೆ..’ ಎಂದು ಹೇಳಿದ್ದರು.
`ಬಿಳಿಗಿರಿ ರಂಗಯ್ಯ ಸೋಲಿಗರ ಮನೆಯ ಹೆಣ್ಣಿನೊಂದಿಗೆ ರಮಿಸಿದರೆ, ಅದರಲ್ಲಿ ಏನ್ ದೊಡ್ಡ ವಿಷ್ಯ ಇದೆ? ಅದೇ ಸೋಲಿಗರ ಹೆಣ್ಣು ಮಗಳನ್ನು ಕರೆದುಕೊಂಡು ಹೋಗಿ ತನ್ನ ದೇವಾಲಯದಲ್ಲಿ ಇಟ್ಟು ಗೌರವಿಸಿದ್ದರೆ, ಅದು ಬಿಳಿಗಿರಿ ರಂಗಯ್ಯನ ತಾಕತ್ತು. ಸೂರ್ಯ ಉದಯಿಸುವುದಕ್ಕಿಂತ ಮುಂಚೆ ಸೋಲಿಗರ ಮನೆಗೆ ಬಂದು ಆ ಹೆಣ್ಣು ಮಗಳೊಂದಿಗೆ ಬಿಳಿಗಿರಿ ರಂಗಯ್ಯ ಸಂಸಾರ ನಡೆಸಿ ಬೆಳಕು ಹರಿಯುವುದರೊಳಗೆ ಹೋಗಿ ಕಲ್ಲಾಗುತ್ತಾನಂತೆ! ಅದೇನು ದೊಡ್ಡ ವಿಷಯ, ಅದೊಂದು ನಾಟಕ, ಬೂಟಾಟಿಕೆ. ದಲಿತರ ಮನೆಗೆ ಬಲಿತರು ಹೋಗುವುದು ಅದೇನು ದೊಡ್ಡ ವಿಷಯವೇ..? ದಲಿತರನ್ನು ಬಲಿತರು ತಮ್ಮ ಮನೆಗಳಿಗೆ ಕರೆದುಕೊಂಡು ಹೋಗಬೇಕು. ಅವರ ಮನೆಯಲ್ಲಿ ಊಟ ಹಾಕಬೇಕು, ದಲಿತರು ಮುಟ್ಟಿದ ಲೋಟಗಳನ್ನು ನಾವು ತೊಳೆಯುತ್ತೀವಿ ಎಂದು ಬಲಿತರು ಹೇಳಬೇಕು ಎಂದು ಹಂಸಲೇಖ ಹೇಳಿದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!