Sunday, July 3, 2022
Home Uncategorized ಸಿದ್ಧರಾಮಯ್ಯ ದಲಿತರಿಗೆ ಏನು ಮಾಡಿದ್ದಾರೆ?: ನಳಿನ್ ಪ್ರಶ್ನೆ

ಸಿದ್ಧರಾಮಯ್ಯ ದಲಿತರಿಗೆ ಏನು ಮಾಡಿದ್ದಾರೆ?: ನಳಿನ್ ಪ್ರಶ್ನೆ

ಉಡುಪಿ: ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ದಲಿತರಿಗೆ ಏನು ಮಾಡಿದ್ದಾರೆ ಎನ್ನುವುದನ್ನು ಮೊದಲು ಹೇಳಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸವಾಲೆಸೆದರು.

ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಿಂದೆ ಅಹಿಂದ ಹೋರಾಟ ಮಾಡಿದ್ದ ಸಿದ್ಧರಾಮಯ್ಯ, ಮುಖ್ಯಮಂತ್ರಿಯಾದ ಬಳಿಕ ಅಹಿಂದವನ್ನೇ ಮರೆತರು. ಹಿಂದುಳಿದ ವರ್ಗಗಳಿಗೂ ಏನೂ ಮಾಡಿಲ್ಲ ಎಂದರು.

ಕಾಂಗ್ರೆಸಿನಲ್ಲಿ ರಾತ್ರಿ ಹಗಲು ಕೆಲಸ ಮಾಡಿದ ಡಾ. ಜಿ. ಪರಮೇಶ್ವರ್ ಅವರನ್ನೇ ಮೂಲೆಗುಂಪು ಮಾಡಿದರು. ಅಲ್ಲದೆ, ಪರಮೇಶ್ವರ್ ಮತ್ತು ಮಲ್ಲಿಕಾರ್ಜುನ ಖರ್ಗೆಯವರನ್ನು ಸಿದ್ದರಾಮಯ್ಯ ಸೋಲಿಸಿದ ಇತಿಹಾಸವೇ ಇದ್ದು, ಈಗ ಬಿಜೆಪಿಗೆ ತಾಕತ್ತು ಇದ್ದರೆ ದಲಿತ ಸಿಎಂ ಮಾಡಿ ಎಂದವರು ಹೇಳುವುದು ಎಷ್ಟು ಸರಿ ಎಂದು ನಳಿನ್ ಪ್ರಶ್ನಿಸಿದರು.

ವಾಜಪೇಯಿ ನೇತೃತ್ವದ ಬಿಜೆಪಿ ಸರ್ಕಾರ ಮುಸ್ಲಿಂ ಬಂಧುವನ್ನು ದೇಶದ ರಾಷ್ಟ್ರಪತಿ ಮಾಡಿದೆ. ನರೇಂದ್ರ ಮೋದಿ ದಲಿತ ರಾಷ್ಟ್ರಪತಿಯನ್ನು ದೇಶಕ್ಕೆ ನೀಡಿದ್ದಾರೆ. ಯಡಿಯೂರಪ್ಪ ಅವರು ಗೋವಿಂದ ಕಾರಜೋಳ ಅವರನ್ನು ಉಪಮುಖ್ಯಮಂತ್ರಿ ಮಾಡಿದ್ದಾರೆ. ಕೇಂದ್ರದಲ್ಲಿ ನಾರಾಯಣಸ್ವಾಮಿ ಸಚಿವರಾಗಿದ್ದಾರೆ ಕೇಂದ್ರ ಮಂತ್ರಿಮಂಡಲದಲ್ಲಿ ಶೇ. 30ರಷ್ಟು ಎಸ್.ಸಿ ಮತ್ತು ಎಸ್.ಟಿ ಮಂತ್ರಿಗಳಿದ್ದಾರೆ. ಆದರೆ, ಕಾಂಗ್ರೆಸ್ ದಲಿತರಿಗೆ ಏನು ಮಾಡಿದೆ ಎಂದು ನಳಿನ್ ಕುಮಾರ್ ಪ್ರಶ್ನಿಸಿದರು.

ರಾಜ್ಯ ಪ್ರವಾಹ ಪರಿಸ್ಥಿತಿ, ಸಿಎಂ ಬದಲಾವಣೆ ವಿಚಾರ ಬಗ್ಗೆ ಮಾತನಾಡಿದ ನಳಿನ್, ಎಲ್ಲಾ ಸಚಿವರು ತಮ್ಮ ಕ್ಷೇತ್ರದಲ್ಲಿ ಇರುವಂತೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ. ಎಲ್ಲರೂ ಆಯಾಯ ಜಿಲ್ಲೆಯಲ್ಲಿದ್ದು ನೆರೆ ಪರಿಹಾರದ ಕೆಲಸ ಮಾಡುತ್ತಿದ್ದಾರೆ. ಸಿಎಂ ಯಡಿಯೂರಪ್ಪ ವೈಮಾನಿಕ ಸಮೀಕ್ಷೆ ನಡೆಸುತ್ತಿದ್ದಾರೆ. ಯಡಿಯೂರಪ್ಪ ರಾಜ್ಯಾದ್ಯಂತ ಪ್ರವಾಸ ಮಾಡಿ ಸಾಂತ್ವನ ಹೇಳುತ್ತಿದ್ದಾರೆ.

ಸಿಎಂ ಬದಲಾವಣೆ ಬಗ್ಗೆ, ಹೈಕಮಾಂಡ್ ಸಂದೇಶ ವಿಚಾರ ಇತ್ಯಾದಿಗಳ ಬಗ್ಗೆ ನನಗೆ ಇಂದಿನ ವರೆಗೆ ಯಾವುದೇ ಮಾಹಿತಿ ಬಂದಿಲ್ಲ. ನಾನು ಬಿಜೆಪಿ ರಾಜ್ಯಾಧ್ಯಕ್ಷ. ಕೇವಲ ಮಾಧ್ಯಮಗಳಿಂದ ಈ ವಿಚಾರ ತಿಳಿದುಕೊಂಡಿದ್ದೇನೆ.
ಸಚಿವೆ ಶಶಿಕಲಾ ಜೊಲ್ಲೆ ಅಂಗನವಾಡಿ ಮೊಟ್ಟೆ ಹಗರಣ ಕುರಿತು ಪ್ರತಿಕ್ರಿಯಿಸಿದ ಅವರು, ಆ ಕುರಿತು ಮಾಹಿತಿ ತರಿಸಿಕೊಳ್ಳುತ್ತೇನೆ. ಪೂರ್ಣ ಮಾಹಿತಿ ಪಡೆದ ಬಳಿಕವೇ ಪ್ರತಿಕ್ರಿಯೆ ನೀಡುತ್ತೇನೆ ಎಂದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!