Thursday, July 7, 2022
Home ಲೋಕಾಭಿರಾಮ ಆಶಾ ಕಾರ್ಯಕರ್ತೆಯರ ಮೌಲ್ಯ ಅನಾವರಣ

ಆಶಾ ಕಾರ್ಯಕರ್ತೆಯರ ಮೌಲ್ಯ ಅನಾವರಣ

(ಸುದ್ದಿಕಿರಣ ವರದಿ)

ಉಡುಪಿ, ನ. 10: ಕೊರೊನಾ ಅವರಿಸುತ್ತಿದ್ದಂತೆ ಮನುಷ್ಯನ ಜೀವನ ಶೈಲಿಯ ಮೇಲೆ ಗಮನಾರ್ಹ ಬದಲಾವಣೆ ತಂದಿದಲ್ಲದೆ, ಅದನ್ನು ತಡೆಗಟ್ಟುವಲ್ಲಿ ಮತ್ತು ಸುರಕ್ಷಾ ಕ್ರಮ ಕೈಗೊಳ್ಳುವಲ್ಲಿ ಸಾಮಾನ್ಯ ಜನರನ್ನು ನಿಕಟವಾಗಿ ಸಂಪರ್ಕಿಸುವ ಆಶಾ ಕಾರ್ಯಕರ್ತೆಯರ ಮೌಲ್ಯ ಜಗತ್ತಿಗೆ ಅನಾವರಣಗೊಂಡಿತು. ಆಶಾ ಕಾರ್ಯಕರ್ತೆಯರಂತೆಯೇ ಅರೋಗ್ಯ ಇಲಾಖೆ ಸಿಬ್ಬಂದಿ ಮತ್ತು ವೈದ್ಯರು ಕೇವಲ ಕರ್ತವ್ಯಪ್ರಜ್ಞೆಯಿಂದ ಕೆಲಸ ಮಾಡುವುದರ ಹೊರತಾಗಿ ಮಾನವೀಯ ಮೌಲ್ಯಗಳ ಬೆಳಕು ಚೆಲ್ಲುವ ಕಾರ್ಯವನ್ನು ಪರಿಣಾಮಕಾರಿಯಾಗಿ ಮಾಡಿದರು, ಸಹೃದಯ ಪ್ರೀತಿ ಹಂಚಿದರು ಎಂದು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಕೆ. ರಾಘವೇಂದ್ರ ಕಿಣಿ ಹೇಳಿದರು.

 

ಇಂದ್ರಾಳಿ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನ, ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಇಂದ್ರಾಳಿ, ಸಗ್ರಿ, ಕಸ್ತೂರಬಾ ನಗರ ವಾರ್ಡ್ ಸಮಿತಿ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಮಣಿಪಾಲ ಮತ್ತು ರೋಟರಿ ಕ್ಲಬ್ ಉಡುಪಿ ರಾಯಲ್ ಆಶ್ರಯದಲ್ಲಿ ಆಯೋಜಿಸಿದ ಉಚಿತ ಅರೋಗ್ಯ ತಪಾಸಣೆ ಶಿಬಿರ, ಕಡ್ಡಾಯ ಕೋವಿಡ್ ಪರೀಕ್ಷೆ, ಯೋಗ ಕಾರ್ಯಾಗಾರ ಮತ್ತು ಮಾಹಿತಿ, ಫಿಟ್ ಇಂಡಿಯಾ ಆರೋಗ್ಯ ರಕ್ಷಣಾ ಅಭಿಯಾನ ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮ ಸಂಯೋಜಕರ ವತಿಯಿಂದ ಶಾಲೆಯನ್ನು ಶುದ್ಧಗೊಳಿಸಲಾಯಿತು.

ಉಡುಪಿ ತಾಲೂಕು ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಅಧಿಕಾರಿ ಆಲ್ವಿನ್ ಅಂದ್ರಾದೆ, ದೈಹಿಕ ಸಕ್ಷಮತೆ ಬಗ್ಗೆ ಕಾರ್ಯಾಗಾರ ನಡೆಸಿದರು. ಯೋಗ ಶಿಕ್ಷಕ ಪ್ರಕಾಶ್ ನಾಯಕ್ ಯೋಗ ಮಾಹಿತಿ ನೀಡಿದರು. ಕೋವಿಡ್ 19 ಸಂದರ್ಭದಲ್ಲಿ ಮನೆ ಮನೆಗೆ ತೆರಳಿ ಕೋವಿಡ್ ಪರೀಕ್ಷಾ ಮಾದರಿ ಸಂಗ್ರಹಿಸುತ್ತಿರುವ ಲ್ಯಾಬ್ ಟೆಕ್ನೀಷಿಯನ್ ಸೌಮ್ಯ ಅವರನ್ನು ಗೌರವಿಸಲಾಯಿತು.

ರಾಯಲ್ ಅಧ್ಯಕ್ಷ ಮಂಜುನಾಥ ಮಣಿಪಾಲ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ತಾಲೂಕು ವೈದ್ಯಾಧಿಕಾರಿ ಡಾ. ನಾಗರತ್ನ ಶಾಸ್ತ್ರಿ, ಮಕ್ಕಳ ತಜ್ಞ ಡಾ. ಅಮರನಾಥ ಶಾಸ್ತ್ರಿ, ಮಣಿಪಾಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ವಿದ್ಯಾ, ರೋಟರಿ ಸಂಸ್ಥೆಯ ಡಾ. ಸುರೇಶ ಶೆಣೈ, ನಗರಸಭಾ ಸದಸ್ಯರಾದ ಅಶೋಕ್ ನಾಯ್ಕ, ರಾಜು, ಭಾರತೀ ಪ್ರಶಾಂತ್ ಮೊದಲಾದವರಿದ್ದರು.

ಕಾರ್ಯಕ್ರಮ ಸಂಯೋಜಕ ರತ್ನಾಕರ ಇಂದ್ರಾಳಿ ಸ್ವಾಗತಿಸಿ, ಸುಜಲಾ ಸತೀಶ್ ವಂದಿಸಿದರು. ನಗರ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಸರೋಜಾ ಶೆಟ್ಟಿಗಾರ್ ನಿರೂಪಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!