ಉಡುಪಿ: ಹೊರ ನಾಡಿನಲ್ಲಿ ಎಲ್ಲ ಜಾತಿ, ವರ್ಗದವರನ್ನು ಸೇರಿಸಿಕೊಂಡು ಕನ್ನಡಾಭಿವೃದ್ಧಿಗಾಗಿ ಸೇವೆ ಸಲ್ಲಿಸಿರುವುದನ್ನು ಪರಿಗಣಿಸಿ ದೆಹಲಿ ಕನ್ನಡಿಗ ಮತ್ತು ತುಳುವೆರ್ ಪತ್ರಿಕೆಗಳ ಸಂಪಾದಕ ಬಾ. ಸಾಮಗ ಅವರಿಗೆ ವಿ.ಕೆ.ಎಂ. ಸಂಸ್ಥೆ ಸ್ಥಾಪಿಸಿರುವ ಈ ಸಾಲಿನ ಪ್ರತಿಷ್ಠಿತ ಭಾರತರತ್ನ ಡಾ| ಬಿ. ಆರ್. ಅಂಬೇಡ್ಕರ್ ಪ್ರಶಸ್ತಿಯನ್ನು ಬೆಂಗಳೂರಿನಲ್ಲಿ ಈಚೆಗೆ ನಡೆದ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಸ್ವೀಕರಿಸಿದ ಸಾಮಗ, ಕರ್ನಾಟಕ ಸಂಸ್ಕೃತಿ ಮತ್ತು ಕನ್ನಡಕ್ಕೆ ಇನ್ನೂ ಹೆಚ್ಚಿನ ಗೌರವ, ಪ್ರಚಾರ ದೊರಕಿಸಿ ವಿಶ್ವ ಮಟ್ಟದಲ್ಲಿ ಅಗ್ರಸ್ಥಾನ ಗಳಿಸಲು ಹೊರನಾಡಿನಲ್ಲಿ ವ್ಯವಸ್ಥಿತವಾಗಿ ಕನ್ನಡ ಕಾರ್ಯಕ್ರಮ ನಡೆಸುವುದು ಅವಶ್ಯಕ ಎಂದರು.
ಕನ್ನಡ ಕೃತಿಗಳನ್ನು ಬೇರೆ ಭಾಷೆಗಳಿಗೆ ಅನುವಾದಿಸಿ ಪ್ರಕಟಿಸುವುದು ಆದ್ಯ ಕರ್ತವ್ಯವಾಗಬೇಕು. ಸಮಸ್ತ ಕನ್ನಡಿಗರ ಬೆಂಬಲದಿಂದ ತನಗೆ ದಿಲ್ಲಿಯಲ್ಲಿ 31 ರಾಷ್ಟ್ರೀಯ ಕನ್ನಡ ಸಮ್ಮೇಳನ, ಭಾರತದಾದ್ಯಂತ ಪ್ರಮುಖ ನಗರಗಳಲ್ಲಿ 10 ಅಖಿಲ ಭಾರತ ಕನ್ನಡ ಸಾಹಿತ್ಯ- ಸಂಸ್ಕೃತಿ ಸಮ್ಮೇಳನ ಯಶಸ್ವಿಯಾಗಿ ನಡೆಸುವುದು ಸಾಧ್ಯವಾಯಿತು ಎಂದ ಅವರು, ಕರ್ನಾಟಕ ಸಂಸ್ಕೃತಿಗೆ ಪ್ರಬಲ ಶಕ್ತಿ ಇರುವುದರಿಂದ ಸಂಸ್ಕೃತಿಯ ಅವನತಿ ಅಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಕವಿ ಸಿದ್ದಲಿಂಗಯ್ಯ, ಹೊರನಾಡಿನಲ್ಲಿ ಕನ್ನಡ ಕಟ್ಟಿ ಬೆಳೆಸಿದ ಸಾಮಗ, ಕನ್ನಡ ಕಾರ್ಯಕರ್ತರಿಗೆ ಆದರ್ಶಪ್ರಾಯರಾಗಿದ್ದಾರೆ ಎಂದರು.
ರಂಗಕರ್ಮಿ ಗೋಪಾಲಕೃಷ್ಣ ನಾಯರಿ, ಕರ್ನಾಟಕ ಮಹಿಳಾ ಪಡೆ ರಾಜ್ಯಾಧ್ಯಕ್ಷೆ ಲತಾ ಗೌಡ, ಜಾನಪದ ಗಾಯಕ ಗುರುರಾಜ ಹೊಸಕೋಟೆ, ನಟಿ ಕಾಮಿನಿ ಧರನ್, ಜಯ ಕರ್ನಾಟಕ ಬೆಂಗಳೂರು ನಗರಾಧ್ಯಕ್ಷ ಜಗದೀಶ್ ಗೌಡ, ಸಂಸ್ಥೆ ಕಾರ್ಯಾಧ್ಯಕ್ಷ ಸಿ. ಎಂ. ವೆಂಕಟೇಶ್ ಇದ್ದರು.
ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ನಟ, ನಿರ್ದೇಶಕ ಸಿ. ಎಂ. ತಿಮ್ಮಯ್ಯ ನಿರೂಪಿಸಿದರು.